Tuesday, 11 December 2012

ಈಸು-ಇದ್ದು ಜಯಿಸು!


ನಿರೀಕ್ಷೆಯಿರೆ ಕಂಗಳಲಿ
ಸಮೀಕ್ಷೆಯು ಮನದಲಿ
ನೋಟವಿರೆ ಬಾನೆಡೆಗೆ
ಓಟವಿದೆ ಗುರಿಯೆಡೆಗೆ!

ದಾರಿಯಿದು ದುರ್ಗಮ,
ಬದುಕನಿಸಿರೆ ಕೃತ್ರಿಮ,
ಇರೆ ತೃಪ್ತಿಯ ಮೈತ್ರಿ,
ಪೊರೆವಳು ಈ ಧಾತ್ರಿ.

ನಿರ್ಮಲ ತನು ಮನ,
ನಿಚ್ಚಳ ಅವಲೋಕನ,
ನಿಲುವಿರಲಿ ಬಾನೆತ್ತರ
ಅರಿವಿರಲಿ ನಿರಂತರ.

ತ್ರಸ್ತ ಮನವ ಸಂತೈಸಿ
ಆಪ್ತ ಜನಕೆ ಪ್ರಸ್ಪಂದಿಸಿ
ಎಲ್ಲರೊಳಗೆ ಸೇರಿ ಬೆರೆ,
ಆದಲ್ಲಿ ನೀಡುತ ಆಸರೆ.

ಅಣು ನೀ ಬ್ರಹ್ಮಾಂಡದಿ,
ಋಣಿ, ಬುವಿಯಾತಿಥ್ಯದಿ,
ಕಳೆ ಪ್ರತಿಶ್ವಾಸವನಂದದಿ,
ತಾಮರದೆಲೆಹನಿಯಂದದಿ!

Thursday, 22 November 2012

ಕವಿಯ ಛವಿ!

ಭಲೇ! ರವಿ ಕಾಣದ್ದು ಕವಿ ಕಂಡ,
ಸಂತೋಷದಲೂ ನೋವ ಕಂಡ!
ಸಾಲ್ಗಳ ಮಧ್ಯೆ ಪದವ ಹುಡುಕಿದ
ಅರಿಯದ ಗಂಟ ಬಿಡಿಸಲು ನಿಂತ!

ಮೌನದಲಡಗಿದ್ದ ಮಾತ ಹೆಕ್ಕಿದ,
ಮಾತಲಿಹ ಮೌನವ ವಿಶ್ಲೇಷಿಸಿದ.
ಮುಖದಿ ಮುಖವಾಡವ ಹುಡುಕಿದ,
ಕಸದಲೂ ರಸ ತೆಗೆಯಲು ನಿಂತ!

ಬಾಳಘಟ್ಟಗಳನು ಜೀವಂತವಿರಿಸಿದ,
ನೆನಪ ಸಂತೆಯಲಿ ಕೊರಗಿ ನಲಿದ!
ಸುಖದಲೂ ಗತಸವಿಯ ಹುಡುಕಿದ,
ಗುಂಪಲೂ ಏಕಾಂಗಿಯಾಗಿ ನಿಂತ!

ಕಪ್ಪು ಬಿಳುಪಲೂ ಮಳೆಬಿಲ್ಲ ಕಂಡ,
ಬರಡು ನೆಲದೆ ತುಡಿವ ಜೀವ ಕಂಡ!
ದು:ಖದಲೂ ನಗುವ ಬಗೆಯನರಿತ,
ಅರಿಯಲು, ಬದುಕ ಹೊರಗೆ ನಿಂತ!

ನಿಸರ್ಗದ ವಿಸ್ಮಯಗಳನಲಂಕರಿಸಿದ,
ನಿಸ್ತೇಜ ಗೋಡೆಗೂ ಜೀವ ತುಂಬಿದ!
ಭವದ ಭಾವಗಳನೆಲ್ಲ ಹಾಳೆಗೆ ಎರೆದ,
ಮಸಿಯ ಮತ್ತಲಿ ಜಗಮರೆತು ನಿಂತ!

Monday, 19 November 2012

ನಾನೂ ಆದೆನೊಂದು ಕ್ರೀಡಾಪಟು!


ಮೆಲ್ಲನೆ ಬೊಜ್ಜು ಸೇರಿತು ಹರೆಯ ಇಳಿದಂತೆ,
ಜೊತೆಗೆ ಬಿ.ಪಿ. ಏರಿತು ಒತ್ತಡ ಬೆಳೆದಂತೆ!
ಅರಿತೆ ಹೃದಯ ನಲುಗೀತು ತೂಕ ಏರಿದಂತೆ,
ದಿನಚರಿ ಬದಲಿಸುವ ಸಮಯವೆಂಬ ಚಿಂತೆ!

ಮುಂಜಾವಿನ ಮಂಪರು ವ್ಯಾಯಾಮಕ್ಕೆ ಬಿಡದು,
ಸಂಸಾರ, ಕೆಲಸದೊತ್ತಡ ಸಮಯ ಕೊಡದು.
ನುಸುಳಿತು ಪತಿಸಲಹೆ ’ಗಾಲ್ಫ್’ ಕಲಿಯೆಂದು.
ಗಾಳಿಗೆ ತೂರಿದೆ ಒಡನೆ, ಮುದುಕರಾಟವೆಂದು.
ನಿಕೋಲಳ ರೂಪ ಅಂತು ಯಾಕಾಗಬಾರದೆಂದು!

ಪರಿಕರಣದ ಮೂಟೆ ಹೊತ್ತು ನಡೆದೆ ಕೋರ್ಸಿಗೆ,
ಏಳು ಐರನ್ ಕ್ಲಬ್ ಎತ್ತಿಬೀಸಿದೆ ಪುಟ್ಟ ಬಿಳಿಚೆಂಡಿಗೆ,
ಗಾಳಿ ಸೀಳಿ ಹಾರಲು, ಕಣ್ಣಗಲಿಸಿದೆ ಚೆಂಡಿನೆಡೆಗೆ
ಸುತ್ತಲೂ ಹಸಿರು ಸಿರಿ, ಕಾಲಡಿ ಹುಲ್ಲಿನ ಹಾಸಿಗೆ,
ನೀರಚಿಲುಮೆ ದಾಟಿ ಮತ್ತೆ ಬೀಸಿದೆ ಗುರಿಯ ಕಡೆಗೆ
ಹರ್ಷಿಸಿದೆ ’ಪಾರ್’ ಕೂಗಿಗೆ ಚೆಂಡು ಬಿದ್ದಾಗ ಗುಳಿಗೆ!

ಶುಭ್ರ ಸ್ವಚ್ಛ ತಂಬೆಲರು ನಿದ್ದೆಯ ಮಂಪರನೋಡಿಸಿತು.
’ಗಾಲ್ಫ್’ ಕ್ಷಣದಲಿ ಈ ನಿಸರ್ಗಪ್ರೇಮಿಗೆ ಸನಿಹವಾಯ್ತು.
ಜೊತೆ ಬೇಡದ, ಪ್ರಾಯ ನೋಡದ ಆಟ ಮುದನೀಡಿತು.

ನಾನೂ ಆದೆ ಕ್ರೀಡಾಪಟು’ಎನಿಸೆ ಸಂತಸ ಇಮ್ಮಡಿಸಿತು!

