Thursday 31 July 2014

ರಸಸಂಜೆ


ಕರಿಮುಗಿಲ ತೆರೆಯಿಂದ
ಇಣುಕುವಾ ರವಿಯಿಂದು
ಜರತಾರಿ ಸೀರೆಯನು ನೇಯುತಿಹನು
ಸಂಜೆಯಲಿ ನಡೆಯುತಿಹ
ಕುಸುರಿ ಕೆಲಸವ ನೋಡಿ
ಸಂತಸದಿ ಭೂತಾಯಿ ನಲಿಯುತಿಹಳು

ಶ್ರಾವಣದ ಜಿನುಗಿನಲಿ
ಪನ್ನೀರ ಹನಿಹೊತ್ತು
ಅವನಿ ತಾ ಹಸಿರಾಗಿ ಹಾಡುತಿಹಳು
ಹಸಿರೆಲೆಯ ತೂಗಿಸುವ
ತನುಮನವ ಕಂಪಿಸುವ
ತಂಬೆಲರು ಹಿನ್ನೆಲೆಯ ನುಡಿಸುತಿಹುದು

ಕಳೆದ ರಸಸಂಜೆಗಳ
ನೆನಪುಗಳು ಮರುಕಳಿಸಿ
ಮಧುರತೆಯಲೀ ಜೀವ ತೇಲುತಿಹುದು
ನಿನ್ನೊಲವಿನಾಸರೆಯ
ನೆಲೆಯ ಬೇಡುತ ಮನವು
ಸುಂದರ ನಿಶೆಯಮಲಲಿ ಕರಗುತಿಹುದು

Tuesday 29 July 2014

ನಕ್ಕು ಬಿಡಲೇ?! ಅತ್ತು ಕರೆಯಲೇ?!


ಒಲವಿನ ಮರಳ ಮನೆ ತನ್ನದೆಂದು ಮರುಳಾದೆ
ನಿಮಿಷದಲದು ಅಲೆಯೊಂದಿಗೆ ಸೇರೆ ಕ್ಷುಬ್ಧಳಾದೆ

ಮರುಗಾಡ ಬಿರುಬಿಸಿಲಲಿ ಹಸಿರಿನ ಹಿಂದೋಡಿದೆ
ಬರಿದೆ ಓಡಿಸುತಿರೆ ಮರೀಚಿಕೆಯೆಂದರಿತು ಕುಸಿದೆ

ಸಾಗರದಿ ಆಣಿಮುತ್ತ ಹುಡುಕಲಣಿಯಾಗಿ ನಡೆದೆ,
ಹೆದರಿಸಿದ ತಿಮಿಂಗಿಲವ ಕಂಡು ಆಸೆಯ ತೊರೆದೆ

ಬಿಳಿಬಾನಲಿ ಮಳೆಬಿಲ್ಲ ಬಣ್ಣ ಕಂಡೀತೆಂದು ಕುಳಿತೆ
ಪ್ರೀತಿಬಿಸಿಲ ತುಂತುರಲಿ ಮಾತ್ರವದೆಂದು ಮರೆತೆ

ಅಲ್ಲಿರದ ಭಾವಗಳನು ಹುಡುಕುತ್ತಾ ನಿರಾಶಳಾದೆ
ಕಂಡ ಆಭಾಸಗಳನು ನೆಚ್ಚಿಕೊಂಡೇ ಹತಾಶಳಾದೆ

ಕಸಿವಿಸಿಯ ಕಹಿ, ಬುದ್ಧಿಮತ್ತನಂತೆ ಮೆರೆದ ಮನಕೆ
ನೆಲ ಕಚ್ಚಿದರೂ ಸೋಲೊಪ್ಪಲು ಬಯಸದ ಬಯಕೆ

ಬಿಗಿದ ಕದವ ಬಡಿದಿದ್ದೆಂದು ನಕ್ಕು ಹಗುರಾಗಲಾರೆ
ಬರಡು ಮನಕೆ ಬಿಚ್ಚಿಟ್ಟೆನೆಂದು ಬಿಕ್ಕಿ ಮರೆಯಲಾರೆ

Thursday 24 July 2014

ನಾನೆಂತು ಮರೆಯಲಿ?!



