Sunday 29 December 2013

ಹರುಷ ಹರಿಸಲಿ ಹೊಸ ವರುಷ


ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ. 


ಬಾಡಿದ ಮೊಗ್ಗರಳಿಸುವ ಪನ್ನೀರಾಗಿ
ಬಿರಿದ ಬುವಿಗೆ ಮುಸಲಧಾರೆಯಾಗಿ
ಕುಸಿದ ಕಸುವಿಗೆ ಚೇತ:ಸಿಂಧುವಾಗಿ
ಒಡೆದ ಮನವ ಬೆಸೆವ ಸೇತುವಾಗಿ, 

ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.

ಆರುತಿಹ ದೀಪಕ್ಕೆ ತೈಲವನ್ನೆರೆಯುತ್ತ
ಸೋರುತಿಹ ಮಾಡನ್ನು ಸರಿಪಡಿಸುತ್ತ
ಅದುರುತಿಹ ಬುನಾದಿಯನು ಭದ್ರಿಸುತ್ತ,
ಕೊನರುತಿಹ ಭರವಸೆಗೆ ನೀರೆರೆಯುತ್ತ


ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.

ಹೊಸ ಅವಕಾಶ, ಹೃನ್ಮನ ತೆರೆಯಲು,
ಸಮಯವಿದು ಕಳೆ ಕಿತ್ತು ಹಸನಾಗಿಸಲು
ಹೊಗೆಯಾರಿಸಿ ಸ್ನೇಹದ ಕಂಪು ಚೆಲ್ಲಲು
ಉಜ್ವಲ ನಾಳೆಯ ಕನಸ ನನಸಾಗಿಸಲು.

ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.


ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Tuesday 3 December 2013

ಛೇ!! ನಿನಗೂ ಬುದ್ಧಿಯಿರಬಾರದಿತ್ತೇ?!


ಮೂಢ ಮನವೇ, ನಿನಗೋ ನೀನೇ ಸಾಟಿ,
ತಾನು ಸದಾ ಸರಿಯೆಂಬ ಮೊಂಡು ಧಾಟಿ!
ತರ್ಕಾತೀತ ಯುಕ್ತ್ಯಾತೀತವೀ ನಿನ್ನ ರೀತಿ,
ಬಿದ್ದರೂ ಮೂಗು ಮಣ್ಣಾಗಿಲ್ಲವೆಂಬ ನೀತಿ !

ಏನು ಸಿಗದೋ ಅದಕಾಗಿಯೇ ಹಾತೊರೆವೆ
ಏನು ಆಗದೋ ಅದಾಗಲೆಂದೇ ಬಯಸುವೆ
ಧೀಮಂತ ಕಣ್ಣಿಗೂ ನೀ ಮಿಣ್ಣಗೆ ಮಣ್ಣೆರಚುವೆ
ಬಹು ಸುಲಭದಿ ಹಾದಿಯ ದಿಕ್ಕು ತಪ್ಪಿಸುವೆ!

ನೂರು ಪದಗಳು ಸಾವಿರ ಚಿತ್ರಗಳು ಮನದಿ
ಸರಸರನೆ, ತಂದಲ್ಲವೆಂಬ ಶಾಂತ ಮೊಗದಿ!
ಕ್ಷಣಾತ್ ರೌದ್ರತ್ವ ಜ್ವಾಲೆಯನೆಬ್ಬಿಸೆ ರಭಸದಿ,
ಪ್ರೀತಿಯ ಹಿಡಿಭಾವ ತಂಪೆರೆಯೆ ಕ್ಷಣಾರ್ಧದಿ!

ಮರ್ಕಟನಾಗಿ ಹಾರುವೆ ನೀ ಹರೆಯ ಮರೆತು
ನರಿಯನೂ ಮೀರಿಸಿಹೆ ಕುಟಿಲನಾಗಿ ಕುಳಿತು!
ಗೋಮುಖವ್ಯಾಘ್ರನಾಗಿರೆ ಸೋಗಿನ ಮಾತು.
ಛೇ! ಬುದ್ಧಿಯಿರಬಾರದಿತ್ತೇ ಈ ಮನಕಿನಿತು!!

Thursday 19 September 2013

ತೊರೆದು ಜೀವಿಸಬಹುದೇ?



ಹುಲುಸಾಗಿವೆ ನನಸಾಗದ ಕನಸುಗಳು
ಮರೆಯಲು ಮನಸಾಗದ ನೆನಹುಗಳು
ಹಳತಾದರೂ ಹಸಿರಾಗಿರುವ ಛವಿಗಳು
ನೆನಪಿನಂಗಳದ ಈ ಬಾಡದ ಹೂಗಳು!

ಕ್ಷಣದಿ ಕಣ್ಮುಂದೆ ನಲಿದಾಟದ ದಿನಗಳು
ಚಿಣ್ಣರಂಗಳದ ಸಿಹಿ-ಕಹಿದೃಶ್ಯಾವಳಿಗಳು
ಹರೆಯ ಹರಿದಂತೆ ಕಂಗಳ ಮಾತುಗಳು
ಕನಸಲಿ ಲೋಕ ಮರೆತ ಸವಿ ದಿನಗಳು!

ಬದುಕು ಎಡವಿಸಿ ಕಲಿಸಿದ ಪಾಠಗಳು,
ಬೆಳೆಸಲು ಕಣ್ತೆರೆಸಿದ ಬಾಳಿನ ಕ್ಷಣಗಳು

ನೋವಲೂ ನಲಿವಿನ ಚಿನ್ನದ ಗೆರೆಗಳು,
ಉರಿದು ಎಚ್ಚರಿಸುವ ದಾರಿದೀಪಗಳು!