ಗೊತ್ತಿಲ್ಲದಿದ್ದವರಿಗೆ: ನಿಕೋಲ್-ಭಾರತದ ಉತ್ತಮ ಗಾಲ್ಫ್ ಆಟಗಾತಿ. ಸುಂದರಿ ಕೂಡಾ! ಏಳು ಐರನ್- ಗಾಲ್ಫ್ ಆಡುವ ಕೋಲಲ್ಲಿ ಒಂದು. ಪಾರ್-ಒಂದು ಗುಳಿ ಮುಗಿಸಲು ನಿಗದಿಸಿದ ನಿರ್ದಿಷ್ಟ ಸಂಖ್ಯೆ.

Tuesday, 30 October 2012

ಇಂದು ಎಂದೆಂದೂ!ನಾಳೆ ಅನೂಹ್ಯನಿಗೂಢ ಇಂದು ಸುಂದರ
ಅತ್ತಿಹಣ್ಣಿನ ರೂಪದಂದದಿ ನಾಳೆ ನಶ್ವರ!
ಇಂದು ನಂದು! ನಾಳೆ ಸಿಕ್ಕರೆ ಉಪಕಾರ!
ತೃಪ್ತಿಯಲಿಂದನು ಕಳೆಯೆ ನೀ ಸರದಾರ!

ನಾಳಿನ ಚಿಂತೆ ನಾಳೆಯನು ಬದಲಿಸದು,
ನಾಳೆಯ ಭೀತಿ ಇಂದನು ಮರೆಸುವುದು.
ಮೌಢ್ಯವದು ನಾಳೆಗೆಂದು ಬದುಕುವುದು,
ಕಾಣದ ನಾಳೆಗೆ ಇಂದನು ಕೊಲ್ಲುವುದು!

ನಿನ್ನೆನಾಳೆಗಳಲಿ ಇಂದನು ಸೊರಗಿಸದಿರಿ
ಭೂತಕಾಲದಲಿ ಭೂತವಾಗಿ ಕೊರಗದಿರಿ!
ನಾಳಿನ ಭಯದಲಿ ಬೆಂಡಾಗಿ ಹೆಣಗದಿರಿ,
ಇಂದಿನ ರಮ್ಯತೆಯ ಜೀವಿಸಿ ನಲಿಯಿರಿ.

ಜ್ವಲಂತ ನೆನಪುಗಳು ಇಂದನು ಸುಡದಿರಲಿ
ನೆನಪಿನಗೋರಿಯಡಿ ಜೀವ ಶವವಾಗದಿರಲಿ
ನಾಳೆಗಾಗಿ ಮನಸ್ಥೈರ್ಯ, ಕನಸುಗಳಿರಲಿ!

ಕೈಜಾರುವ ಮುನ್ನ ಇಂದನು ಮರೆಯದಿರಿ!

Thursday, 11 October 2012

ಕನಸು-ಮನಸು (ದ್ವಂದ್ವ)ಕನಸಿಗೆಂದೂ ಉಲ್ಲಾಸದ ಸೊಗಸು,
ಮನಸಿಗಿದ ಕಂಡು ಸದಾ ಮುನಿಸು!
ದೇಹಕಿಬ್ಬದಿಯಲಿ ಇರಿಸು ಮುರಿಸು,
ಮೂಕನಾಗಿಹ ನಾ ಬರೀ ಜಿಜ್ಞಾಸು!

ಕನಸಲಿ ಗರಿಬಿಚ್ಚಿ ಸ್ವಚ್ಛಂದದ ನೃತ್ಯ,
ಹಂಗಿಲ್ಲದ ಜಗದಿ ಸುಖದ ಅಧಿಪತ್ಯ.
ಮನಸಿನಲಿ ನೂರು ಮುಖದ ದೈತ್ಯ,
ಬಿಗಿಹೆಚ್ಚಿಸಲು ಭವಬಂಧನದ ದಾಸ್ಯ.

ಕನಸಿಗೆ ಕಡಿವಾಣವನಿಡುವ ಬೇಡಿಕೆ,
ನಡೆಸಿ ಸಾಕಾರರೂಪಿ ಕನಸ ಆರೈಕೆ.

ವರ್ತುಲದಿ ರಹದಾರಿಯೆಳೆವ ಬಯಕೆ,
ದ್ವಂದ್ವತುಮುಲಕೆ ವಿರಾಮ ಹಾರೈಕೆ!

Tuesday, 18 September 2012

ಅಂದು-ಇಂದು

ಚಿತ್ರ: ಗೂಗಲ್ ಕೃಪೆ

ಮನೆಯಾಗಿತ್ತಂದು ನಲಿವ ನಂದನವನ,
ಬದುಕಾಗಿತ್ತು ಸರಾಗ ಸುಮಧುರ ಗಾನ
ಅಪ್ಪ ಅಮ್ಮ ತೋರಿದ್ದರು ಶಾಂತಮನ,
ಅಧೈರ್ಯ ಅಸ್ಥಿರತೆಯಿಲ್ಲದ ಆಲಾಪನ

ಇಂದೋ ಜಟಿಲ ಪ್ರಕ್ಷುಬ್ಧ ಎಲ್ಲರ ಮನ,
ಅಶಾಂತ, ಅತಂತ್ರ ಜೀವನದ ಅಧೀನ!
ಅಳುಕು ಥಳುಕು ನಡೆಯ ಕೃತಕ ಯಾನ
ರಾರಾಜಿಸುತಿದೆ ಇಲ್ಲಿ ಮೌಲ್ಯಗಳ ಪತನ!

ತರುತಿತ್ತಂದು ಹರುಷ ಅತಿಥಿಗಳಾಗಮನ
ಬೆರೆತು ನಲಿಯಲು ಬೇಕಿರಲಿಲ್ಲ ಆಹ್ವಾನ
ಕಂಡು ನೆರೆ, ಹೊರೆಗಾಗಿ ಬಂದ ವಿಧಾನ,                       
ನೀತಿಪಾಠವನರುಹುತಿತ್ತು ಅಪ್ಪನ ಜೀವನ!

ನೆಮ್ಮದಿಗೆ ನೀಡಿತ್ತು ಮನೆಯಂದು ಆಶ್ರಯ
ಬರಿ ತುಮುಲಗಳ ಬೀಡು ಇಂದೀ ಆಲಯ
ಚಿಣ್ಣರಂಗಳದಿ ಆ ಮನೆಯೇ ಮಂತ್ರಾಲಯ
ಪಾಳುಬಿದ್ದ ಈ ಮನೆಯೋ ಯಂತ್ರಾಲಯ!

ಆಗ-ಈಗ


ಚಿತ್ರ: ಗೂಗಲ್ ಕೃಪೆ

ಬಂಧುಗಳ ಜತೆಯಾಗ ನಕ್ಕು ನಲಿಯುತಿರೆ,
ಹಣದಿಂದ ಸಂತಸವೆಂದು ಕೇಳರಿಯದಿರೆ,
ಗಂಜಿ ಮೊಸರನ್ನವೂ ಮೃಷ್ಟಾನ್ನ ಅನಿಸಿರೆ,
ಅಭಿವೃದ್ಧಿಯಲಿತ್ತು ಸಹೃದಯತೆಯ ಮುದ್ರೆ!

