Monday, 22 April 2013

ಹಾಯ್ ದುಬೈ-ಮರಳುಗಾಡಿಗೆ ಮರುಳಾದಾಗ!


ಕೆಲಸದಿಂದ ದೂರವಿರುವ ಆಸೆ ಎಂದೂ ಬಾರದಿದ್ದಕ್ಕೋ ಏನೋ ಆರು ದಿನ ಕ್ಲಿನಿಕ್ ಹೋಗದಿರುವ ಚಿಂತೆ ದುಬೈಗೆ ಹೋಗುವುದಕ್ಕಿಂತ ಹೆಚ್ಚಾಗಿತ್ತು.  ನಾನಿಲ್ಲದಿರುವಾಗ ಏನೂ ಸಮಸ್ಯೆಯಾಗದಿರಲು ತಿಂಗಳು ಮುಂಚೆಯೇ ಎಲ್ಲರಿಗೂ ಹೇಳಿ, ಬಾಡಿಗೆ, ಸಂಬಳ, ಬ್ಯಾಂಕ್, ಚೆಕ್ ವ್ಯವಸ್ಥೆಗಳ ಬಗ್ಗೆ ಚಿಂತಿಸುತ್ತಿದ್ದೆನೇ ವಿನಾ ದುಬೈಗೆ ಹೋಗುವ ಸನ್ನದ್ಧತೆಯ ಬಗ್ಗೆ ಸ್ವಲ್ಪವೂ ಗಮನವಿರಲಿಲ್ಲ. ಅಲ್ಲದೇ ಅಲ್ಲಿರುವುದು ನನ್ನ ತಮ್ಮನ ಮನೆಯೇ ಆಗಿರುವುದರಿಂದ ಹೆಚ್ಚಿನ ಸಿದ್ಧತೆ ಬೇಕಿಲ್ಲ ಎಂಬ ಸಮಾಧಾನ ಬೇರೆ. ಅಂತೂ ಗಡಿಬಿಡಿಯಲ್ಲಿ, ಭಾನುವಾರ ಬೆಳಿಗ್ಗೆಯೊಳಗೆ, ಕೆಲ ಬಟ್ಟೆಗಳನ್ನು ತುಂಬಿಸಿ ಹೊರಟೆವು. ದುಬೈಗೆ ಬರೀ ೩ ಘಂಟೆಗಳಲ್ಲಿ ತಲುಪಬಹುದು, ಆದರೆ ನಮ್ಮ ಬೆಂಗಳೂರು ಏರ್ ಪೋರ್ಟ್ ತಲುಪಲು ಏನಿಲ್ಲ ಅಂದರೂ ೨ ಘಂಟೆ ಬೇಕು. ಈಗ ಆನ್ ಲೈನ್ ಚೆಕ್ ಇನ್ ಸೌಲಭ್ಯವಿರುವುದರಿಂದ ಸ್ವಲ್ಪ ನಿರಾಳರಾಗಿ ತಲುಪಿದೆವು. ಸಮಯಕ್ಕೆ ಸರಿಯಾಗಿ ಎಮರಿಟಸ್ ವಿಮಾನ ಹತ್ತಿದೆವು. ಆಹ್ಲಾದಕರ ವಾತಾವರಣ, ಗುಜ಼ಾರಿಶ್ ಸಿನೆಮಾ ಮುಗಿಸುವಷ್ಟರಲ್ಲಿ, ದುಬೈ ಬಂದೇ ಬಿಟ್ಟಿತು.