ಇಂದಿನವು ನಾಳೆ ರಂಜಿಸುವ ಪಟಗಳು,
ಕಸುವಿಳಿದರೂ ಬಲಕುಗ್ಗದ ಪ್ರತಿಮೆಗಳು
ಎಂದೂ ತೊರೆಯದ ಆಪ್ತ ಬಂಧುಗಳು,
ಬಾಳ ಹೊಳಪ ಕಾದಿಡುವ ಗುಜರಿಗಳು!

Monday 17 June 2013

ಶಕ್ತಿ

 
ನನ್ನ ಒಂದು ತೈಲವರ್ಣ ಚಿತ್ರ

ನವಿರಾದ ತಂಗಾಳಿ ಸೋಕಲು,
ಬರುವ ಮಳೆಯ ನೆನಪಿಸಿರಲು
ನಾನಾಗುತಿಹೆ ನಿನ್ನೆಯ ಪಾಲು!

ಸಂಧ್ಯಾರಾಗ ಜತೆ ಕರಿಮುಗಿಲು,
ನಭ ತಾ ನೇರಳೆಯಾಗುತಿರಲು,
ಮನ ತೂಗಿದೆ ನೆನಪ ತೊಟ್ಟಿಲು!

ಸವೆದ ದಾರಿಯ ದಿಟ್ಟಿಸೆ ಕಂಗಳು,
ಹಿತವಾಗಿ ಹರಿವ ಹಾಲ್ನೆನಹುಗಳು
ಕಿವುಚಿ ಸರಿವ ಆ ಹಳೆನೋವ್ಗಳು!

ಎದುರಿರೆ ಅರಿಯದ ತಿರುವುಗಳು,
ಅನುಭವ ಪಾಠವೀ ನೆನಪುಗಳು,
ಇಕ್ಕೆಲದಿ ಜ್ವಲಂತವೀ ದೀಪಗಳು!

ಜಿನುಗುಹನಿಗಳು ಬಲಿಯುತಿರಲು,
ಶುಚಿಯಾಗುತಿರೆ ಎನ್ನೊಳಮಜಲು,
ಆ ನಾಳೆಗಿವೇ ಎನ್ನ ದೃಢಕಾವಲು!

Friday 24 May 2013

ಮಾಯಾಬಜಾರ್




ಜಗವನಾವರಿಸಿರೆ ಮಿಥ್ಯೆಯ ಮಾಯೆ
ಮುಸುಕಲಿ ಮರುಗಿದೆ ಸತ್ಯದ ಛಾಯೆ
ಬೇತಾಳನಾಗಿ ತಾ ನೆರಳಲಿ ಸೇರಿರೆ,

ಅರಿಯದೇ ಕವಿಪ ಮಾಯಾಪ್ರಕ್ರಿಯೆ.
 
ಬಿಡಿಸಿಕೊಂಬೆನೆಂದರೂ ಬಿಡದ ಜಾಲ
ಬುವಿಯಾಗಸ ಪಸರಿಸಿಹ ರಕ್ಕಸ ಆಲ
ಮಾತ್ರ ತಣಿಸದಿದೆಂದೂ ಕ್ಷಣ ಕಾಲ,
ಜೀವವ ನೋಯಿಸುವ ಹಾಲಾಹಲ!

ಮರೀಚಿಕೆಯಂದದಿ ಬರಸೆಳೆವ ಪಾಶ,
ವಿವೇಕ ಮಣಿಸುವ ಮಾವುತನಂಕುಶ.
ಈ ಮಾಯಾಬಜಾರಿನ ಕ್ಷಣಿಕ ತೋಷ
ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ

ದೇವಾದಿದೇವರನು ಮಣಿಸಿಹ ರಾಗ
ಧೀಧೃತಿಗೆ ಸವಾಲಿಡುವುದು ಆಗೀಗ.
ಮಿಥ್ಯಾಚಕ್ರವ್ಯೂಹವ ಭೇದಿಸಬೇಕೀಗ,
ಹರಸಾಹಸಗೈದು ಸತ್ಯ ಗೆಲ್ಲಬೇಕೀಗ.



(ತಿಳಿಯದವರಿಗೆ: ರಾಗ-ಅರಿಷಡ್ವರ್ಗಾದಿ ಮಾನಸ ಅವಗುಣಗಳು)

Friday 3 May 2013

ಅವರು-ಇವರು-ನಾವು


ಅರಿವಿರಲಿ, ಅವರಿವರಿಗಿಲ್ಲಿ ನಾವವರಿವರು!
ಅವರಿವರಿಗರಿವು ತರಿಸಲಿಹದಿ ಸರಿಯಾರು?
ಅವರಿವರಿಗಿವರವರಿಗೆ, ಬೆರಳ ತೋರ್ವರು,
ತಾವೇ ಅರಿವಿನತ್ತ ನಡೆವ ಪರಿಯದೇ ಸರಿ!

ಅರಿವಿಂದು ಉದ್ಧರಿಸಲವರಿವರ ಬದುಕು!
ನಮ್ಮಂಥ ಜ್ಞಾನಿಗಳಿಗಲ್ಲವೇ ಈ ಸರಕು!
ಅವರಿವರು ನಮಗೆ ಹೀಗೆ, ಹಾಗಿರಬೇಕು,
ಇವರಿಂದರಿತು ಅವರ ಮೇಲೆ ಹೇರಬೇಕು!

ಅವರಿವರ ಬಿಟ್ಟು ಅಂತರ್ಮುಖವಿರಲರಿವು,
ಪ್ರತಿಯೋರ್ವ ಕಾಂಬ ಅವರಿವರಲೊಲವು.

ಜಗವ ತಿದ್ದುವುದಕಿಂತ ಮೇಲಿದರ ಸುಖವು,
ನಿನ್ನೆಯಿಂದಿನಿತು ಬೆಳೆವುದೇ ನಿಜ ಗೆಲುವು!