ಅಭಿವೃದ್ಧಿಯು ಈಗಂತೂ ಮನೆಮಾತು!
ವೃದ್ಧ ಹಣದ ಥೈಲಿ ಮಕ್ಕಳಿಗೂ ಗೊತ್ತು,
ದಿನದಿನಕೆ ವರ್ಧಿಸುತಿದೆ ದೇಹದ ಸುತ್ತು!
ರೋಗಗಳ ವೃದ್ಧಿ ತಂದೊಡ್ಡಿದೆ ವಿಪತ್ತು!

ಹಬ್ಬಹರಿದಿನದಿ ಆಗ ಹರ್ಷದಿ ಗಡಿಬಿಡಿ,
ಈಗೋ ಪ್ರತಿದಿನ ಎಲ್ಲರಿಗೂ ಗಡಿಬಿಡಿ!
ಹಲವು ದಿಕ್ಕಲಿ ಸಂಸಾರವೇ ಬಿಡಿಬಿಡಿ!
ಜೀವನವೇ ಸುಸ್ತು, ಯಾಂತ್ರಿಕ ಭರದಡಿ!

ಮನೆಗೊಂದು ಮಗುವೂ ಕಷ್ಟದಲಿ ವರದಿ,
ಆದರೂ ಕೂಗಾಟ-ಜನಸಂಖ್ಯೆಯ ವೃದ್ಧಿ!
ಕಾರುಗಳ ಜತೆ ಬಡವನ ಗೋಳೂ ವೃದ್ಧಿ
ನಮ್ಮ ಸಂಬಂಧಗಳ ಅಂತರದಲೂ ವೃದ್ಧಿ!

ಭವ್ಯ ಮೌಲ್ಯಗಳ ಮನೆಯಾಗ ತೀರ್ಥಕ್ಷೇತ್ರ
ನವ್ಯತೆಯ ಗುಂಗಿನ ಮನೆಯೀಗ ಕುರುಕ್ಷೇತ್ರ!


Friday, 7 September 2012

ಗುಪ್ತ ಗಾಮಿನಿ!

ಚಿತ್ರ: ಗೂಗಲ್ ಕೃಪೆ

ಆಂತರ್ಯದೊಳ ನೋಡಲು, ಮೆತ್ತಿದ ಪಾಚಿ,
ಅಣಕಿಸಿದೆ ಒಡಲನೊತ್ತಿದ ಕೊಳೆ ಮೇಲೆರಚಿ,
ಸಮ್ಮಾನಕಂಜಿ ಅಡಗಿ ಕುಳಿತಿದೆ ಎದೆಯವುಚಿ
ತೊಳೆಯದಿರೆ ಸಪ್ಪೆಯಾಗಿದೆ ಜಗದ ಸವಿರುಚಿ!

ನೀನರಿವೆ ನೀನಲ್ಲ, ಈ ಲೋಕ ಕಾಣುವ ರೂಪ!
ಒಂಟಿಯಾಗಿ ರೋದಿಸುತಿದೆ ಅನಿಸೆ ತಾನತ್ಯಲ್ಪ,
ಮೇಲೇರಿದಂತೆ ಸಾಧನಾಶಿಖರಶೃಂಗ ಲೋಪ!
ಸಾಧಿಸುವ ಹಂಬಲಕೆ ಅನಿವಾರ್ಯತೆಯ ಲೇಪ!

ಗೆಲುವಲೂ ಮನವ ಕಾಡುವ ಪಕ್ವತೆಯ ಆಕಾಂಕ್ಷೆ,
ತೊಳೆದಂತೆ ಚಿಗುರುವ ಪಾಚಿಯೆದುರು ಸಮೀಕ್ಷೆ,
ಅನವರತ ಶೋಧನೆಯಲೇ ಉತ್ತುಂಗದ ನಿರೀಕ್ಷೆ,
ಅಸ್ಪಷ್ಟತೆಯಲೇ ಮುನ್ನುಗ್ಗಿ ಬೆಳಕ ಕಾಂಬ ಅಪೇಕ್ಷೆ!

Thursday, 23 August 2012

ಅನುರಾಗದ ಆಯಾಮ!ಬಾನಲಿ ಹರಿದಿರಲು ಬೆಳದಿಂಗಳ ಹೊನಲು,
ಬಾಳಲಿ ಮೂಡಿಸಿಹೆ ಹೊಂಗಿರಣದ ಕವಲು!
ಒಲವಿನ ಕವಲ ದಿಟ್ಟಿಸೆ ಅಚ್ಚರಿಯ ಕಂಗಳು,
ಹುಸಿನಗೆ ಬೀರುತಿರೆ, ಲಜ್ಜೆಯಿಲ್ಲದ ತಿಂಗಳು!

ನರನಾಡಿ ಕಂಪಿಸೆ, ಜಿನುಗುವ ಸೋನೆಮಳೆ
ಜೀವದ ಭಾವ ಸೇರಿ ಹರಿದಿಹೆ ಹೊನ್ನ ಹೊಳೆ!
ಭಾವೈಕ್ಯದ ಸಂತಸದಿ ಅರಳಿರೆ, ಜೀವಸುಮ,
ಜೀವವೀಣೆ ಮಿಡಿದಾಗ ಅನುರಾಗ ಸಂಗಮ!

ಭಾವಕೆ ಶೃತಿ ಸೇರಿಸಿ ಹೃದಯಲಯದ ತಾನ,
ತಂಗಾಳಿಯ ಜೊತೆ ಉಲಿದಿದೆ ಅನುರಕ್ತಿಗಾನ!
ಆಲೈಸುತ ಓಲೈಸುತ ತೋಷಿಸಿರೆ ತನು ಮನ,
ಕನಸಿನಲೂ ಜೀವಕೆ ಭಾವೈಶ್ವರ್ಯದ ಸನ್ಮಾನ!

ಲೌಕಿಕಸ್ತರವ ಮೀರಿ ಸಲಹಲಿದನು ದೇವಾನಂಗ
ದೇಹ ಬಂಧ ತೊರೆದು ಹಾರಲಿ ಪ್ರೇಮವಿಹಂಗ!
ಹರಯ ರೂಪ ಬೇಡದೆ ಕಾಣಲಿ ನವ ಆಯಾಮ,
ಅಮರವಾಗಲಿ ಹೃನ್ಮನದ ಚಿರಂತನ ಸಮಾಗಮ.

Monday, 13 August 2012

ಬಾಳರಥದ ಪಥ!


ಜೀವನದಿ ಪ್ರತಿದಿವಸ ಹೊಸ ಅಚ್ಚರಿ!
ಸಂತಸ ವಿರಸಗಳ ಬಿಡದ ಉಸಾಬರಿ
ವಿರಾಮವೆಂಬಷ್ಟರಲ್ಲಿ ಸಶೇಷದ ಪರಿ!
ಮುಂದೇನೋ, ಮತ್ತೆ ಅಳುಕು ಕೆದರಿ!

ಅಳುಕು ಶಾಶ್ವತ, ನಾಳೆಯನೂ ಮೀರಿ,
ಭಯ ಇಮ್ಮಡಿಸಿ ದುರಾಸೆಯಾಗಿ ಹೀರಿ,                     
ಜೋಳಿಗೆ ತುಂಬಿಸೆ ಮರುಳು ಸಾಮಾಗ್ರಿ
ಕಿವುಡನಿಗೆ ಕೇಳೀತೇ ಚಿತೆಯ ಛೀಮಾರಿ!