ಅಲ್ಲಿನ ಏರ್ ಪೋರ್ಟ್ ಟರ್ಮಿನಲ್ ನೋಡುತ್ತಿದ್ದಂತೆಯೇ ಅವರ ಮನೋಭಾವದ ಪರಿಚಯವಾಗತೊಡಗಿತು. ವಿಶಾಲಕ್ಕಿಂತ ವಿಶಾಲ ಜಾಗ, ಬೃಹದಾಕಾರದ ಕಂಬಗಳು, ಕಸದ ನೆರಳೇ ಕಾಣದ ನೆಲ, ಆಗಸದೆತ್ತರಕ್ಕೆದ್ದಿರುವ ಗೋಡೆಗಳು, ಅವುಗಳ ಮೇಲಿಂದ ರಮಣೀಯವಾಗಿ ಹರಿದು ಬರುತ್ತಿರುವ ಕೃತಕ ಜಲಪಾತ. ಇಂತಹ ಜಲಪಾತ ದುಬೈನಲ್ಲಿ ಹಲವೆಡೆ ಕಾಣಲು ಸಿಗುತ್ತದೆ. ಕಡಿಮೆ ನೀರಿನಿಂದ ಬೃಹತ್ ಜಲಪಾತದ ಅನುಭವ ನೀಡುವ ಅತ್ಯದ್ಭುತ ವೈಖರಿಯಿದು. ಆ ಸೌಂದರ್ಯ ಸವಿಯುತ್ತಾ, ಐ ಸ್ಕ್ಯಾನ್ ಮಾಡಿಸುವಷ್ಟರಲ್ಲಿ, ನನ್ನ ಪ್ರೀತಿಯ ನಾದಿನಿ ಕಾಣಿಸಿದಳು. ಮನೆಯೆಡೆಗೆ ಪಯಣಿಸಿದೆವು. ಆ ದಾರಿಯ ಸೊಬಗು ಮೈಮರೆಸುವಂತಿತ್ತು. ಎಲ್ಲಿ ನೋಡಿದರೂ ಎದ್ದು ಕಾಣುತ್ತಿತ್ತು "ವೈಶಾಲ್ಯತೆ". ಜಗತ್ತಿನ ಅತಿ ಎತ್ತರದ ಬುರ್ಜ್ ಖಲೀಫಾ, ಇನ್ನೂ ಹಲವಾರು ದುಬೈನ ಹೆಮ್ಮೆಯ ಗಗನಚುಂಬಿ ಕಟ್ಟಡಗಳು ನಮ್ಮನ್ನು ಸ್ವಾಗತಿಸುವಂತಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಇಂತಹ ಕಟ್ಟಡಗಳು ನಿಂತ ನೆಲ ಬರೀ ಮರಳುಗಾಡು ಎನ್ನುವುದು ನೆನಪಾದಾಗ ಮೈ ಝುಮ್ ಎನ್ನುತ್ತದೆ. ಇನ್ನೊಂದು ಮೋಜಿನ ವಿಷಯವೆಂದರೆ, ಇಡೀ ಊರು ಮಂಜು ಮುಸುಕಿದಂತೆ ಕಾಣುತ್ತಿತ್ತು. ಕಾರೊಳಗಿನ ತಣ್ಣಗಿನ ಏ.ಸಿಯಿಂದಾಗಿ, ಹೊರಗಿರುವುದು ಮುಸುಕಿದ ಹಿಮವೆಂಬ ಭ್ರಮೆಯುಂಟಾಗುವಂತೆ ಮರುಭೂಮಿಯ ಉಸುಕು ಧೂಳೆಬ್ಬಿಸಿತ್ತು! ಆಗಾಗ ಸ್ಯಾಂಡ್ ಸ್ಟಾರ್ಮ್ ಕೂಡಾ ಬರುತ್ತದಂತೆ.
ಕೃತಕ ಜಲಪಾತದ ಮುಂದೆ ನಾನು, ಮಗ, ನಾದಿನಿ
ವಿಮಾನದಲ್ಲೇ ಪುಷ್ಕಳ ಭೋಜನ ಮುಗಿಸಿದ್ದರಿಂದ, ಸ್ವಲ್ಪ ಸುಧಾರಿಸಿಕೊಂಡು, ಜಗತ್ತಿನ ಅತಿ ದೊಡ್ಡ ಮಾಲ್ (ಬೃಹತ್ ಮಾರುಕಟ್ಟೆ) ಆದ "ದುಬೈ ಮಾಲ್"ಗೆ ಹೊರಟೆವು. ಜಗತ್ತಿನ ಅತಿ ಎತ್ತರದ ಕಟ್ಟಡ "ಬುರ್ಜ್ ಖಲೀಫಾ" ದ ಬುನಾದಿಯೇ ಈ ಮಾಲ್. ಖಲೀಫಾದ ಕೊನೆಯವರೆಗೆ ಹೋಗಲು