Thursday 5 July 2012

ಸೋಲಿನ ಬಲ


ನೀ ಕುಗ್ಗದಿರು ಕುಂದದಿರು ಸೋಲಲಿ
ಜಯ ನಗುತಿದೆ ಸೋಲಿನ ಸೋಗಲಿ!

ಸೋಲನೆಂದೂ ನೀ ಹಳಿಯದಿರು,
ಸೋತೆನೆಂದೂ ನೀ ಹಲುಬದಿರು.
ಸೋಲು ಕಾವಲು, ಗೆಲುವಿನೆದಿರು
ಬಗ್ಗೀತಾದರೂ ಮುರಿಯದು ಬಿದಿರು!

ಸೋಲಿನ ಉಳಿಪೆಟ್ಟಲಾಗುವೆ ಮೂರ್ತಿ,
ದೂರವಿರದಾಗ ನಿನ್ನ ವಿಜಯದ ಕೀರ್ತಿ.
ಬಾಡದಿರು ನೀ, ಬಂತೆಂದು ಅಪಕೀರ್ತಿ
ಜಯಾಪಜಯ ಚಕ್ರ, ಪ್ರಕೃತಿಯ ನೀತಿ!

ಸೋಲಲರಳುವುದು ಅನುಭವದ ಕಥೆ.
ಅವಕಾಶವಿದೆ, ಉಣಬಡಿಸಲು ವ್ಯಥೆ.
ವಾಸ್ತವ ಮರೆತು ಮೆರೆದ ವೀರಗಾಥೆ!
ಮುಂದೊಮ್ಮೆ ಮಗುಚಲು, ಆತ್ಮಕಥೆ!

ನೆಲ ಕಚ್ಚಿರೆ ಅರಿವೆ, ನೆಲದ ಸುಖವ,
ಹಾರಾಡಿದವ ಬೀಳುವನೆಂಬ ನಿಜವ,
ಗೆಲುವು ಕಲಿಸಬಹುದೇ ಈ ಪಾಠವ?
ಸೋತು ದೊರೆತ ಗೆಲುವೇ ಉತ್ಸವ!


5 comments:

  1. ಹೊಸ ಬ್ಲಾಗ್ ಶುರುಮಾಡಿದ್ದಕ್ಕೆ ಅಭಿನಂದನೆಗಳು. ಸೊಗಸಾದ ಕವನ. ಇನ್ನು ಹೆಚ್ಚೆಚ್ಚು ಬರೆಯಲು ಸಮಯ ಪುಷ್ಕಳವಾಗಿ ಸಿಗಲಿ

    ReplyDelete
  2. ಅನುಭವ ಕಥನವಿದು. ಜೀವನ ಪಾಠ. ಒಳ್ಳೆಯ ರಚನೆ.

    ReplyDelete
  3. ಜೇಡ ಕೆಳಗೆ ಬಿದ್ದು ಎದ್ದು ಮತ್ತೆ ಬಿದ್ದು ಬಲೆಯ ನೇಯ್ವದಂತೆ ನಮ್ಮ ಬದುಕು. ಗುರಿಮುಟ್ಟುವ ತನಕ ನಿಲ್ಲದಿರಲಿ ನಮ್ಮ ಓಟ. ಅರ್ಥಪೂರ್ಣ ಸೊಗಸಾದ ಕವಿತೆ. .

    ReplyDelete
  4. ರಾಜೀವ್, ಪುಷ್ಪರಾಜ್, ಹಾಗೂ ಸತೀಶ್ ಅವರೇ, ತಮ್ಮ ಶ್ಲಾಘನೆಗೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  5. ಅತ್ಯಂತ ಸ್ಪೂರ್ತಿ ತುಂಬಿಸುವ ಕವನ.
    "ಗೆಲುವು ಕಲಿಸಬಹುದೇ ಈ ಪಾಠವ?
    ಸೋತು ದೊರೆತ ಗೆಲುವೇ ಉತ್ಸವ!" ತುಂಬಾ ಅರ್ಥಗರ್ಭಿತ.

    ReplyDelete