ಮಿಥ್ಯೆ ತಥ್ಯಗಳ ಜ್ಞಾನಶರಧಿಗೆ ಆಭಾರಿ
ಧೀಧೃತಿ ಹೊರಲಿ ಹೃನ್ಮನದ ಅಂಬಾರಿ
ಸಂಭ್ರಮಿಸಿ ಜೀವಿಸೆ, ಇಂದಿನ ಅದ್ದೂರಿ
ನಿಶ್ಚಿತಾಂತ್ಯಕೆ ಸಾಗಲಿ ಸಾರ್ಥಕ ಸವಾರಿ!

Tuesday, 31 July 2012

ಪ್ರೀತಿಯ ರೀತಿ
ಮರೀಚಿಕೆಯಂತಿರುವ ಪ್ರೀತಿ,
ತರುವುದಿದರ ರೀತಿಯೇ ಭೀತಿ!
ಹೊತ್ತಿರಲು ಅರಿಯದ ಆಕೃತಿ,
ಪ್ರೀತಿಯಾಗಿತ್ತು ಬರೀ ಭ್ರಾಂತಿ!

ಕಾದಾಟದ ನಡುವಿನ ಪ್ರೇಮ,
ಪ್ರೀತಿಯ ಸೊಗಡಿಲ್ಲದ ಕಾಮ.
ಗೆದ್ದಿದೆ ಸೋಗಿನ ಜೀವನಕ್ರಮ
ಅರಿಯದೆಂದಿವಕ್ಕೆ ವಿರಾಮ?!

ಕಾನನದಿ ತೊಳಲುವ ಮನ,
ಹಂಬಲಿಸೆ ಕಾಣದಾ ಸವಿತನ.
ಎಲ್ಲೆ ಮೀರೆಂಬ ಪ್ರಚೋದನ,
ರಾಡಿತಳದ ನಗುವಿನ ಜೀವನ!

Wednesday, 18 July 2012

ದೌರ್ಬಲ್ಯ!


ಕನಸಿಗೆ ಉಣಿಸಿ, ಕೊಬ್ಬಿಸಿ ಬೆಳೆಸಿ
ಆಡಲಾಣತಿಯಿಟ್ಟೆ ಜೀವ ತುಂಬಿಸಿ
ಕುಸಿಯಿತಲ್ಲೇ ಹೊಸಿಲ ಕಂಡು ಹೆದರಿ!

ಭಾವವಿಹಂಗಕೆ ಹಿಡಿ ಜೀವ ನೀಡಿ,
ಹಾರಲಪ್ಪಣೆ ಕೊಟ್ಟೆ, ಸೇಚ್ಛೆಯಲಿ,
ರೆಕ್ಕೆ ಕಿತ್ತಿತು, ಪಂಜರವ ಬಿಡಲು ಹೆದರಿ!

ಮನದಂಗಳದಿ ಹೂವರಳಿ ನಳನಳಿಸಿ,
ಹೃದಯ ತಣಿಸೆಂದೆ, ಕಂಪು ಪಸರಿಸಿ,
ಬಾಡಿತು ದುಗುಡದಿ, ನನಸಾಗಲು ಹೆದರಿ!


ಭಂಗ

ಮಂಗನಿಂದ ಮಾನವನೋ,
ಮಂಗನ ಹೊತ್ತ ಮನುಜನೋ,
ಜತೆ ಸದಾ ಮಂಗ ಭಂಗ ತರುತಿರೆ,
ಜಂಗಮನಾಗುವ ಪರಿಯೆಂತು?!

Wednesday, 11 July 2012

ಒಲವಿನಾಸರೆ

ಚಿತ್ರ ಕೃಪೆ- ಗೂಗಲ್


ಭಾವಬಂಧನದಿ ಅಂತ:ಸತ್ವ ಸಿಲುಕಿರೆ,
ಇರಲಾಗದೆ ಬರಲಿಚ್ಛಿಸದೆ ನರಳುತಿರೆ,
ಭಾವಸುಧೆ ನುಂಗಲಾರದ ತುತ್ತಾಗಿರೆ,
ತೊಳಲಾಟದಲಿ ಕಾಣದಾಗಿದೆ ನಿದಿರೆ!

ಕೊಚ್ಚಿ ಹೋಗುವೆನೇ ಈ ಸುಳಿಯೊಳು,
ಪ್ರಕ್ಷುಬ್ಧ ಮೈಮನದ ಬೇಗುದಿಯೊಳು,
ಕೋಲಾಹಲವಿರೆ ಸ್ವಪ್ನಲೋಕದೊಳು,
ನಾನಾಗುತಿಹೆನೇ ಇವುಗಳಡಿಯಾಳು!

ಜೀವ ಸೊಬಗಲಿ ನಾವಿನ್ಯ ಕಾಣುತಿರೆ, 
ಮನತಣಿಪ ಮಳೆಗೆ ತನು ಕಾಯುತಿರೆ,
ಸೋಜಿಗದ ಸೊಬಗು ಮೇರೆ ತರುತಿರೆ,
ಒಲವ ಬಲವೇ, ನೀನೆನಗಾಗಿಹೆ ಆಸರೆ!

Monday, 9 July 2012

ಭಾವೋತ್ಕರ್ಷ


ಮನದಿ ಚಿಗುರಿದ ಭಾವ ಬಾಂದಳದಿ,
ಜೀವ ಸೇರಿ ಬಾನಾಡಿಯಾಗಿ ಹಾರಿದೆ.
ಹೃದಯಸಮುದ್ರ ಕಲಕಿ ಅಲೆಯೆದ್ದಿದೆ.
ಭಾವಾಂತರಂಗದಲಿ ರಾಡಿ ಎದ್ದಿರಲು,
ಭೋರ್ಗರೆತವ ಕಂಗಳು ಹಿಡಿದಿಟ್ಟಿವೆ !

ಜೀವ ವೀಣೆ ಮೀಟಿ ಝೇಂಕರಿಸಿರಲು,
ಭಾವವಿಹಂಗಕೆ ಜೀವ ಮೇಳೈಸಿರಲು,
ಅಂತರಂಗ ಮೃದಂಗ ತಾಳೈಸುತಿರಲು
ಅಂತರಾಳದೊಡಲು ಓಲೈಸಿ ನಲಿದಿದೆ.
ಒಲವ ಚೆಲುವಿಗೆ ಕಿರುನಗೆ ಮೂಡಿದೆ!

ಸೆಲೆಯ ಚಿಲುಮೆ ಉಕ್ಕಿ ಹರಿದೀತೇ,
ಮನದಿ ಅಳುಕು, ಭಾವೋತ್ಕರ್ಷದಿ,
ಹುಲು ಮಾನವನ ಮೀರಿ ನಗುತಿಹ,
ಬಂಧನಕೆ ಸಿಗದ ಭಾವೋತ್ಕಟತೆಯ
ಸೆಲೆಗೆ ನೆಲೆ, ಲತೆಯ ಕವಿತೆಯಾಗಿ!

Thursday, 5 July 2012

ಸೋಲಿನ ಬಲ


ನೀ ಕುಗ್ಗದಿರು ಕುಂದದಿರು ಸೋಲಲಿ
ಜಯ ನಗುತಿದೆ ಸೋಲಿನ ಸೋಗಲಿ!

ಸೋಲನೆಂದೂ ನೀ ಹಳಿಯದಿರು,
ಸೋತೆನೆಂದೂ ನೀ ಹಲುಬದಿರು.
ಸೋಲು ಕಾವಲು, ಗೆಲುವಿನೆದಿರು
ಬಗ್ಗೀತಾದರೂ ಮುರಿಯದು ಬಿದಿರು!