ಇಲ್ಲೇ ಟಿಕೆಟ್ ಪಡೆಯಬೇಕು. ಲಿಫ಼್ಟ್ ನಲ್ಲಿ ಖಲೀಫಾದ ಮೇಲೆ ಹೋಗಿ ಬರಲು ಒಬ್ಬರಿಗೆ ೧೩೦೦ ರೂ. ದುಬಾರಿ ದುಬೈ! ಈ ಮಾಲ್ ನಲ್ಲಿ ಸಿಂಗಪೂರಿನಲ್ಲಿರುವಂತೆ ಅತಿ ದೊಡ್ಡ ಗಾಜಿನ ಮತ್ಸ್ಯಾಗರವಿದೆ. ಗಾಜಿನ ಕವಚದಲ್ಲಿ ನಡೆಯುತ್ತಿದ್ದಂತೆ, ಮತ್ಸ್ಯಜೀವಿಗಳು ನಮ್ಮ ಸುತ್ತಲೂ ವಿಹರಿಸುತ್ತಿರುವ ದೃಶ್ಯ ಅವರ್ಚನೀಯ. ಮರುಭೂಮಿಯಲ್ಲಿ ಊಹಿಸಲಸಾಧ್ಯವಾದ ಹಿಮದ ಸ್ಕೇಟಿಂಗ್ ಸ್ಥಳ ಈ ಮಾಲಿನ ವೈಶಿಷ್ಠ್ಯ. ಮನೋಬಲದ ಮುಂದೆ ಬೇರೇನೂ ಅಲ್ಲ ಎನ್ನುವ ಅದಮ್ಯ ಇಚ್ಛೆ ಎಲ್ಲೆಡೆ ವ್ಯಕ್ತ. ಎಷ್ಟು ನಡೆದರೂ ಮುಗಿಯದ ಮಾಲ್, ಎಲ್ಲೆಲ್ಲೂ ರಂಗು, ಕೋರೈಸುವ ಬೆಳಕು-ಥಳುಕು, ಸಂಭ್ರಮದ ಹೊಳೆ. ಎಲ್ಲೆಲ್ಲೂ ಶಾಪಿಂಗ್ ಮೇನಿಯಾ. ಬೆಳಕಿನಿಂದ ಅಲಂಕೃತಗೊಂಡ ಖಲೀಫಾಗೆ ಸವಾಲು ನೀಡುವಂತಹ ಖಲೀಫಾದ ಎದುರು ಬೆಳಕಿನ ನೃತ್ಯ ಕಾರಂಜಿಯ ಬೆಡಗು ಅವರ್ಣನೀಯ. ಮನದಣಿಯೆ ಆಸ್ವಾದಿಸಿ, ಮನೆಯತ್ತ ತೆರಳಿದೆವು. ಈ ಉಲ್ಲಾಸದ ಬುಗ್ಗೆಗೆ ನಾದಿನಿಯ ರುಚಿಯಾದ ಕೈಯಡುಗೆ ಮಕುಟಪ್ರಾಯವಾಗಿತ್ತು. ಸ್ವಪ್ನಲೋಕದಿಂದ ಎಂದು ನಿದ್ರಾದೇವಿ ಆವರಿಸಿದಳೋ ತಿಳಿಯಲೇ ಇಲ್ಲ.

ಮರುದಿನ ತಿಂಡಿ ಮುಗಿಸಿ, ಮತ್ತೆ ದುಬೈ ಮಾಲ್ ಗೆ ಬಂದೆವು. ನನ್ನ ಮಗ ಹಿಮದ ಸ್ಕೇಟಿಂಗ್ ಮೊದಲಬಾರಿಗೆ ಮಾಡುತ್ತಿದ್ದರೂ, ಎದೆಗುಂದದೆ, ಅದರ ಸಂತೋಷವನ್ನು ಸವಿಯುತ್ತಿರಲು, ನಾನು ಶಾಪಿಂಗ್ ಕಡೆ ಗಮನ ಹರಿಸಿದೆ. ಎಷ್ಟಾದರೂ ದುಬೈ ಶಾಪಿಂಗ್ ಸ್ವರ್ಗವಲ್ಲವೇ?! ಜಗದ್ವಿಖ್ಯಾತ ಬ್ರಾಂಡ್ ಗಳನ್ನು ನೋಡುತ್ತಾ, ಇದು ನಮ್ಮಲ್ಲಿದೆ, ಇದಿಲ್ಲ ಎಂಬ ವಿಶ್ಲೇಷಣೆಯಲ್ಲಿ ಎರಡು ಘಂಟೆ ಕಳೆದದ್ದೇ ತಿಳಿಯಲಿಲ್ಲ. ಬುರ್ಜ್ ಖಲೀಫಾ ಹತ್ತುವ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದೆವು. ಅದರ ಲಿಫ್ಟಿಗೆ ಹೋಗುವ ದಾರಿಯಲ್ಲಿ, ಅದನ್ನು ಕಟ್ಟಿದ ಪ್ರಕ್ರಿಯೆಯ ವಿಹಂಗಮ ಪರಿಚಯ ಅವಲೋಕಿಸಿದಾಗ ಮೈ ನವಿರೆದ್ದಿತು. ಮಾನವಶಕ್ತಿಗೆ ತಲೆಬಾಗಿತು. ಲಿಫ್ಟಿನ ಒಳಗೆ ನಿಂತ ಒಂದೇ ನಿಮಿಷದಲ್ಲಿ ೧೪೫ನೇ ಮಹಡಿಗೆ ಕಾಲಿಟ್ಟೆವು! ನಮ್ಮಲ್ಲಿನ ಲಿಫ್ಟ್ ದುರಂತಗಳ ನೆನಪಿನಿಂದ ಕ್ಷಣಕಾಲ ಮನ ಮರುಗಿತು. ಮೇಲಿಂದ ಕೆಳಗೆ ನೋಡಿದಾಗ ಆಟದ ಹಾಟ್ ವೀಲ್ಸ್ ಕಾರುಗಳ ದಾರಿಗಳು ನೆನಪಾಗುವಂತಿತ್ತು. ಈ ಕಟ್ಟಡದ ಕೊನೆಯ ೪೦ ಮಹಡಿಗಳಿಗೆ ಜನರಿಗೆ ಪ್ರವೇಶವಿಲ್ಲ. ಮೇಲಿಂದ ದುಬೈನ ಪಕ್ಷಿನೋಟ ಅತ್ಯದ್ಭುತ. ಆ ಅಗಾಧತೆ ಮನದಾಳಕ್ಕಿಳಿದಿತ್ತು. ಅದೇ ಮಾಲಲ್ಲಿದ್ದ ಕ್ಯಾಲಿಫ಼ೊರ್ನಿಯಾ ಪಿಜ಼ಾದಲ್ಲಿ ಊಟ ಮಾಡಿ, ನಾದಿನಿ ಹೇಳಿದಂತೆ ಪಾಮ್ ಜುಮೇರಾ ನೋಡಲು ಹೊರಟೆವು.
ಖಲೀಫಾದ ತುದಿಯಲ್ಲಿ ನನ್ನ ಪತಿಯೊಂದಿಗೆಪಾಮ್ ಜುಮೇರಾ ಒಂದು ಕೃತಕವಾಗಿ, ಈಚಲು ಮರದ ಆಕೃತಿಯಲ್ಲಿ ಕಟ್ಟಲಾದ ಐಶಾರಾಮದ ಪ್ರದರ್ಶಕ ದ್ವೀಪ! ಇದನ್ನು ಕಟ್ಟಲು ೯೪೦,೦೦,೦೦೦ ಕ್ಯು.ಮೀ ಮರಳು ಹಾಗೂ ೭ ಮಿಲಿಯನ್ ಟನ್ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಇದರ ಮೇಲೆ ಬೃಹದಾಕಾರದ ಭವನಗಳು, ಅತ್ಯಾಧುನಿಕ ರಸ್ತೆಗಳು, ಹೋಟೆಲುಗಳು, ಸುರಂಗಗಳು ಇತ್ಯಾದಿಗಳನ್ನು ಕಟ್ಟಿದ್ದಾರೆ. ಎಲ್ಲದರ ತಳ ಕೃತಕ ಮರಳಿನ ನೆಲ! ನಿರ್ಮಾಣದ ಪರಾಕಾಷ್ಟತೆಯೇ ಸರಿ. ಇಲ್ಲಿ ಶಾರೂಕ್ ಖಾನ್, ಟಾಮ್ ಕ್ರುಯಿಸ್ ರವರ ಮನೆಗಳೂ ಇವೆಯಂತೆ. ಇದು ಜಗತ್ತಿನ ಅತ್ಯಂತ ದೊಡ್ಡ ಕೃತಕ ದ್ವೀಪ. ಇದರ ವೆಚ್ಚ ಸುಮಾರು ೧೨.೩ ಬಿಲಿಯನ್ ಡಾಲರು. ಆದರೆ ಜಾಗತಿಕ ಆರ್ಥಿಕ ಕುಸಿತದಿಂದ ಹಲವಾರು ಭವನಗಳು ಖಾಲಿಬಿದ್ದಿವೆ. ಅಲ್ಲದೇ ನೆಲ ಕೂಡ ಸ್ವಲ್ಪ ಕುಸಿದಿದೆ ಎಂದು ಸುದ್ದಿ. ವಿಮಾನದಿಂದ ನೋಡಿದಾಗ ಬೃಹತ್ ಈಚಲು ಮರದ ಆಕಾರವನ್ನು ಅರ್ಥೈಸಬಹುದು. ಇಲ್ಲಿರುವ ಪಾಮ್ ಅಟ್ಲಾಂಟಿಸ್ ಅತಿದೊಡ್ಡ ಹೋಟೆಲ್. ಜೈಪುರದ ಹವಾಮಹಲ್ ಇದರ ಆಕಾರಕ್ಕೆ ಪ್ರೇರೇಪಣೆಯೇನೋ ಎಂಬ ಅನುಮಾನ ಬರುತ್ತದೆ!