Monday 22 April 2013

ಹಾಯ್ ದುಬೈ-ಮರಳುಗಾಡಿಗೆ ಮರುಳಾದಾಗ!


ಕೆಲಸದಿಂದ ದೂರವಿರುವ ಆಸೆ ಎಂದೂ ಬಾರದಿದ್ದಕ್ಕೋ ಏನೋ ಆರು ದಿನ ಕ್ಲಿನಿಕ್ ಹೋಗದಿರುವ ಚಿಂತೆ ದುಬೈಗೆ ಹೋಗುವುದಕ್ಕಿಂತ ಹೆಚ್ಚಾಗಿತ್ತು.  ನಾನಿಲ್ಲದಿರುವಾಗ ಏನೂ ಸಮಸ್ಯೆಯಾಗದಿರಲು ತಿಂಗಳು ಮುಂಚೆಯೇ ಎಲ್ಲರಿಗೂ ಹೇಳಿ, ಬಾಡಿಗೆ, ಸಂಬಳ, ಬ್ಯಾಂಕ್, ಚೆಕ್ ವ್ಯವಸ್ಥೆಗಳ ಬಗ್ಗೆ ಚಿಂತಿಸುತ್ತಿದ್ದೆನೇ ವಿನಾ ದುಬೈಗೆ ಹೋಗುವ ಸನ್ನದ್ಧತೆಯ ಬಗ್ಗೆ ಸ್ವಲ್ಪವೂ ಗಮನವಿರಲಿಲ್ಲ. ಅಲ್ಲದೇ ಅಲ್ಲಿರುವುದು ನನ್ನ ತಮ್ಮನ ಮನೆಯೇ ಆಗಿರುವುದರಿಂದ ಹೆಚ್ಚಿನ ಸಿದ್ಧತೆ ಬೇಕಿಲ್ಲ ಎಂಬ ಸಮಾಧಾನ ಬೇರೆ. ಅಂತೂ ಗಡಿಬಿಡಿಯಲ್ಲಿ, ಭಾನುವಾರ ಬೆಳಿಗ್ಗೆಯೊಳಗೆ, ಕೆಲ ಬಟ್ಟೆಗಳನ್ನು ತುಂಬಿಸಿ ಹೊರಟೆವು. ದುಬೈಗೆ ಬರೀ ೩ ಘಂಟೆಗಳಲ್ಲಿ ತಲುಪಬಹುದು, ಆದರೆ ನಮ್ಮ ಬೆಂಗಳೂರು ಏರ್ ಪೋರ್ಟ್ ತಲುಪಲು ಏನಿಲ್ಲ ಅಂದರೂ ೨ ಘಂಟೆ ಬೇಕು. ಈಗ ಆನ್ ಲೈನ್ ಚೆಕ್ ಇನ್ ಸೌಲಭ್ಯವಿರುವುದರಿಂದ ಸ್ವಲ್ಪ ನಿರಾಳರಾಗಿ ತಲುಪಿದೆವು. ಸಮಯಕ್ಕೆ ಸರಿಯಾಗಿ ಎಮರಿಟಸ್ ವಿಮಾನ ಹತ್ತಿದೆವು. ಆಹ್ಲಾದಕರ ವಾತಾವರಣ, ಗುಜ಼ಾರಿಶ್ ಸಿನೆಮಾ ಮುಗಿಸುವಷ್ಟರಲ್ಲಿ, ದುಬೈ ಬಂದೇ ಬಿಟ್ಟಿತು.