ನಾ ನಿನ್ನ ಕೇಳಲಾರೆ ನನ್ನ ನೆನಪಿದೆಯೇ ಎಂದು
ನೆನಪಿದ್ದೂ ಮಾತಾಡದಿರುವ ಮನಸಲ್ಲ ನಿಂದು!

ನಾ ನಿನ್ನ ಮನದಲಿಲ್ಲ ಎಂಬ ಕೊರಗಿಲ್ಲ ನನಗೆ,
ಯಾಚಿಸಲು ಪ್ರೀತಿ ಭಿಕ್ಷೆಯಲ್ಲ ಗೊತ್ತದು ನಿನಗೆ!

ನನ್ನೆದೆಯಲಿ ನಿನ್ನ ಕಟ್ಟಿಹಾಕಿ ಗೋಗರೆಯಲಾರೆ,
ಒಲವು ಬಂಧವಲ್ಲವೆಂಬುದ ನಾ ಮರೆಯಲಾರೆ!

ನನ್ನ ಮರೆತು ಬದುಕುವ ಹಕ್ಕೆಂದಿಗೂ ನಿನಗಿದೆ.
ನಿನ್ನ ಪ್ರೇಮದ ಕಂಪು ನನ್ನಲಿನ್ನೂ ಹಸಿಯಾಗಿದೆ!

Tuesday 22 July 2014

ಸಂತನಾಗು ಸಂತೆಯಲಿ!



ಭಾವಸಂತೆಯಲಿ ಭಾವ ಬಿಕರಿಯ ಅಹವಾಲು
ಬಿರುಸಲಿ ನಡೆದರೂ ಇಹರಾರೂ ಖರೀದಿಸಲು
ಕಾದಿಹರಿಲ್ಲಿ ತಂತಮ್ಮ ನೋವ ಮಾರಿಕೊಳಲು
ಆಸೆ, ಸಿಗುವುದೇ ಹೆಗಲೊಂದು ತಲೆಯಿಡಲು!

ಸುಖಾಸುಮ್ಮನೆ ಆಗದಿರು ನೀ ಬಟ್ಟಂಬಯಲು,
ನಗೆವಸ್ತುವಾಗದಿರು, ಹೇಳಿ ಎಲ್ಲೆಡೆ ನಿನ್ನಳಲು
ಬರಿದೆ ಕಾಯುತಿಹರು ನೀ ಹೇಳಿ ಮುಗಿಸಲು,
ತಲೆ ಸವರುವ ಮುನ್ನ ತಮ್ಮೊಡಲ ಬಿಚ್ಚಿಡಲು!

ಹಾಳೆಗೆ ಹಾಯಿಸು ಎದೆಕಟ್ಟೊಡೆದು ಹರಿಯಲು
ಭಾವಪಾತಕೆ ಮೆಚ್ಚುಗೆ ಚಪ್ಪಾಳೆ ಖಚಿತವಿರಲು,
ಹಂಚಿ ಹರಿಸುವುದೇತಕೆ, ತೃಷೆಯೇ ಇರದಿರಲು.

ಇರಲೆಂದೂ ನಿನ್ನೆವೆಯಾರ್ದ್ರತೆ ನಿನ್ನದೇ ಪಾಲು!

ಪಶುವ ನೋಡಿ ತಿಳಿ ಮೌನದಿ ನೋವ ಮೆಲ್ಲಲು
ಹಕ್ಕಿಯಂತೆ ಗಾಳಿಯಲಿ ಕಣ್ಣಾಲಿಯನೊಣಗಿಸಲು
ಬಿಕ್ಕಿ ಅಳಲ ತೊಳೆದು ತೊಡಗು ನಗು ಹರಡಲು,
ಚಿಪ್ಪೊಳು ಸ್ವಾತಿಮುತ್ತಾಗಲಿ ಜತೆ ಸೇರಿ ಮಳಲು!