ಸೋಲಿನ ಉಳಿಪೆಟ್ಟಲಾಗುವೆ ಮೂರ್ತಿ,
ದೂರವಿರದಾಗ ನಿನ್ನ ವಿಜಯದ ಕೀರ್ತಿ.
ಬಾಡದಿರು ನೀ, ಬಂತೆಂದು ಅಪಕೀರ್ತಿ
ಜಯಾಪಜಯ ಚಕ್ರ, ಪ್ರಕೃತಿಯ ನೀತಿ!

ಸೋಲಲರಳುವುದು ಅನುಭವದ ಕಥೆ.
ಅವಕಾಶವಿದೆ, ಉಣಬಡಿಸಲು ವ್ಯಥೆ.
ವಾಸ್ತವ ಮರೆತು ಮೆರೆದ ವೀರಗಾಥೆ!
ಮುಂದೊಮ್ಮೆ ಮಗುಚಲು, ಆತ್ಮಕಥೆ!

ನೆಲ ಕಚ್ಚಿರೆ ಅರಿವೆ, ನೆಲದ ಸುಖವ,
ಹಾರಾಡಿದವ ಬೀಳುವನೆಂಬ ನಿಜವ,
ಗೆಲುವು ಕಲಿಸಬಹುದೇ ಈ ಪಾಠವ?
ಸೋತು ದೊರೆತ ಗೆಲುವೇ ಉತ್ಸವ!


ವಿಪರ್ಯಾಸ!


ಕನಸಲಿ ಮೈ ಮರೆತು ಬೀಳುವಂತಿಲ್ಲ
ವಾಸ್ತವದ ರಾಗವ ಕೇಳದಿರುವಂತಿಲ್ಲ.
ಹಿಡಿದು ಬಾಳಿಲ್ಲ, ಬಿಟ್ಟು ಜೀವಿಸುವಂತಿಲ್ಲ.
ಎರಡು ದೋಣಿಯ ಪಯಣ ನಿಲ್ಲುವಂತಿಲ್ಲ!

ಕನಸಲಿ ಜೀವಸುಧೆ ಸುಲಲಿತ, ಸರಳ
ನನಸಲಿ ಮೌನ, ಸಮಯವೇ ವಿರಳ!
ಒಮ್ಮೆ ಜೇನು, ಮತ್ತೊಮ್ಮೆ ಮಾದಳ,
ಆಳವಿಳಿದರೂ ಸಿಗದ ಮುಕ್ತಾಪ್ರವಾಳ!

ಕನಸಲಿ ಎದೆಗುಂದದ ಕೆಚ್ಚೆದೆಯ ಉಲ್ಲಾಸ
ಕುಂದಿಸಲೇ ಕಾದಿಹ ವಾಸ್ತವದ ಪ್ರಯಾಸ!
ಸೋತು ಗೆಲುವ ಗೆದ್ದು ಸೋಲುವ ಆಭಾಸ
ಹೆಣೆಸಿ, ಮಣಿಸಿ ನಗುವ ವಿಕಟ ವಿಪರ್ಯಾಸ!

ಬೋಳು ಮರದ ಗೋಳು!

ನನ್ನ ಒಂದು ಜಲವರ್ಣ ಚಿತ್ರ

ತನ್ನ ಬಣ್ಣಿಸೆಂದು ಕರೆಯಿತು ಸೊಂಪಾದ ಸಂಪಿಗೆ ಮರ,
ನನ್ನ ಸೆಳೆದದ್ದು ಮಾತ್ರ ದಾರಿಬದಿಯಾ ಬೋಳು ಮರ!
ಮನವ ಮರುಗಿಸಿತು ಸೊರಗಿ ನಿಂತ ಆ ಬರಡು ಮರ!
ಹೃದಯ ಕರಗಿತು, ನೆನೆದದರ ಗತವೈಭವದ ವಿವರ!

ಕೆಲ ವರುಷದ ಹಿಂದಿದು ಹಸಿರು ಸಿರಿಯ ಗೂಡಾಗಿತ್ತು
ಕೆಳಗಿನ ಸಣ್ಣ ಕಲ್ಲಹಾಸು ದಣಿವಾರಿಸುವ ಬೀಡಾಗಿತ್ತು
ನಿರ್ಮಲ ತಂಬೆಲರೊಂದಿಗೆ ನೆರಳೀಯುವ ಮಾಡಾಗಿತ್ತು.
ಸಿಹಿಯಾದ ನೇರಳೆ ಹಣ್ಣ ನೀಡಿ ತೃಪ್ತಿಯಿಂದ ಹರಡಿತ್ತು.

ಕಣ್ಣು ಬಿತ್ತು! ಬಿತ್ತು ಮಾನವನ ಇಲಾಖೆಯ ಅವಗಣ್ಣು!
ಕವಿಕ ರೆಂಬೆ ಕಡಿಯಲು, ಜಲಮಂಡಳಿ, ಬುಡದ ಗೆಣ್ಣು!
ಪಾಲಿಕೆ ಟಾರು ಬೇರನೊಣಗಿಸಿತು, ಮೇಲಿಡದೇ ಮಣ್ಣು!               
ಕೊರಗಿ, ಸೊರಗಿ ಒಣಗಿ ಮಾಯವಾಯ್ತು ಎಲೆ, ಹಣ್ಣು!

ವನೋತ್ಸವದಿ ನಾಲ್ಕು ಸಸಿ ನೆಟ್ಟು ಪುಢಾರಿ ಹಲ್ಕಿರಿದಿರಲು,
ಸ್ವಾರ್ಥಿಗಳ ಕಿವಿಗೆ ಬೀಳಲಿಲ್ಲ ಬೋಳುಮರದ ದುಂಬಾಲು.
ಮೌಲ್ಯಮರೆತು ಬೆತ್ತಲಾಗಿಹ ಇವರರಿತಾರೇ ಇದರ ಅಳಲು.
ಅತಂತ್ರ ಪ್ರಗತಿಯ ಮೂಕಸಾಕ್ಷಿಯಿದರ ಶಿಥಿಲ ಒಣಗೆಲ್ಲು!

ಉಳಿವು-ಅಳಿವು


ಹಸಿರ ಬಸಿರಿಗೆ ಕೊಳ್ಳಿ ಇಟ್ಟಿರೆ,
ಉಸಿರುಳಿಯಲುಂಟೇ?
ಬನಸಿರಿ ಶಾಪದ ತಾಪ ಏರಿರೆ,
ಜೀವಸಿರಿಗುಳಿವುಂಟೇ?

ವ್ಯಾಮೋಹ!


ಪರಕೀಯ ತಿಂಡಿಗಳತ್ತ ಒಲವು,
ಹುಟ್ಟದು ಎಂದೂ ನಿಜ ಬಲವು
ಪಿಝಾ ಬರ್ಗರ್ ನಾಮ ಹಲವು

ಬೊಜ್ಜು ಏರಿ ಕೆಟ್ಟೀತು ಚೆಲುವು
ದೌರ್ಬಲ್ಯದಿ ನಲುಗೀತು ನರವು
ಹರಯದಲ್ಲೇ ಮುಪ್ಪಿನ ನೋವು!

ಜೋಕೆ! ಕೈ ಜಾರೀತು ಕಾಲವು
ರೋಗ ಖಚಿತ, ಬಿಡದಲ್ಲಿ ಸೆಳವು
ಹೂಬಾಡೀತು ತಳೆಯದಲ್ಲಿ ನಿಲುವು!