ಅಲ್ಲಿನ ಏರ್ ಪೋರ್ಟ್ ಟರ್ಮಿನಲ್ ನೋಡುತ್ತಿದ್ದಂತೆಯೇ ಅವರ ಮನೋಭಾವದ ಪರಿಚಯವಾಗತೊಡಗಿತು. ವಿಶಾಲಕ್ಕಿಂತ ವಿಶಾಲ ಜಾಗ, ಬೃಹದಾಕಾರದ ಕಂಬಗಳು, ಕಸದ ನೆರಳೇ ಕಾಣದ ನೆಲ, ಆಗಸದೆತ್ತರಕ್ಕೆದ್ದಿರುವ ಗೋಡೆಗಳು, ಅವುಗಳ ಮೇಲಿಂದ ರಮಣೀಯವಾಗಿ ಹರಿದು ಬರುತ್ತಿರುವ ಕೃತಕ ಜಲಪಾತ. ಇಂತಹ ಜಲಪಾತ ದುಬೈನಲ್ಲಿ ಹಲವೆಡೆ ಕಾಣಲು ಸಿಗುತ್ತದೆ. ಕಡಿಮೆ ನೀರಿನಿಂದ ಬೃಹತ್ ಜಲಪಾತದ ಅನುಭವ ನೀಡುವ ಅತ್ಯದ್ಭುತ ವೈಖರಿಯಿದು. ಆ ಸೌಂದರ್ಯ ಸವಿಯುತ್ತಾ, ಐ ಸ್ಕ್ಯಾನ್ ಮಾಡಿಸುವಷ್ಟರಲ್ಲಿ, ನನ್ನ ಪ್ರೀತಿಯ ನಾದಿನಿ ಕಾಣಿಸಿದಳು. ಮನೆಯೆಡೆಗೆ ಪಯಣಿಸಿದೆವು. ಆ ದಾರಿಯ ಸೊಬಗು ಮೈಮರೆಸುವಂತಿತ್ತು. ಎಲ್ಲಿ ನೋಡಿದರೂ ಎದ್ದು ಕಾಣುತ್ತಿತ್ತು "ವೈಶಾಲ್ಯತೆ". ಜಗತ್ತಿನ ಅತಿ ಎತ್ತರದ ಬುರ್ಜ್ ಖಲೀಫಾ, ಇನ್ನೂ ಹಲವಾರು ದುಬೈನ ಹೆಮ್ಮೆಯ ಗಗನಚುಂಬಿ ಕಟ್ಟಡಗಳು ನಮ್ಮನ್ನು ಸ್ವಾಗತಿಸುವಂತಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಇಂತಹ ಕಟ್ಟಡಗಳು ನಿಂತ ನೆಲ ಬರೀ ಮರಳುಗಾಡು ಎನ್ನುವುದು ನೆನಪಾದಾಗ ಮೈ ಝುಮ್ ಎನ್ನುತ್ತದೆ. ಇನ್ನೊಂದು ಮೋಜಿನ ವಿಷಯವೆಂದರೆ, ಇಡೀ ಊರು ಮಂಜು ಮುಸುಕಿದಂತೆ ಕಾಣುತ್ತಿತ್ತು. ಕಾರೊಳಗಿನ ತಣ್ಣಗಿನ ಏ.ಸಿಯಿಂದಾಗಿ, ಹೊರಗಿರುವುದು ಮುಸುಕಿದ ಹಿಮವೆಂಬ ಭ್ರಮೆಯುಂಟಾಗುವಂತೆ ಮರುಭೂಮಿಯ ಉಸುಕು ಧೂಳೆಬ್ಬಿಸಿತ್ತು! ಆಗಾಗ ಸ್ಯಾಂಡ್ ಸ್ಟಾರ್ಮ್ ಕೂಡಾ ಬರುತ್ತದಂತೆ.
ಕೃತಕ ಜಲಪಾತದ ಮುಂದೆ ನಾನು, ಮಗ, ನಾದಿನಿ
ವಿಮಾನದಲ್ಲೇ ಪುಷ್ಕಳ ಭೋಜನ ಮುಗಿಸಿದ್ದರಿಂದ, ಸ್ವಲ್ಪ ಸುಧಾರಿಸಿಕೊಂಡು, ಜಗತ್ತಿನ ಅತಿ ದೊಡ್ಡ ಮಾಲ್ (ಬೃಹತ್ ಮಾರುಕಟ್ಟೆ) ಆದ "ದುಬೈ ಮಾಲ್"ಗೆ ಹೊರಟೆವು. ಜಗತ್ತಿನ ಅತಿ ಎತ್ತರದ ಕಟ್ಟಡ "ಬುರ್ಜ್ ಖಲೀಫಾ" ದ ಬುನಾದಿಯೇ ಈ ಮಾಲ್. ಖಲೀಫಾದ ಕೊನೆಯವರೆಗೆ ಹೋಗಲು ಇಲ್ಲೇ ಟಿಕೆಟ್ ಪಡೆಯಬೇಕು. ಲಿಫ಼್ಟ್ ನಲ್ಲಿ ಖಲೀಫಾದ ಮೇಲೆ ಹೋಗಿ ಬರಲು ಒಬ್ಬರಿಗೆ ೧೩೦೦ ರೂ. ದುಬಾರಿ ದುಬೈ! ಈ ಮಾಲ್ ನಲ್ಲಿ ಸಿಂಗಪೂರಿನಲ್ಲಿರುವಂತೆ ಅತಿ ದೊಡ್ಡ ಗಾಜಿನ ಮತ್ಸ್ಯಾಗರವಿದೆ. ಗಾಜಿನ ಕವಚದಲ್ಲಿ ನಡೆಯುತ್ತಿದ್ದಂತೆ, ಮತ್ಸ್ಯಜೀವಿಗಳು ನಮ್ಮ ಸುತ್ತಲೂ ವಿಹರಿಸುತ್ತಿರುವ ದೃಶ್ಯ ಅವರ್ಚನೀಯ. ಮರುಭೂಮಿಯಲ್ಲಿ ಊಹಿಸಲಸಾಧ್ಯವಾದ ಹಿಮದ ಸ್ಕೇಟಿಂಗ್ ಸ್ಥಳ ಈ ಮಾಲಿನ ವೈಶಿಷ್ಠ್ಯ. ಮನೋಬಲದ ಮುಂದೆ ಬೇರೇನೂ ಅಲ್ಲ ಎನ್ನುವ ಅದಮ್ಯ ಇಚ್ಛೆ ಎಲ್ಲೆಡೆ ವ್ಯಕ್ತ. ಎಷ್ಟು ನಡೆದರೂ ಮುಗಿಯದ ಮಾಲ್, ಎಲ್ಲೆಲ್ಲೂ ರಂಗು, ಕೋರೈಸುವ ಬೆಳಕು-ಥಳುಕು, ಸಂಭ್ರಮದ ಹೊಳೆ. ಎಲ್ಲೆಲ್ಲೂ ಶಾಪಿಂಗ್ ಮೇನಿಯಾ. ಬೆಳಕಿನಿಂದ ಅಲಂಕೃತಗೊಂಡ ಖಲೀಫಾಗೆ ಸವಾಲು ನೀಡುವಂತಹ ಖಲೀಫಾದ ಎದುರು ಬೆಳಕಿನ ನೃತ್ಯ ಕಾರಂಜಿಯ ಬೆಡಗು ಅವರ್ಣನೀಯ. ಮನದಣಿಯೆ ಆಸ್ವಾದಿಸಿ, ಮನೆಯತ್ತ ತೆರಳಿದೆವು. ಈ ಉಲ್ಲಾಸದ ಬುಗ್ಗೆಗೆ ನಾದಿನಿಯ ರುಚಿಯಾದ ಕೈಯಡುಗೆ ಮಕುಟಪ್ರಾಯವಾಗಿತ್ತು. ಸ್ವಪ್ನಲೋಕದಿಂದ ಎಂದು ನಿದ್ರಾದೇವಿ ಆವರಿಸಿದಳೋ ತಿಳಿಯಲೇ ಇಲ್ಲ.