ಪಾಮ್ ಜುಮೇರಾದಲ್ಲಿ ನಾದಿನಿ ಜೊತೆ
ಅಂತೂ ಮಾನವನ ಇನ್ನೊಂದು ನಿರ್ಮಾಣ ಪ್ರಾವಿಣ್ಯತೆಯ ಸಂದರ್ಶನ ಮುಗಿಸಿ ಮನೆಯತ್ತ ತೆರಳಿದೆವು. ಮರುದಿನ ನಗರದರ್ಶನ ಹಾಗೂ ಮರುಭೂಮಿ ಪ್ರಯಾಣ ಏರ್ಪಡಿಸಲಾಗಿತ್ತು. ಪಕ್ಕದಲ್ಲೇ ಇದ್ದ "ಅಪ್ಪ-ಚೆಟ್ಟಿನಾಡ್" ಹೋಟೆಲಿನ ರುಚಿಯಾದ ಅಪ್ಪದ ಭೋಜನ ಮುಗಿಸಿ, ಪ್ರೀತಿಯ ಟಾಬಿ(ಸಾಕುನಾಯಿ)ಯೊಂದಿಗೆ ಆಟವಾಡಿ ದಿನಕ್ಕಂತ್ಯವ ಹಾಡಿದೆವು.

ಮಾರನೇ ದಿನ ಬೆಳಿಗ್ಗೆ ೯ ಘಂಟೆಗೆ ಸರಿಯಾಗಿ ಪ್ರವಾಸ ವಾಹನದಲ್ಲಿ ನಗರ ದರ್ಶನ ಆರಂಭವಾಯಿತು. ಮಾರ್ಗದರ್ಶಿಯು, ಮುರುಕಲು ಆಂಗ್ಲ ಭಾಷೆಯಲ್ಲಿ ದುಬೈ ಇತಿಹಾಸ ಬಣ್ಣಿಸಿದ. ಏಳು ದೇಶಗಳ ಒಕ್ಕೂಟದ ಹೆಸರು ಸಂಯುಕ್ತ ಅರಬ್ ಒಕ್ಕೂಟ (ಯುನೈಟೆಡ್ ಅರಬ್ ಎಮರಿಟಸ್ (ಯು.ಏ.ಇ)). ಇದರ ಆರ್ಥಿಕ ರಾಜಧಾನಿ ದುಬೈ. ಹಿಂದಿಯ "ದೋ ಭಾಯಿ" (ಇಬ್ಬರು ಸಹೋದರರು) ಎಂಬ ಪದಾರ್ಥವಾಗಿ ದುಬೈ ಹುಟ್ಟಿತಂತೆ! ೧೯೫೮ರಲ್ಲಿ ಅಬುದಾಬಿಯಲ್ಲಿ ದೊರಕಿದ ಪೆಟ್ರೋಲ್ ಮರುಭೂಮಿಯಾಗಿದ್ದ ಯು.ಏ.ಇಯ ರೂಪವನ್ನು ಬದಲಾಯಿಸಿತು. ದುಬೈ ವ್ಯಾಪಾರ ಕೇಂದ್ರವಾಯಿತು. ಹಿಂದಿನ ರಾಜ ಶೇಕ್ ಜ಼ಾಯಿದ್ ಹಾಗೂ ಈಗಿನ ರಾಜ ಮಕ್ತೌಮ್ ದುಬೈನ ಅತ್ಯುನ್ನತ ಬೆಳವಣಿಗೆಯ ಕನಸು ಕಂಡರು. ನನಸಾಗಿಸುವಲ್ಲಿ ಪಣತೊಟ್ಟು ದುಬೈಗೆ ಈ ರೂಪ ತಂದರು. ಆದರೂ ಜಾಗತಿಕ ಆರ್ಥಿಕ ಕುಸಿತದಿಂದ ಈಗ ಸ್ವಲ್ಪ ತತ್ತರಿಸಿದೆ. ದುಬೈಗೆ ಪುರಾತನ ಇತಿಹಾಸವೇನೂ ಇಲ್ಲದಿರುವುದರಿಂದಲೋ ಏನೋ, ತದನಂತರ ನಮ್ಮ ಮಾರ್ಗದರ್ಶಿ ಕೇವಲ ಸಾರಿಗೆದಂಡಗಳ ಬಗ್ಗೆಯೇ ಪ್ರವಚನ ಕೈಗೊಂಡ!