Tuesday 8 July 2014

ಅಂತರಂಗದ ಸಂಗ!


ಸುತ್ತ ಕಿಕ್ಕಿರಿದಿರೆ ಬೇಡವೆಂಬಾಗ,
ಸನಿಹವಾರು ಇಲ್ಲ ಬೇಕೆನ್ನುವಾಗ
ಹಗಲಿರುಳು ಕಳೆಯುತಿರೆ ಸರಾಗ
ಒಂಟಿಯಾಗಿದೆಯೆನ್ನ ಮೌನರಾಗ

ಒಳದನಿ ಕುಗ್ಗಿ ಅಡಗುತಿರುವಾಗ
ಛಂಗನೆದುರು ಹಾರಿದೆ ನೀನಾಗ!
ಬೆರಗಾಗಿ ಅರೆಕ್ಷಣ ನೋಡಲಾಗ,
ನನ ರೂಪ ನೀ ತಾಳಿ ನಲಿವಾಗ!

ಈ ಮುನಿಸನರಿಯಬಲ್ಲೆ ನಾನೀಗ
ಮರೆತಿದ್ದೆ ನಾ ಸುಖದಿ ಮೆರೆದಾಗ
ನಿನ್ನ ನೆನಪಿಲ್ಲ ಕೊರಗಿ ಬಿಕ್ಕುವಾಗ
ಬಳಿಯೇ ನಿಂದು ಸವರಿದ್ದೆಯಾಗ!

ಅರಿತೆನಿಂದು ಅಂತರಾತ್ಮದ ಕೂಗ,
ಕ್ಷಣಿಕ, ಚಿರವಲ್ಲ ಜಗದಿ ಅನುರಾಗ,
ನನಗೆ ನಾನೇ ಅಂತರಂಗದ ಸಂಗ,
ಭವಸಾಗರವ ದಾಟಿಸುವ ಅಂಬಿಗ!

Wednesday 2 July 2014

ಭಲೇ ಬದುಕು!


ಮತ್ತದೇ ಜತನ, ಅದೇ ದಿನದಾಗುಹೋಗು
ನೋವ ಮಾಚಿಟ್ಟು ನಗುವ ಮೆರೆವ ಸೋಗು
ಬೇಕುಗಳ ಬಿಟ್ಟು ಬೇರೆಲ್ಲ ದೊರೆತ ಕೊರಗು
ಬೇಕುಗಳಿಗೆ ಸತತ ತುಡಿವ ಪರಿಯ ಬೆರಗು!

ಎದ್ದೆ ಎನ್ನುವಷ್ಟರಲಿ ಮತ್ತೊಂದು ಮೊಟಕು,
ಬೆರೆಯುವ ಮುನ್ನವೇ ಬೇರಾಗುವ ಅಳುಕು
ಕಂಡೊಡನೆ ಮಿಂಚಿ ಮರೆಯಾಗುವ ಬೆಳಕು
ಬೀಗಿಸಿ ಬೀಳಿಸಿ ಅಳಿಸಿ ತಾ ನಗುವ ಬದುಕು!

ಎಡವಿಸಲೆಂದೇ ಕಾಯುವ ಸೆಳೆತದ ಬುರುಗು
ದಿನವೂ ಕಣ್ಣು-ಮುಚ್ಚಾಲೆಯಾಟದ ಸೊಬಗು!
ಅನತಿ ದೂರದಲಿ, ಮಾಯಾಜಿಂಕೆಯ ಕೂಗು
ಸುಖ-ದು:ಖಗಳ ಕೋರೈಸುವ ಕತ್ತಿಯಲಗು!