ಮರುದಿನ ತಿಂಡಿ ಮುಗಿಸಿ, ಮತ್ತೆ ದುಬೈ ಮಾಲ್ ಗೆ ಬಂದೆವು. ನನ್ನ ಮಗ ಹಿಮದ ಸ್ಕೇಟಿಂಗ್ ಮೊದಲಬಾರಿಗೆ ಮಾಡುತ್ತಿದ್ದರೂ, ಎದೆಗುಂದದೆ, ಅದರ ಸಂತೋಷವನ್ನು ಸವಿಯುತ್ತಿರಲು, ನಾನು ಶಾಪಿಂಗ್ ಕಡೆ ಗಮನ ಹರಿಸಿದೆ. ಎಷ್ಟಾದರೂ ದುಬೈ ಶಾಪಿಂಗ್ ಸ್ವರ್ಗವಲ್ಲವೇ?! ಜಗದ್ವಿಖ್ಯಾತ ಬ್ರಾಂಡ್ ಗಳನ್ನು ನೋಡುತ್ತಾ, ಇದು ನಮ್ಮಲ್ಲಿದೆ, ಇದಿಲ್ಲ ಎಂಬ ವಿಶ್ಲೇಷಣೆಯಲ್ಲಿ ಎರಡು ಘಂಟೆ ಕಳೆದದ್ದೇ ತಿಳಿಯಲಿಲ್ಲ. ಬುರ್ಜ್ ಖಲೀಫಾ ಹತ್ತುವ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದೆವು. ಅದರ ಲಿಫ್ಟಿಗೆ ಹೋಗುವ ದಾರಿಯಲ್ಲಿ, ಅದನ್ನು ಕಟ್ಟಿದ ಪ್ರಕ್ರಿಯೆಯ ವಿಹಂಗಮ ಪರಿಚಯ ಅವಲೋಕಿಸಿದಾಗ ಮೈ ನವಿರೆದ್ದಿತು. ಮಾನವಶಕ್ತಿಗೆ ತಲೆಬಾಗಿತು. ಲಿಫ್ಟಿನ ಒಳಗೆ ನಿಂತ ಒಂದೇ ನಿಮಿಷದಲ್ಲಿ ೧೪೫ನೇ ಮಹಡಿಗೆ ಕಾಲಿಟ್ಟೆವು! ನಮ್ಮಲ್ಲಿನ ಲಿಫ್ಟ್ ದುರಂತಗಳ ನೆನಪಿನಿಂದ ಕ್ಷಣಕಾಲ ಮನ ಮರುಗಿತು. ಮೇಲಿಂದ ಕೆಳಗೆ ನೋಡಿದಾಗ ಆಟದ ಹಾಟ್ ವೀಲ್ಸ್ ಕಾರುಗಳ ದಾರಿಗಳು ನೆನಪಾಗುವಂತಿತ್ತು. ಈ ಕಟ್ಟಡದ ಕೊನೆಯ ೪೦ ಮಹಡಿಗಳಿಗೆ ಜನರಿಗೆ ಪ್ರವೇಶವಿಲ್ಲ. ಮೇಲಿಂದ ದುಬೈನ ಪಕ್ಷಿನೋಟ ಅತ್ಯದ್ಭುತ. ಆ ಅಗಾಧತೆ ಮನದಾಳಕ್ಕಿಳಿದಿತ್ತು. ಅದೇ ಮಾಲಲ್ಲಿದ್ದ ಕ್ಯಾಲಿಫ಼ೊರ್ನಿಯಾ ಪಿಜ಼ಾದಲ್ಲಿ ಊಟ ಮಾಡಿ, ನಾದಿನಿ ಹೇಳಿದಂತೆ ಪಾಮ್ ಜುಮೇರಾ ನೋಡಲು ಹೊರಟೆವು.
ಖಲೀಫಾದ ತುದಿಯಲ್ಲಿ ನನ್ನ ಪತಿಯೊಂದಿಗೆ