ಪ್ರಸಿದ್ಧವಾದ ಜುಮೇರಾ ಮಸೀದಿ, ಜಾಗತಿಕ ಸಾಂಸ್ಕೃತಿಕ ಕೇಂದ್ರ, ಇತ್ಯಾದಿಗಳ ದರ್ಶನ ನೀಡಿ, ಜಗತ್ಪ್ರಸಿದ್ಧ ೭ ಸ್ಟಾರ್ ಹೋಟೆಲ್ ಆದ ಬುರ್ಜ್-ಆಲ್-ಅರಬ್ ಎದುರು ಕ್ಯಾಮೆರಾಗೆ ಕೆಲಸ ನೀಡಲು ನಿರ್ದೇಶಿಸಿದನು. ದೋಣಿಯಾಕೃತಿಯಲ್ಲಿರುವ ಈ ಕಟ್ಟಡವೂ ದುಬೈನ ಹೆಮ್ಮೆಯ ನಿದರ್ಶನ. ಸಮುದ್ರದ ತಿಳಿನೀಲಿಯ ನೀರಿನ ಸೌಂದರ್ಯ ಬಿಳಿ ಬಣ್ಣದ ಹೋಟೆಲಿಗೆ ಇನ್ನಷ್ಟು ಮೆರುಗು ನೀಡುತ್ತಿತ್ತು. ನಾವೂ ಅಲ್ಲಿನ ಕೆಲ ನೆನಪುಗಳನ್ನು ಕ್ಯಾಮೆರಾದೊಳಗೆ ಹಿಡಿದಿಟ್ಟೆವು.
ಬುರ್ಜ್ ಆಲ್ ಅರಬ್ ಮುಂದೆ ಪತಿ, ಮಗ
ಕೊನೆಯದಾಗಿ ನಮ್ಮನ್ನು "ಗೊಲ್ಡ್ ಸೂಕ್" ಅರ್ಥಾತ್ ಚಿನ್ನದ ಮಳಿಗೆಗೆ ಕರೆದೊಯ್ಯಲಾಯಿತು. ಇಲ್ಲಿ ದಮಾಸ್ ಮುಂತಾದ ಅನೇಕ ಚಿನ್ನದಂಗಡಿಗಳ ವಿಶೇಷ ಹಾಗೂ ಅತ್ಯಾಧುನಿಕ ಶೈಲಿಯ ಆಭರಣಗಳು ಜಗತ್ತನ್ನೇ ಆಕರ್ಶಿಸುವಂಥದ್ದು.  ಇವುಗಳ ಸೆಳೆತ ಸ್ವಲ್ಪ ಕಮ್ಮಿಯಿರುವುದರಿಂದಲೋ ಏನೋ ಅಲ್ಲಿ ಹೋಗದೆ, ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ಲಿನಲ್ಲಿ  ಉದರಪೂಜೆ ಮುಗಿಸಿದೆವು. ಮಧ್ಯಾಹ್ನ ಮರುಭೂಮಿ ಸವಾರಿಗೆ ಸಿದ್ಧರಾಗಿರಲು ಹೇಳಿ ನಮ್ಮನ್ನು ಹಿಂತಿರುಗಿ ಮನೆಗೆ ಬಿಡಲಾಯಿತು. ಈ ತರಾತುರಿಯಲ್ಲಿ ಪ್ರವಾಸ ಕಛೇರಿಯವರ ವೆಬ್ಸೈಟ್ ತಿಳಿಸಿದಂತೆ, ದೌ ಎನ್ನುವ ಪಾರಂಪರಿಕ ದೋಣಿವಿಹಾರಕ್ಕೆ ನಮ್ಮನ್ನು ಕರೆದೊಯ್ಯಲೇ ಇಲ್ಲ. ಇದರ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಾಗ, ಕ್ಷಮೆಯಾಚನೆಯೊಂದಿಗೆ, ಸಂಜೆಯ ಮರುಗಾಡಿಗೆ ವಿಶೇಷ ವಾಹನದ ಏರ್ಪಾಟು ಮಾಡಿದರು. ಇದರ ಅವಶ್ಯಕತೆಯ ಅರಿವಾದದ್ದು ಸ್ಯಾಂಡ್ ಡ್ಯೂನ್ ಬ್ಯಾಶಿಂಗ್ ನಲ್ಲಿಯೇ! ಅಲ್ಲದೇ ನಾವಾಗಿಯೇ ನಂತರ ದೌ ದೋಣಿಯನ್ನು ನೋಡಿದೆವು. ಇದು ಕೇರಳದ ಬೋಟ್ ಹೌಸ್ ಮಾದರಿಯಂತೆ ಪಾರಂಪರಿಕ ದೋಣಿಯಲ್ಲಿ ವಿಹಾರ ಹಾಗೂ ಊಟ ಮಾಡುವ ಒಂದು ಸಂಭ್ರಮ.

