Sunday 31 August 2014

ಜಾರಿದ ಅಮೃತಘಳಿಗೆ!



ಕಥೆಗಳಲಿ ಓದಿದ್ದಳಷ್ಟೇ,
ಓದಿ ಪುಳಕಗೊಂಡಿದ್ದಳಷ್ಟೇ.
ಸುದೃಢ ತರುಣ ರಾಜಕುವರ
ನಡುರಾತ್ರಿಯಲಿ ಪ್ರೇಮಸಾಗರದಿ
ಕುವರಿಯನು ತೋಯಿಸಿದ್ದು,
ಆಯಸ್ಸು ಇನ್ನಿಲ್ಲ ಎಂಬಂತೆ
ಮೈ ಮರೆಸಿದ್ದು.
ಬೆಳಗ್ಗೆ ತಿರುಗಿ ಕಪ್ಪೆಯೋ, ಕುರೂಪಿಯೋ,
ಇನ್ನೇನೋ ಆಗಿದ್ದು, ಕುವರಿ ಕಣ್ಣೀರಿಟ್ಟಿದ್ದು!

ಮುಚ್ಚದೆವೆಯಿಂದ ದಿಟ್ಟಿಸಿಹಳು!!
ಆ ಸುಂದರ, ಸುಭದ್ರಕಾಯನ
ಬಾಹುಬಂಧನದ ಬಿಗಿಯಲ್ಲಿ,
ಉಸಿರಿಗುಸಿರು ಮಿಳಿಯುವ
ಅಪ್ಪಟ ಒಲವಿನ ಬಿಸಿಯಲ್ಲಿ,
ತಾ ಕಂಡರಿಯದ ಸುಖದಲ್ಲಿ.
ಇದೇ ಶಾಖಕೆ ಜನಿಸಿದ ಬೆಳಕೇ ಅದು?!
ಬೆಳಕಿಗೆ ಹೆದರಿ ಅವನಲಿ,
ಕರಗಿ ಹೋಗಬೇಕೆಂಬಷ್ಟರಲಿ,
ಅವನೊಂದಿಗೆ ಬೆಳಕೂ ಮಾಯ!

ಮಾತಿಲ್ಲದೆ ತೊರೆದು ಹೋದದ್ದು
ಅದಾರಿಗಾಗೋ, ಅದಾವ ಭಾವ ಹೊತ್ತೋ?
ತಿರಸ್ಕಾರವೋ ಸಾಕ್ಷಾತ್ಕಾರವೋ,
ಮುಜುಗರವೋ, ಸಡಗರವೋ,
ಸ್ಥಿತಪ್ರಜ್ಞೆಯೋ, ಪಾಪಪ್ರಜ್ಞೆಯೋ
ಅರಿಯದೇ ನಿಂತಿಹಳು,
ಅದೇ ಒಲುಮೆಯ ಕುಲುಮೆಯೊಳು!
ಕಾಪಿಡಲಾಗದೆ ಜಾರಿಹೋದರೂ,
ಮರೆಯಲಾಗದ ಅಮೃತಘಳಿಗೆಯ
ಮೂಕವಿಸ್ಮಿತ ಸಾಕ್ಷಿಯಾಗಿ.

ಕಾಣದ ಕನಸುಗಳೆಷ್ಟೋ ಕೈಗೂಡಿತ್ತು!
ಆದರಿಂದು ಆಕೆಗೆ ನನಸೇ ಕನಸಾಗಿತ್ತು!

Monday 18 August 2014

ಮಗುವಿನ ನಗು




ಕಂದನದು ಮನೆಯೊಳಗೆ
ಚಂದದಲಿ ನಲಿದಿರಲು
ಅಂಗಳಕೆ ಸಗ್ಗವದು ಇಳಿದಂತೆಯೇ.
ಮಗುವೊಂದು ತೊಟ್ಟಿಲಲಿ
ನಗುತಿರಲು ಕಿಲಕಿಲನೆ
ರಸಭರಿತ ಕಗ್ಗವನು ಕೇಳ್ದಂತೆಯೇ.

ಶಿಶುವಿನಭ್ಯಂಜನದಿ
ಮೃದುಮೈಯ ತಡವುತಿರೆ
ರೇಶಿಮೆಯ ಮಗ್ಗದಲಿ ನೇಯ್ದಂತೆಯೇ.
ತಾಯ್ಮಡಿಲ ಸೆರಗಿನಲಿ
ಮುಗ್ಧತೆಯ ಬೆರಗಿನಲಿ
ಪರಮಸುಖ ಅಗ್ಗದಲಿ ಸಿಕ್ಕಂತೆಯೇ.

ಜಾತಿಹರಯವ ಮರೆಸಿ
ಹರ್ಷವನೆ ಹರಡಿಸುವ,
ಸೌಹಾರ್ದದ ಮೊಗವನರಿಯೋಣವೇ?
ದ್ವೇಷವನು ಕರಗಿಸುವ
ನಿರ್ಮಲತೆಯ ಮುದದೊಳು
ಸಾಮರಸ್ಯದ ಸೊಗವನೋಡೋಣವೇ?