ತಾಯ್ಮಡಿಲು

            
ಷಟ್ಪದಿ ರಗಳೆಗಳನರಗಿಸಿಕೊಳಲು ನಾನರಿಯೆ.
ಪಂಪರನ್ನರೇನಂದರೆಂದು ನಾ ತಿಳಿಯೆ.
ಭಾಷೆ ಬರದ ತಬ್ಬಲಿ ನಾನಾದೆನೆಂದು ಬಿಕ್ಕುತಿರೆ,
ದತ್ತ ಕುವೆಂಪುರವರ ಕಂಪು ಎಲ್ಲೆಡೆ ಪಸರಿಸೆ,
ತಿಳಿಗನ್ನಡಾಂಬೆ ತಿರುಗಿ ಕೈ ಬೀಸಿ ಕರೆಯೆ,
ತಾಯ್ಮಡಿಲ ಸುಖದಿ ನಿಟ್ಟುಸಿರಿಟ್ಟೆ, ಮನತಣಿಯೆ!

ಸ್ವಗತ!


ಕ್ಷಣ ನಿಂತು ಯೋಚಿಸು...
ನೀನೇನ ಮರೆತೆಯೆಂದು!

ನೆನಪಿದೆಯೇ ನೀನೆಂದು ನೋಡಿದೆ,
ಮುಗಿಲಂಚಿನ ನಸುಗೆಂಪ ರವಿಯ?
ಅದ ನೋಡಿ ಹಿಗ್ಗಲಣಿಯಾದ ಮೊಗ್ಗನು?
ಸಾವಿರ ಮಳೆಬಿಲ್ಲ ಹೊತ್ತ ಪುಟಾಣಿ ಹಿಮಮಣಿಗಳ?

ಯಾಂತ್ರಿಕ ಪಥದಿ ಸಾಗಿರುವ ದಾಪುಗಾಲುಗಳೇ,
ಹಾಯಾಗಿ ತುಸುಕಾಲ ವಿಶ್ರಮಿಸಿ...
ರಕ್ಕಸ ಯಂತ್ರಗಳ ಸದ್ದನೂ ಮೀರಿ ಬರುವ,
ಕೋಗಿಲೆಯ ಇಂಚರ ಕಿವಿಗಪ್ಪಳಿಸಿತೇ?
ಮಧುರ ತರಂಗಗಳು ಮನ ಕೆರಳಿಸಿತೇ?

ಪಾತರಗಿತ್ತಿಯ ಬಣ್ಣ ಮರೆತು,
ಮೊದಲ ಮಳೆಯ ಸೊಗಡ ಹಿಂದಿಟ್ಟು,
ಭಾವಸಂಬಂಧಗಳ ಗಾಳಿಗೆ ತೂರಿಟ್ಟು,
ಯಾರ ಪ್ರಗತಿಗೆ ಓಡುತಿರುವೆ?
’ತಾನು’ಇಲ್ಲದ ಪ್ರಗತಿಗೆದ್ದ ದೇಶ ಯಾರಿಗಾಗಿ?!ದಂಗು?!


ರಾಂಗೆಂದೂ ರಂಗ್ ರಂಗು
ರಂಗಿನ ಗುಂಗಲಿ ದಂಗು
ಆದ್ರೆಂದೂ ಸ್ಯಾಡ್ ಸಾಂಗು!


ರೈಟ್ ಯಾವಾಗ್ಲೂ ಕ್ವಾಯೆಟ್ಟು
ಸ್ಟ್ರೈಟಿದ್ದು ಇರೋಣ ಬ್ರೈಟ್ಟು,
ಹಂಗೇ ಹೇಳೋಣ ಕೊನೆಗೆ ರೈಟ್ಟು!

ಕ್ರಿಕೆಟ್ಟಿಗೆ ಟಿಕೆಟ್?


ಉರಿಬಿಸಿಲ ಲೆಕ್ಕಿಸದೆ ಕಣಕ್ಕಿಳಿದಿವೆ ತಂಡಗಳೆರಡು,
ದಿನವಿಡೀ ದಣಿಸುತಿದೆ ಇವರನ್ನೊಂದು ಪುಟ್ಟ ಚೆಂಡು.
ಸ್ವಪಕ್ಷಕ್ಕೆ ಜೈಕರಿಸಲು ನೆರೆದಿದೆ ಸುತ್ತ ಪ್ರೇಕ್ಷಕದಂಡು.
ಸೆಳೆಯುತ್ತಿದೆಯೀ ಕ್ರಿಕೆಟ್ ದೇಶವಿದೇಶ ದಾಟಿಕೊಂಡು.

ಕಾಲ ಉರುಳಿ ರೂಪ ಬದಲಿಸೆ, ಧರ್ಮವಾಯ್ತಿದು ದೇಶಕೆ,
ಕಪ್ಪುಬಿಳುಪಿನಿಂದ ವರ್ಣರಂಜಿಸೆ ಹುಚ್ಚು ಹೆಚ್ಚಾಯಿತು ಜನಕೆ.
ಪಂಚ,ಏಕ ದಿವಸಗಳು ಘಂಟೆಗಳಾಗಿ ಜನಿಸಿತು, ಐಪಿಎಲ್ಲು.
ಹಣದ ಹೊಳೆ ಹರಿದಂತೆ, ಬಿತ್ತು ಮ್ಯಾಟಿನಿಗೂ ಕಲ್ಲು!

ಆಟವ ಮರೆಸಿತು ದೀಪಿಕಾ ಕೆತ್ರಿನಾ ಶಿಲ್ಪಾರ ಒನಪು,
ದೋಣಿಯಡಿಯ ನೀರನಾರಿಸಿತು ವಿಶ್ವಕಪ್ ಗೆಲುವಿನ ಹುರುಪು!
ಉದ್ಯೋಗದಿ ಕಳೆಕಂಡು ಹಲವರಿಗಾಯಿತು ನೋವು,
ಆಸ್ಟ್ರೇಲಿಯಾಇಂಗ್ಲೇಂಡಿನಲ್ಲಿ ಭಾರತವಾಯ್ತು ಬಾಡಿದ ಹೂವು!

ಅರಿತು ಪಾಠ ಕಲಿತಲ್ಲಿ ಭಾರತ ಮತ್ತೆ ಮೇಲೆದ್ದೀತು,
ಮರೆತು ನಡೆದಲ್ಲಿ ಕಿಂಗ್ ಫಿಶರ್ ಮಾತ್ರ ಗೆದ್ದೀತು!


ಸೀರೆಯ ಮೆರೆ ನೀ ನೀರೆ!


ನುಣುಪಾದ, ತರತರದ ರಂಗಿನ ಸೀರೆ
ತೊಟ್ಟು ಲಾಸ್ಯವತಿ ನೀನಾಗಿಹೆ ನೀರೆ
ಹನ್ನೆರಡು ಹದಿನೆಂಟು ಮೊಳದ ಧಾರೆ
ಜತೆಕುಪ್ಪಸದಿ ನಾರಿ, ಧರೆಗಿಳಿದಪ್ಸರೆ!

ಕಂಚಿಧರ್ಮಾವರ ಮೈಸೂರುರೇಷಿಮೆ
ಹತ್ತಿಯ ಮಗ್ಗದ ಇಳಕಲ್ ಮಹಿಮೆ
ಕಣ್ಣು ಕೋರೈಪ ಬನಾರಾಸಿ ಗರಿಮೆ
ಉಟ್ಟು ನಡೆದರೆ ಕಣ್ತುಂಬುವ ಹಿರಿಮೆ!