ಸಂಜೆ ನಮ್ಮನ್ನು ಒಳ್ಳೆಯ ವಾಹನದಲ್ಲಿ ಸಾಧಾರಣ ನೂರು ಕಿ.ಮೀ ದೂರದ ಮರುಭೂಮಿ ಪ್ರದೇಶಕ್ಕೆ ಅರಬ್ ಚಾಲಕ ಕರೆದೊಯ್ದನು. ಪೆಟ್ರೋಲಿಗೆ ಬರೀ ೧೫ ರೂಪಾಯಿಯಷ್ಟೇ! ಊರಿಂದ ದೂರವಾಗುತ್ತಿದ್ದಂತೆ, ಮರಳಿನ ಬಣ್ಣ ಬದಲಾಗುತ್ತಿರುವುದು ಗೋಚರವಾಯಿತು. ಮೈಬಣ್ಣದಿಂದ, ತಿಳಿಕೇಸರಿ ಬಣ್ಣಕ್ಕೆ ತಿರುಗಿತು. ಬಣ್ಣವಷ್ಟೇ ಅಲ್ಲ, ಮರಳಿನ ರೂಪರಚನೆ ಹಾಗೂ ಸಾಂದ್ರತೆಯಲ್ಲೂ ವ್ಯತ್ಯಾಸ ಸ್ಪಷ್ಟವಾಗಿತ್ತು. ಆ ಮರಳನ್ನು ಕಾಲಿನಿಂದ ಝಾಡಿಸಿದಾಗ ಅದು ನೀರಿನಂತೆ ಹರಿಯುವ ಪ್ರಕ್ರಿಯೆ ನಿಜಕ್ಕೂ ವಿಸ್ಮಯಕರ! ಬರಡಾದ ಮರಳುಗಾಡೂ ಅವಿಸ್ಮರಣೀಯ ಸೌಂದರ್ಯ ಹೊತ್ತಿದೆ ಎನ್ನುವುದರ ಅರಿವಾಯಿತು. ಈಗ ಶುರುವಾಯಿತು, ನನ್ನ ಮಗನ ಪ್ರಿಯವಾದ, ಹೆಚ್ಚಿನವರಿಗೆ ಹೊಟ್ಟೆ ತೊಳಸುವ "ಡ್ಯೂನ್ ಬ್ಯಾಶಿಂಗ್" ಅರ್ಥಾತ್ ಮರಳು ದಿಣ್ಣೆಗಳ ಮೇಲೆ ರಭಸವಾಗಿ ಅಡ್ಡಾದಿಡ್ಡಿ ಜೀಪುಗಳನ್ನು ಓಡಿಸುವುದು. ಈ ರೀತಿ ಓಡಿಸುವುದರಲ್ಲಿ ಅರಬ್ ಚಾಲಕರು ಪರಿಣತರಂತೆ ಹಾಗೂ ಇದಕ್ಕೆ ವಿಶೇಷ ಪರವಾನಿಗೆಯ ಅಗತ್ಯವಿದೆ. ನಮ್ಮ ಕುಟುಂಬಕ್ಕೊಂದು ವಾಹನವಿದ್ದದ್ದರಿಂದ ಸುಮಾರು ಒಂದು ಘಂಟೆಯ ಈ  ಸಾಹಸ ಸುಗಮವಾಯಿತು. ಕೆಲವು ಪ್ರವಾಸಿಗಳಿಗೆ ವಾಂತಿಯುಂಟಾಗಿ ಸುಮಾರು ವಾಹನಗಳು ಮಧ್ಯೆ ನಿಲ್ಲಿಸಿದ್ದವು. ರಾಜಸ್ಥಾನದಲ್ಲೂ ಈ ರೀತಿ ಮಾಡುವರೆಂದು ಕೇಳ್ಪಟ್ಟಿರುವೆ.