ಪಾಮ್ ಜುಮೇರಾ ಒಂದು ಕೃತಕವಾಗಿ, ಈಚಲು ಮರದ ಆಕೃತಿಯಲ್ಲಿ ಕಟ್ಟಲಾದ ಐಶಾರಾಮದ ಪ್ರದರ್ಶಕ ದ್ವೀಪ! ಇದನ್ನು ಕಟ್ಟಲು ೯೪೦,೦೦,೦೦೦ ಕ್ಯು.ಮೀ ಮರಳು ಹಾಗೂ ೭ ಮಿಲಿಯನ್ ಟನ್ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಇದರ ಮೇಲೆ ಬೃಹದಾಕಾರದ ಭವನಗಳು, ಅತ್ಯಾಧುನಿಕ ರಸ್ತೆಗಳು, ಹೋಟೆಲುಗಳು, ಸುರಂಗಗಳು ಇತ್ಯಾದಿಗಳನ್ನು ಕಟ್ಟಿದ್ದಾರೆ. ಎಲ್ಲದರ ತಳ ಕೃತಕ ಮರಳಿನ ನೆಲ! ನಿರ್ಮಾಣದ ಪರಾಕಾಷ್ಟತೆಯೇ ಸರಿ. ಇಲ್ಲಿ ಶಾರೂಕ್ ಖಾನ್, ಟಾಮ್ ಕ್ರುಯಿಸ್ ರವರ ಮನೆಗಳೂ ಇವೆಯಂತೆ. ಇದು ಜಗತ್ತಿನ ಅತ್ಯಂತ ದೊಡ್ಡ ಕೃತಕ ದ್ವೀಪ. ಇದರ ವೆಚ್ಚ ಸುಮಾರು ೧೨.೩ ಬಿಲಿಯನ್ ಡಾಲರು. ಆದರೆ ಜಾಗತಿಕ ಆರ್ಥಿಕ ಕುಸಿತದಿಂದ ಹಲವಾರು ಭವನಗಳು ಖಾಲಿಬಿದ್ದಿವೆ. ಅಲ್ಲದೇ ನೆಲ ಕೂಡ ಸ್ವಲ್ಪ ಕುಸಿದಿದೆ ಎಂದು ಸುದ್ದಿ. ವಿಮಾನದಿಂದ ನೋಡಿದಾಗ ಬೃಹತ್ ಈಚಲು ಮರದ ಆಕಾರವನ್ನು ಅರ್ಥೈಸಬಹುದು. ಇಲ್ಲಿರುವ ಪಾಮ್ ಅಟ್ಲಾಂಟಿಸ್ ಅತಿದೊಡ್ಡ ಹೋಟೆಲ್. ಜೈಪುರದ ಹವಾಮಹಲ್ ಇದರ ಆಕಾರಕ್ಕೆ ಪ್ರೇರೇಪಣೆಯೇನೋ ಎಂಬ ಅನುಮಾನ ಬರುತ್ತದೆ!
ಪಾಮ್ ಜುಮೇರಾದಲ್ಲಿ ನಾದಿನಿ ಜೊತೆ
ಅಂತೂ ಮಾನವನ ಇನ್ನೊಂದು ನಿರ್ಮಾಣ ಪ್ರಾವಿಣ್ಯತೆಯ ಸಂದರ್ಶನ ಮುಗಿಸಿ ಮನೆಯತ್ತ ತೆರಳಿದೆವು. ಮರುದಿನ ನಗರದರ್ಶನ ಹಾಗೂ ಮರುಭೂಮಿ ಪ್ರಯಾಣ ಏರ್ಪಡಿಸಲಾಗಿತ್ತು. ಪಕ್ಕದಲ್ಲೇ ಇದ್ದ "ಅಪ್ಪ-ಚೆಟ್ಟಿನಾಡ್" ಹೋಟೆಲಿನ ರುಚಿಯಾದ ಅಪ್ಪದ ಭೋಜನ ಮುಗಿಸಿ, ಪ್ರೀತಿಯ ಟಾಬಿ(ಸಾಕುನಾಯಿ)ಯೊಂದಿಗೆ ಆಟವಾಡಿ ದಿನಕ್ಕಂತ್ಯವ ಹಾಡಿದೆವು.

ಮಾರನೇ ದಿನ ಬೆಳಿಗ್ಗೆ ೯ ಘಂಟೆಗೆ ಸರಿಯಾಗಿ ಪ್ರವಾಸ ವಾಹನದಲ್ಲಿ ನಗರ ದರ್ಶನ ಆರಂಭವಾಯಿತು. ಮಾರ್ಗದರ್ಶಿಯು, ಮುರುಕಲು ಆಂಗ್ಲ ಭಾಷೆಯಲ್ಲಿ ದುಬೈ ಇತಿಹಾಸ ಬಣ್ಣಿಸಿದ. ಏಳು ದೇಶಗಳ ಒಕ್ಕೂಟದ ಹೆಸರು ಸಂಯುಕ್ತ ಅರಬ್ ಒಕ್ಕೂಟ (ಯುನೈಟೆಡ್ ಅರಬ್ ಎಮರಿಟಸ್ (ಯು.ಏ.ಇ)). ಇದರ ಆರ್ಥಿಕ ರಾಜಧಾನಿ ದುಬೈ. ಹಿಂದಿಯ "ದೋ ಭಾಯಿ" (ಇಬ್ಬರು ಸಹೋದರರು) ಎಂಬ ಪದಾರ್ಥವಾಗಿ ದುಬೈ ಹುಟ್ಟಿತಂತೆ! ೧೯೫೮ರಲ್ಲಿ ಅಬುದಾಬಿಯಲ್ಲಿ ದೊರಕಿದ ಪೆಟ್ರೋಲ್ ಮರುಭೂಮಿಯಾಗಿದ್ದ ಯು.ಏ.ಇಯ ರೂಪವನ್ನು ಬದಲಾಯಿಸಿತು. ದುಬೈ ವ್ಯಾಪಾರ ಕೇಂದ್ರವಾಯಿತು. ಹಿಂದಿನ ರಾಜ ಶೇಕ್ ಜ಼ಾಯಿದ್ ಹಾಗೂ ಈಗಿನ ರಾಜ ಮಕ್ತೌಮ್ ದುಬೈನ ಅತ್ಯುನ್ನತ ಬೆಳವಣಿಗೆಯ ಕನಸು ಕಂಡರು. ನನಸಾಗಿಸುವಲ್ಲಿ ಪಣತೊಟ್ಟು ದುಬೈಗೆ ಈ ರೂಪ ತಂದರು. ಆದರೂ ಜಾಗತಿಕ ಆರ್ಥಿಕ ಕುಸಿತದಿಂದ ಈಗ ಸ್ವಲ್ಪ ತತ್ತರಿಸಿದೆ. ದುಬೈಗೆ ಪುರಾತನ ಇತಿಹಾಸವೇನೂ ಇಲ್ಲದಿರುವುದರಿಂದಲೋ ಏನೋ, ತದನಂತರ ನಮ್ಮ ಮಾರ್ಗದರ್ಶಿ ಕೇವಲ ಸಾರಿಗೆದಂಡಗಳ ಬಗ್ಗೆಯೇ ಪ್ರವಚನ ಕೈಗೊಂಡ!

