Thursday 22 January 2015

ನಾ ವಿಷ ಕನ್ಯೆಯಾ?!


ಹೀಗಲ್ಲವೇ ನಾನು
ಚಿರಪರಿಚಿತಳು ಇತಿಹಾಸದಿ??
ರಕ್ಕಸಿಗೂ ಭೀಕರವಾದ
ವಿಷ ಜಂತುವಾಗಿ?!
ಇಂದಿಲ್ಲಿಹೆನು,
ಜಗಕೆ ಬಿಚ್ಚಿಡಲು,
ಎನ್ನಂತರಾಳದೊಡಲು,
ಮತ್ತಲ್ಲಿ ಹೂತಿಟ್ಟ ಅಳಲು!

ಹದಿಮೂರರ ಹರಯದಿ
ಚಿಗುರಿದ ಮೈಮನವ ಹೊತ್ತು,
ಸೇನಾಧಿಪತಿಯ ತಾಳಿಗೆ
ಹಿಗ್ಗಿ ತಲೆಯೊಡ್ಡಿ,
ನಲಿಯುತ ತೊರೆದೆ
ನಾನೆನ್ನ ತವರನು!
ಎಣೆಯಿತ್ತೇ ಅಂದೆನ್ನ ಸಂತಸಕೆ?!

ಆದರಂದೇ ಸಂಭ್ರಮವೆನ್ನ
ತೊರೆದಿತ್ತೆಂದರಿಯಲು
ಹಿಡಿದದ್ದು ಮಾತ್ರ ಕ್ಷಣಕಾಲ!
ಪತಿಗೆ ನಾ ನಿಕೃಷ್ಟಳು,
ಸತಿ ನಾ ಹೆಸರಿಗೆ ಮಾತ್ರ
ಅವನಿಗವನದೇ ಕಾರುಬಾರು
ಕಂಸನಾಣತಿಯಂತೆ ದರ್ಬಾರು
ಅಂತಃಪುರದಿ ಬರಿ ನನ್ನ ಕಣ್ಣೀರು

ದಿನಗಳೆದಂತೆ ವಿಚಿತ್ರ ನೋವು
ಸಂಕಟ, ಒಡಲುರಿ,
ಅವರ್ಣ್ಯ ವೇದನೆಯೇಕೆಂದರಿಯೆ!
ಕಂಸನ ಅರಿಯ ವೇಶ್ಯೆಯಾಗಿ,
ಅವನಸುನೀಗಿರೆ ಅರಿತೆ,
ನಾನೀಗ ವಿಷಕನ್ಯೆಯೆಂದು!
ನಾನಿಲ್ಲಿ ಕಂಸನ ದಾಳವಷ್ಟೇ,
ಕುತಂತ್ರದ ಅಸ್ತ್ರ ಮಾತ್ರವೆಂದು!
ನನ್ನ ಪತಿಯೆಂಬವ ನನಗಿತ್ತ
ವರ ಮತ್ತು ಪಟ್ಟ ಇದೆಂದು!

ಬಂತದೋ ದೈತ್ಯ ಕಂಸನ ಕರೆ,
ಹೊರಟು, ವಿಷವೂಡಿಸಿ,
ಗೋಕುಲದಲಿಹ ಬಾಲರೆಲ್ಲರ
ಸಂಹಾರಗೈಯ್ಯಲು!
ಒಮ್ಮೆಗೆ ಕಂಡಿರದ
ಹರುಷ ಕಂಡೆನೇ?!
ಕೃಷ್ಣ ಬಂದಿಹನೇ?
ನನ್ನೀ ಪೂತಜನ್ಮಕೆ
ಮಂಗಳ ಹಾಡಲು?!

ಗೋಕುಲದಿ ಬಾಲಕೃಷ್ಣ
ತುಂಟನೋಟ ಬೀರಿ,
ತೊಡೆಯೇರಿ ಸ್ತನ್ಯವ
ಹೀರಿದಾಗಲೇ ತಿಳಿದೆ!
ಸೆಳೆದದ್ದು ಸ್ತನ್ಯವನಲ್ಲ,
ಎನ್ನ ಜೀವಸೆಲೆಯನ್ನು!
ಕ್ಷಣದಿ ನೀಡಿಬಿಟ್ಟನೇ
ನನ್ನೀ ಅಸಹ್ಯ ಜನ್ಮಕೆ
ಮುಕ್ತಿಯನು?! 

ಸದಾ ಹಂಬಲಿಸುತಿದ್ದ
ಮಾತೃತ್ವದೊಂದಿಗೆ
ಸಾರ್ಥಕತೆಯನು?!
 

ಇಂದೇ ತೆರೆಯನೆಳೆದಿರುವೆ,
ನನ್ನೆಲ್ಲ ಕ್ಷೋಭೆಗಳಿಗೆ!
ಅನಂತನಲಿ ಲೀನವಾಗಲು ನಾ,
ವಿಷಕನ್ಯೆಯಾಗಲೇ ಬೇಕಿತ್ತು!!

Friday 9 January 2015

ತುಮುಲ


ಚಡಪಡಿಸುತಿವೆ ಹಾಳೆಗಿಳಿಯಲಕ್ಷರಗಳು
ಪರಿತಪಿಸುತಿವೆ ಅಣೆಗಟ್ಟೊಳ ಭಾವಗಳು
ಧಾರೆಯಾಗಲು ಕಾಯುತಿವೆ ಸಾಲುಗಳು
ಇವೋ ಬಸಿರಾಗಿ ಹಡೆಯದ ಮೋಡಗಳು!

ಪ್ರೀತಿಗೆ ಕಾದು ನಿರಾಸೆಗೊಂಡ ಕ್ಷಣಗಳು
ತಣಿಸದ ತುಂತುರುವಿನ ರಸನಿಮಿಷಗಳು
ದಕ್ಕದ ಗುರಿಯ ಬೆನ್ನಟ್ಟಿದ ಹುಸಿದಿನಗಳು
ಬೆಂದಿವೆ, ನೊಂದಿವೆ ಮನ:ಪಟಲದೊಳು!

ನಾ ಹಿಗ್ಗಿರಲು ಹೊಳೆದ ಅಪ್ಪನ ಕಣ್ಣುಗಳು
ಕುಗ್ಗಿರಲು, ಮುಲಾಮಾದ ಹಿರಿಯ ಕೈಗಳು
ಮೈ ಮರೆತಿರೆ ನೋವಲೆಚ್ಚರಿಸಿದ ಕಾಲ್ಗಳು
ಮೂರ್ತತ್ವ ಬೇಡಿವೆ ಭಾವಪರಿಧಿಯೊಳು!

ಹರಿಹಾಯಲು ಮುಗಿಬೀಳುತಿಹ ಲಹರಿಗಳು
ಎಡೆಕಾಣದೆ ನಾ ಮರುಗಿರೆ ತುಮುಲದೊಳು
ಉತ್ಕಟಕತೆಯೆದುರು ಸೋಲುತಿರೆ ಪದಗಳು
ಭಾವಪ್ರವಾಹವೇ ಏಳಬೇಕಿದೆಯೆದೆಯೊಳು!