ಇದರ ನಂತರ ಒಂಟೆ ಸವಾರಿ, ಅರಬ್ಬೀ ಖರ್ಜೂರದ ಕಾಫಿಯಾದ ಖಾವಾದ ಜೊತೆ ಖರ್ಜೂರದ ಆಸ್ವಾದನೆ, ಅತ್ಯದ್ಭುತ ತಂದೂರನೃತ್ಯ ಹಾಗೂ ಉದರನೃತ್ಯ (ಬೆಲ್ಲಿ ಡ್ಯಾನ್ಸ್) ನೋಡುತ್ತಾ ಭೂರಿ ಭೋಜನ ಸವಿದು, ರಾತ್ರಿ ಮನೆಗೆ ತೆರಳಿದೆವು. ಕಾರಿನಿಂದ ರಾಜರ, ರಾಣಿಯರ ಅರಮನೆಗಳನ್ನು ಚಾಲಕ ತೋರಿಸುತ್ತಿದ್ದಾಗ, ದೇಶದ ಜನತೆಗೆ ಇಷ್ಟು ಸುಸಂಸ್ಕೃತ, ಸುವ್ಯವಸ್ಥಿತ ಹಾಗೂ ಸಮೃದ್ಧ ವ್ಯವಸ್ಥೆಯನ್ನು ಕಲ್ಪಿಸಿದವರು ತಮಗಾಗಿ ಎಷ್ಟು ಮಾಡಿಕೊಂಡರೇನು ತಪ್ಪು ಎಂಬ ವ್ಯಂಗ್ಯ ಮನದಲ್ಲಿ ಬಂತು!

ಮರುದಿನ, ದುಬೈನ ಇನ್ನೊಂದು ದೊಡ್ಡ ಮಾಲಾದ "ಮಾಲ್ ಒಫ಼್ ಎಮರಿಟಸ್" ಭೇಟಿ. ಇಲ್ಲಿನ ಆಕರ್ಷಣೆಯಾದ "ಹಿಮವನ"ದಲ್ಲಿ "ಹೊಸ ಅನುಭವ. ಇಲ್ಲೇ ಇದ್ದ ಸ್ಕೀಯಿಂಗ್ ಅಕಾಡೆಮಿಯಲ್ಲಿ ನನ್ನ ಮಗ ೪-೫ ತರಗತಿಗಳನ್ನು ಅಭ್ಯಸಿಸಿದ. ಈ ಮಾಲ್ ನಲ್ಲಿ ದುಬೈನ ಪ್ರಖ್ಯಾತ "ಕ್ಯಾರಿಫ಼ೋರ್" ಎನ್ನುವ ಬಿಗ್ ಬಜಾರ್ ನಂಥಹದ್ದಿದೆ. ಇಲ್ಲಿ ಉತ್ತಮ ಚಾಕೋಲೇಟ್ ಗಳು, ವಿವಿಧ ರೀತಿಯ ಖರ್ಜೂರಗಳು ವಿಶೇಷ ದರದಲ್ಲಿ ಸಿಗುವುದು. ಎಲ್ಲಾ ರೀತಿಯ ಶಾಪಿಂಗ್, ಊಟ ಮುಗಿಸಿ ಮರುದಿನ ಭಾರತ ಹಿಂದಿರುಗುವ ಸನ್ನದ್ಧತೆಗಳನ್ನು ಮಾಡಿಕೊಂಡೆವು. ಬೆಳಿಗ್ಗೆ ದುಬೈಗೆ ಬಾಯ್ ಬಾಯ್ ಹೇಳಿ ಬೆಂಗಳೂರಿಗೆ ಬಂದಿಳಿದೆವು. ಆಶ್ಚರ್ಯವೆಂದರೆ, ನಿಗದಿತ ಸಮಯಕ್ಕಿಂತ ಅರ್ಧ ಘಂಟೆ ಬೇಗ ಬಂದಿದ್ದೆವು! ೫ ದಿವಸದಲ್ಲಿ ಕಂಡಿರದ ಜನಜಂಗುಳಿ ಮನಸ್ಸು ಕಸಿವಿಸಿಗೊಳಿಸಿದರೂ ಸುತ್ತಲಿನ ಹಸಿರು ಆಹ್ಲಾದಕರವಾಗಿತ್ತು. ನಮ್ಮ ಮನೆಯವರೆಗಿನ ೩೦ ಕಿ.ಮೀ ಕ್ರಮಿಸಲು ಮೂರು ಘಂಟೆ ತೆಗೆದುಕೊಂಡೆವು! ನೂಕು ನುಗ್ಗಲು, ಅಗೆದ ರಸ್ತೆಗಳು, ಹಳಿತಪ್ಪಿದ ವ್ಯವಸ್ಥೆಗಳನ್ನು ನೋಡುತ್ತಿರುವಾಗ ಭಾರತ ಅಕ್ಷರಶ: ಮಹಾನ್ (ದೊಡ್ಡದು) ಆಗಿರುವುದರಿಂದಲೇ ಹೀಗೇನೋ ಎನ್ನಿಸಿತು. ದುಬೈನ ಹತ್ತು ಲಕ್ಷ ಜನವೆಲ್ಲಿ, ನಮ್ಮ ನೂರಿಪ್ಪತ್ತು ಕೋಟಿಯೆಲ್ಲಿ!