ಸರ್ವಕಾಲಿಕ ಸಮಕಾಲೀನ ನಮ್ಮೀ ಸೀರೆ
ಜೀನ್ಸ್ ಸಲ್ವಾರಿಗೆಲ್ಲಿ ಇದರ ಸಮ ಚರಿತ್ರೆ?
ಸೀತಾಮಾತೆಯಾದಳಿದರೊಂದಿಗೆ ಪವಿತ್ರೆ
ಕೃಷ್ಣೆಯಿದರಿಂದಳೆದಳು ಗಂಡಿನ ಚರಿತ್ರೆ!

ಇಂದಿನ ರಭಸದ ಭರದಡಿಯಾಗಿದೆ ಸೀರೆ
ಮುಂದೆ ಅಚ್ಚರಿಗೊಳ್ಳದಿರಿ ಇದಾದರೆ ಕಣ್ಮರೆ,
ಮೂದಲಿಸದಿರೆಂದೂ, ಇದು ನಮ್ಮ ಪರಂಪರೆ
ಜ್ಯೂಲಿಯಾ ಕದ್ದೊಯ್ಯುವ ಮುನ್ನ ಉಟ್ಟು ಮೆರೆ!ವನದಿ ಜೀವನ!

ವಿಶ್ವಾಸಕ್ಕೆ ಸಿಗದ ಶ್ವಾಸ
ಸಿರಿಯಿಲ್ಲದ ಅದ್ದೂರಿ
ಗುರಿ ತಿಳಿಯದ ಪರಿ
ಕಹಿಯ ಲೇಪದ ಸಿಹಿ
ಅರ್ಥ ಕಾಣದ ಸ್ವಾರ್ಥ,
ಸಾರರಹಿತ ಸಂಸಾರದಿ..

ಈ ರಸಭರಿತ ರಸಪುರಿ!
ಸಿಹಿ ಸುರಿವ ಬಾದಾಮಿ!
ಕರೆದಿವೆ ಮಾವು ಮಾಗಿ,
ತಿಂದುಂಡು ನಲಿದಾಡಿ
ವಿಫಲವೆನಿಸೊ ಬದುಕ...
ಫಲವತ್ತಾಗಿಸಿ!!!!!!

ನಿರಂತರ!

ಮತ್ತದೇ ನಡೆತ, ಮತ್ತದೇ ಹೊಡೆತ
ಮತ್ತದೇ ಸೆಳೆತ, ಮತ್ತದೇ ಸವೆತ
ಮತ್ತದೇ ನುಲಿತ, ಮತ್ತದೇ ಬಿಗಿತ!

ಅದೇ ಪಾಠ, ಅದೇ ಆಟ,
ಅದೇ ಕಾಟ, ಅದೇ ಓಟ
ಮುಸುಕಿನೊಳಗಿನ ಗುದ್ದಾಟ!

ಜಗದೊಳಗಿನ ಸವಿ ನೀಡದ ಸುಖ,
ಸೋಗಿನೊಳಗೆ ನಗುತಿರುವ ಮುಖ
ಒಮ್ಮೆ ಸುಮುಖ, ಮತ್ತೆ ವಿಮುಖ!

ಕೈಗೂಡದ ಕನಸ ಹೊತ್ತ ಬಾಳನೌಕೆ
ಕೈಬಿಡದ ಮುತ್ತು ಹವಳದ ಹಾರೈಕೆ
ಸೆಣಸಿದೆ ಮಧ್ಯೆ ಅಗತ್ಯಗಳ ಪೂರೈಕೆ!

ರಸವ ಕಬಳಿಸಿ ವಿರಸ ಮೆರೆವ ಸಮರಸ
ಕಹಿಸೇವನೆಯ ಜತೆ ಭಾವಿ ಸಿಹಿಯಾಭಾಸ
ಗುಂಗಿನ ಬದುಕು, ಪ್ರಾಸ ನಿಲ್ಲದ ಸಮಾಸ!!

ಸಂತಸ ತಂದ ವಸಂತ


ವಸಂತನ ಸ್ವಾಗತಕೆ ನಡೆದಿದೆ ಎಲ್ಲೆಡೆ ಹುನ್ನಾರ,
ಬಿಸಿಲಿನಝಳದ ಜತೆ ಜೀವಕೆ ಸಂಭ್ರಮದ ಅಬ್ಬರ
ನಳನಳಿಸುತ್ತಿದೆ ಚಿನ್ನದಚಿಗುರೆಲೆ ಹೊತ್ತ ಮಾಮರ,
ಹಸಿರಲಿ ಅವಿತ ಕೋಗಿಲೆಗೆ ನವವಧುವಿನ ಸಡಗರ!

ಪ್ರತಿವಸಂತದಿ ಮತ್ತೆ ಬರುವನೀ ವಸಂತ ನಿರಂತರ,
ರಾಜನಿರಲೀ ಅಳಿಯಲಿ, ನಿಲ್ಲದು ಇವನ ಆಡಂಬರ
ಸನ್ನದ್ಧ ಪುಷ್ಪಾವೃತ ಬುವಿಯ ನೋಡಲೇ ಆಹ್ಲಾದಕರ
ಎದೆಯ ಕಹಿ ಮರೆಸಿ ಸಿಹಿಯೂಡಿಸುವ ಗಾರುಡಿಗಾರ!

ಶಿಶಿರದ ಛವಿಯನಳಿಸಿ ಒತ್ತಿಹನು ನೂತನ ಲಾಂಛನ,
ಈ ನವೋದಯದ ಕಿರಣ ಕಿತ್ತೊಗೆಯಲಿ ಅಧಮತನ.
ಯುಗಾದಿ ಕಾಣಲಿ ರಾಗರಹಿತ ನವ ಮಾನುಷ ಜನನ
ವಸಂತೋತ್ಸವ ಎಲ್ಲೆಡೆ ತರಲಿ ಸಮೃದ್ಧ ನವಜೀವನ!
ಇಳೆ ತಣಿಪ ಮಳೆ!


ರವಿಯ ಝಳವನೋಡಿಸುತ ಬಂತು ಸುರಿಮಳೆ,
ಬುವಿಯ ಧಗೆಯನಾರಿಸುತ ತಂತು ನೀರಹೊಳೆ.

ನೊಂದ ಮನಕೆ ಹುಗ್ಗಿಯಂದದಿ ಇಳೆತಣಿಪ ಮಳೆ,
ಬೆಂದ ಜನಕೆ ಸುಗ್ಗಿಯಂದದಿ ತುಂಬಿ ಬರುವ ಬೆಳೆ!

ಅವನಿಯ ತಣಿಸಲು ತುಂಬಿತು ತೊರೆ ತೋಡು
ನನ್ನನು ಮರೆಸಲು ಆವರಿಸಿತು ಮಣ್ಣ ಸೊಗಡು!

ಬಾನಾಡಿಯಾಗಿ ಹಾರಿತು ಮನ ಬಾಂದಳದಾಚೆ,
ಬಾಡಿ ಬರಲೊಲ್ಲೆನೆಂದಿತು ನೆನಪಿನಂಗಳದೀಚೆ!