ಪ್ರಸಿದ್ಧವಾದ ಜುಮೇರಾ ಮಸೀದಿ, ಜಾಗತಿಕ ಸಾಂಸ್ಕೃತಿಕ ಕೇಂದ್ರ, ಇತ್ಯಾದಿಗಳ ದರ್ಶನ ನೀಡಿ, ಜಗತ್ಪ್ರಸಿದ್ಧ ೭ ಸ್ಟಾರ್ ಹೋಟೆಲ್ ಆದ ಬುರ್ಜ್-ಆಲ್-ಅರಬ್ ಎದುರು ಕ್ಯಾಮೆರಾಗೆ ಕೆಲಸ ನೀಡಲು ನಿರ್ದೇಶಿಸಿದನು. ದೋಣಿಯಾಕೃತಿಯಲ್ಲಿರುವ ಈ ಕಟ್ಟಡವೂ ದುಬೈನ ಹೆಮ್ಮೆಯ ನಿದರ್ಶನ. ಸಮುದ್ರದ ತಿಳಿನೀಲಿಯ ನೀರಿನ ಸೌಂದರ್ಯ ಬಿಳಿ ಬಣ್ಣದ ಹೋಟೆಲಿಗೆ ಇನ್ನಷ್ಟು ಮೆರುಗು ನೀಡುತ್ತಿತ್ತು. ನಾವೂ ಅಲ್ಲಿನ ಕೆಲ ನೆನಪುಗಳನ್ನು ಕ್ಯಾಮೆರಾದೊಳಗೆ ಹಿಡಿದಿಟ್ಟೆವು.
ಬುರ್ಜ್ ಆಲ್ ಅರಬ್ ಮುಂದೆ ಪತಿ, ಮಗ
ಕೊನೆಯದಾಗಿ ನಮ್ಮನ್ನು "ಗೊಲ್ಡ್ ಸೂಕ್" ಅರ್ಥಾತ್ ಚಿನ್ನದ ಮಳಿಗೆಗೆ ಕರೆದೊಯ್ಯಲಾಯಿತು. ಇಲ್ಲಿ ದಮಾಸ್ ಮುಂತಾದ ಅನೇಕ ಚಿನ್ನದಂಗಡಿಗಳ ವಿಶೇಷ ಹಾಗೂ ಅತ್ಯಾಧುನಿಕ ಶೈಲಿಯ ಆಭರಣಗಳು ಜಗತ್ತನ್ನೇ ಆಕರ್ಶಿಸುವಂಥದ್ದು.  ಇವುಗಳ ಸೆಳೆತ ಸ್ವಲ್ಪ ಕಮ್ಮಿಯಿರುವುದರಿಂದಲೋ ಏನೋ ಅಲ್ಲಿ ಹೋಗದೆ, ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ಲಿನಲ್ಲಿ  ಉದರಪೂಜೆ ಮುಗಿಸಿದೆವು. ಮಧ್ಯಾಹ್ನ ಮರುಭೂಮಿ ಸವಾರಿಗೆ ಸಿದ್ಧರಾಗಿರಲು ಹೇಳಿ ನಮ್ಮನ್ನು ಹಿಂತಿರುಗಿ ಮನೆಗೆ ಬಿಡಲಾಯಿತು. ಈ ತರಾತುರಿಯಲ್ಲಿ ಪ್ರವಾಸ ಕಛೇರಿಯವರ ವೆಬ್ಸೈಟ್ ತಿಳಿಸಿದಂತೆ, ದೌ ಎನ್ನುವ ಪಾರಂಪರಿಕ ದೋಣಿವಿಹಾರಕ್ಕೆ ನಮ್ಮನ್ನು ಕರೆದೊಯ್ಯಲೇ ಇಲ್ಲ. ಇದರ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಾಗ, ಕ್ಷಮೆಯಾಚನೆಯೊಂದಿಗೆ, ಸಂಜೆಯ ಮರುಗಾಡಿಗೆ ವಿಶೇಷ ವಾಹನದ ಏರ್ಪಾಟು ಮಾಡಿದರು. ಇದರ ಅವಶ್ಯಕತೆಯ ಅರಿವಾದದ್ದು ಸ್ಯಾಂಡ್ ಡ್ಯೂನ್ ಬ್ಯಾಶಿಂಗ್ ನಲ್ಲಿಯೇ! ಅಲ್ಲದೇ ನಾವಾಗಿಯೇ ನಂತರ ದೌ ದೋಣಿಯನ್ನು ನೋಡಿದೆವು. ಇದು ಕೇರಳದ ಬೋಟ್ ಹೌಸ್ ಮಾದರಿಯಂತೆ ಪಾರಂಪರಿಕ ದೋಣಿಯಲ್ಲಿ ವಿಹಾರ ಹಾಗೂ ಊಟ ಮಾಡುವ ಒಂದು ಸಂಭ್ರಮ.