ಬಸಿರ ರಾಚಿತು ಎದೆಯಾಳದಿಂದ ಕದಡಿ ರಾಡಿ,
ಹಸಿರ ತಂದಿತು ಮಧುರ ನೆನಹು ಅಲ್ಲಿಲ್ಲಿ ಕಾಡಿ!

ನಿಂತ ಮಳೆಯು ನಿಲ್ಲಿಸಿತು ಮಧುರ ಗತ ವಿಹಾರ
ಕಾಗದನೌಕೆಯ ಹಿಂತೇಲಿಸಿ ನಾಳೆಗಾದೆನಾ ಆಹಾರ!ನಿತ್ಯೋತ್ಸವದ ಅನಾವರಣ


ನಡೆಯುತಿದೆ ನೋಡಿಲ್ಲಿ ಜೀವನದ ನಿತ್ಯೋತ್ಸವ.
ನಿರಂತರ ಸಾಗುತಿದೆ ಬದುಕಿನ ಮಹೋತ್ಸವ.
ತೆರೆಯಿರದ ರಂಗಮಂದಿರದಿ ಬಾಳಿನ ರಥೋತ್ಸವ.

ಮರಗಿಡಜೀವಿಗಳಿರುವ ವೇದಿಕೆಯೇ ನಾಟಕರಂಗ,
ವೀಕ್ಷಕ ಪ್ರೇಕ್ಷಕ ಸಭೆಯೇ ರೂಪಕಗಳಂಗ.
ಅಲ್ಲಿಲ್ಲಿ ಹತ್ತುಹಲವು ನಾಟಕಡೇರೆಗಳ ಸಂಗ.
ಇಲ್ಲಿಂದಲ್ಲಿಗೆ, ಅಲ್ಲಿಂದಿನ್ನೊಂದೆಡೆಗೋಡುವ ಪ್ರಸಂಗ!
ನಡೆದಿದೆ ನೋಡಿಲ್ಲಿ ಜೀವನದ ನಿತ್ಯೋತ್ಸವ!

ಹಣವಂತ ಜೀವನವ ಹುಡುಕುತ್ತಾ...
ಬಡಜೀವಿ ಹಣವಿಲ್ಲದೆ ತೊಳಲುತ್ತಾ...
ರೋಗಿ, ರುಜಿನಗಳೊಡನೆ ಸೆಣಸುತ್ತಾ....
ಪ್ರಿಯಕರ ಪ್ರೇಮಿಯನು ರಮಿಸುತ್ತಾ....
ನಡೆಯುತ್ತಿದೆಯಿಲ್ಲಿ ಬದುಕಿನ ಮಹೋತ್ಸವ!

ಕೆಲ ಗುಂಪು ರಾಜಕೀಯ ಚರ್ಚಿಸೆ,
ಹಲವರು ಮೋಜಿನ ಮತ್ತಲಿ ನರ್ತಿಸೆ,
ಇಲ್ಲದವ ತಿನ್ನುವ ಬಗ್ಗೆ ಯಾಚಿಸೆ,
ಉಳ್ಳವ ತಿನ್ನಲಾಗದ ಬಗ್ಗೆ ಯೋಚಿಸೆ,
ನಿರಂತರ ಸಾಗಿದೆ ಜೀವನದ ನಿತ್ಯೋತ್ಸವ!

ಇರುವ ಜಗವ ಹಳಿಯುತ್ತಾ...
ಕಾಣದ ಥಳುಕಿಗೆ ಹಂಬಲಿಸುತ್ತಾ...
ಜನುಮದಿ ಸಂಭ್ರಮಿಸುತ್ತಾ......
ಬಂಧುವಿಗೆ ಸಾವಲಿ ಸಂತೈಸುತ್ತಾ...
ಸಹಕಾರದ ಕೊಂಡಿಯ ಬೆಸೆಯುತ್ತಾ..
ನಡೆದಿದೆಯಿಲ್ಲಿ ಬಾಳಿನ ರಥೋತ್ಸವ!

ವಸಂತದ ಕೋಗಿಲೆಯೊಡನೆ ಯಂತ್ರದ ಚಲನ,
ಮಾಗಿಯ ಚಂದ್ರನ ಛೇದಿಸಿ ಹಾರುವ ವಿಮಾನ,
ಯಂತ್ರವ ಮೀರಿಸುವ ಪ್ರಗತಿಯ ಪಥಚಲನ.
ಅದಕೊಪ್ಪುವ ಓಟಗತಿಯ ಹತಾಶ ಮಂಥನ,
ರಾಗಭೋಗದ ಮೃಗತೄಷ್ಣೆಯ ಹಿಂದೆ ಸ್ವಪ್ನಸ್ಖಲನ!

ನಾಳಿನ ಹಂಬಲ ಬಿಡದೆ ನಡೆದಿದೆ ರಥೋತ್ಸವದ ಸಂಭ್ರಮ.
ಕೆಲವರಿಗಿದಾದರೆ ಕರ್ಮ, ಹಲವರಿಗಿದಹುದು ಧರ್ಮ.
ಸಿದ್ಧಿಬುದ್ಧಿ ಪಳಗಿಸಿಯೂ ಅರಿತವರುಂಟೇ ಇದರ ಮರ್ಮ!


ನನ್ನ ಪಯಣ


ನೆನಪಿನ ಬುತ್ತಿಯ ಹೆಗಲಿಗೇರಿಸಿ ಹೊರಟೆ.
ದಾರಿಯುದ್ದಕ್ಕೂ ಮೇಯುತ್ತಲೇ ನಡೆದೆ.
ಹಳೆಯದರ ಮೇಲೆ ಹೊಸತನೇರಿಸುತ್ತ ಹೋದೆ.
ಸಿಹಿಕಹಿಗಳನಾಮೋದಿಸುತ್ತ ಮುನ್ನಡೆದೆ.

ಬದುಕಲಿ ಸೇರಿದರು, ಚದುರಿದರು
ನೋವನಿತ್ತರು, ನಲಿವ ಕೊಟ್ಟರು.
ಕಣ್ಣೊರೆಸಿದರು, ಮನಮಿಡಿದರು.
ಯಾರಪ್ಪಣೆಯಿಲ್ಲದೇ ಬುತ್ತಿಯೊಳಹೊಕ್ಕರು!

ಮೇಯ್ದಷ್ಟೂ ಹೆಚ್ಚಿತು ಬುತ್ತಿಯ ಭಾರ!
ಸವೆದಷ್ಟೂ ಹಿಗ್ಗಿತು ದಾರಿಯ ದೂರ.
ಕೊನೆಗರಿತೆ, ನನ್ನೊಂದಿಗೀ ಬುತ್ತಿಯೊಂದೇ ನಿರಂತರ!

ಬೆಂಬಿಡದ ಭೂತ!


ನೆನಪಿನಂಗಳದಿ ಸಿಹಿ-ಕಹಿಗಳ ವಿರಹ,
ಹೊಸತು ಹಳೆಯದರ ನಡುವಿನ ಕಲಹ!
ನಾ ಬೇಕು, ನೀ ಬೇಡೆಂಬ ಜಟಿಲ ಆಗ್ರಹ.
ಯಾರೂ ಬೇಡೆಂದು ಇತ್ತೆ, ಬೆಂಬಿಡುವ ಬಿನ್ನಹ.
ಅಂತರಂಗದ ನೋವ ಲೆಕ್ಕಿಸದೆ ನಡೆದಿಹ..
ಸೋತ ಮೂಕನೆದುರಿವರ ಸಮರದ ಸನ್ನಾಹ!