ಸಂಜೆ ನಮ್ಮನ್ನು ಒಳ್ಳೆಯ ವಾಹನದಲ್ಲಿ ಸಾಧಾರಣ ನೂರು ಕಿ.ಮೀ ದೂರದ ಮರುಭೂಮಿ ಪ್ರದೇಶಕ್ಕೆ ಅರಬ್ ಚಾಲಕ ಕರೆದೊಯ್ದನು. ಪೆಟ್ರೋಲಿಗೆ ಬರೀ ೧೫ ರೂಪಾಯಿಯಷ್ಟೇ! ಊರಿಂದ ದೂರವಾಗುತ್ತಿದ್ದಂತೆ, ಮರಳಿನ ಬಣ್ಣ ಬದಲಾಗುತ್ತಿರುವುದು ಗೋಚರವಾಯಿತು. ಮೈಬಣ್ಣದಿಂದ, ತಿಳಿಕೇಸರಿ ಬಣ್ಣಕ್ಕೆ ತಿರುಗಿತು. ಬಣ್ಣವಷ್ಟೇ ಅಲ್ಲ, ಮರಳಿನ ರೂಪರಚನೆ ಹಾಗೂ ಸಾಂದ್ರತೆಯಲ್ಲೂ ವ್ಯತ್ಯಾಸ ಸ್ಪಷ್ಟವಾಗಿತ್ತು. ಆ ಮರಳನ್ನು ಕಾಲಿನಿಂದ ಝಾಡಿಸಿದಾಗ ಅದು ನೀರಿನಂತೆ ಹರಿಯುವ ಪ್ರಕ್ರಿಯೆ ನಿಜಕ್ಕೂ ವಿಸ್ಮಯಕರ! ಬರಡಾದ ಮರಳುಗಾಡೂ ಅವಿಸ್ಮರಣೀಯ ಸೌಂದರ್ಯ ಹೊತ್ತಿದೆ ಎನ್ನುವುದರ ಅರಿವಾಯಿತು. ಈಗ ಶುರುವಾಯಿತು, ನನ್ನ ಮಗನ ಪ್ರಿಯವಾದ, ಹೆಚ್ಚಿನವರಿಗೆ ಹೊಟ್ಟೆ ತೊಳಸುವ "ಡ್ಯೂನ್ ಬ್ಯಾಶಿಂಗ್" ಅರ್ಥಾತ್ ಮರಳು ದಿಣ್ಣೆಗಳ ಮೇಲೆ ರಭಸವಾಗಿ ಅಡ್ಡಾದಿಡ್ಡಿ ಜೀಪುಗಳನ್ನು ಓಡಿಸುವುದು. ಈ ರೀತಿ ಓಡಿಸುವುದರಲ್ಲಿ ಅರಬ್ ಚಾಲಕರು ಪರಿಣತರಂತೆ ಹಾಗೂ ಇದಕ್ಕೆ ವಿಶೇಷ ಪರವಾನಿಗೆಯ ಅಗತ್ಯವಿದೆ. ನಮ್ಮ ಕುಟುಂಬಕ್ಕೊಂದು ವಾಹನವಿದ್ದದ್ದರಿಂದ ಸುಮಾರು ಒಂದು ಘಂಟೆಯ ಈ  ಸಾಹಸ ಸುಗಮವಾಯಿತು. ಕೆಲವು ಪ್ರವಾಸಿಗಳಿಗೆ ವಾಂತಿಯುಂಟಾಗಿ ಸುಮಾರು ವಾಹನಗಳು ಮಧ್ಯೆ ನಿಲ್ಲಿಸಿದ್ದವು. ರಾಜಸ್ಥಾನದಲ್ಲೂ ಈ ರೀತಿ ಮಾಡುವರೆಂದು ಕೇಳ್ಪಟ್ಟಿರುವೆ.
ಇದರ ನಂತರ ಒಂಟೆ ಸವಾರಿ, ಅರಬ್ಬೀ ಖರ್ಜೂರದ ಕಾಫಿಯಾದ ಖಾವಾದ ಜೊತೆ ಖರ್ಜೂರದ ಆಸ್ವಾದನೆ, ಅತ್ಯದ್ಭುತ ತಂದೂರನೃತ್ಯ ಹಾಗೂ ಉದರನೃತ್ಯ (ಬೆಲ್ಲಿ ಡ್ಯಾನ್ಸ್) ನೋಡುತ್ತಾ ಭೂರಿ ಭೋಜನ ಸವಿದು, ರಾತ್ರಿ ಮನೆಗೆ ತೆರಳಿದೆವು. ಕಾರಿನಿಂದ ರಾಜರ, ರಾಣಿಯರ ಅರಮನೆಗಳನ್ನು ಚಾಲಕ ತೋರಿಸುತ್ತಿದ್ದಾಗ, ದೇಶದ ಜನತೆಗೆ ಇಷ್ಟು ಸುಸಂಸ್ಕೃತ, ಸುವ್ಯವಸ್ಥಿತ ಹಾಗೂ ಸಮೃದ್ಧ ವ್ಯವಸ್ಥೆಯನ್ನು ಕಲ್ಪಿಸಿದವರು ತಮಗಾಗಿ ಎಷ್ಟು ಮಾಡಿಕೊಂಡರೇನು ತಪ್ಪು ಎಂಬ ವ್ಯಂಗ್ಯ ಮನದಲ್ಲಿ ಬಂತು!

ಮರುದಿನ, ದುಬೈನ ಇನ್ನೊಂದು ದೊಡ್ಡ ಮಾಲಾದ "ಮಾಲ್ ಒಫ಼್ ಎಮರಿಟಸ್" ಭೇಟಿ. ಇಲ್ಲಿನ ಆಕರ್ಷಣೆಯಾದ "ಹಿಮವನ"ದಲ್ಲಿ "ಹೊಸ ಅನುಭವ. ಇಲ್ಲೇ ಇದ್ದ ಸ್ಕೀಯಿಂಗ್ ಅಕಾಡೆಮಿಯಲ್ಲಿ ನನ್ನ ಮಗ ೪-೫ ತರಗತಿಗಳನ್ನು ಅಭ್ಯಸಿಸಿದ. ಈ ಮಾಲ್ ನಲ್ಲಿ ದುಬೈನ ಪ್ರಖ್ಯಾತ "ಕ್ಯಾರಿಫ಼ೋರ್" ಎನ್ನುವ ಬಿಗ್ ಬಜಾರ್ ನಂಥಹದ್ದಿದೆ. ಇಲ್ಲಿ ಉತ್ತಮ ಚಾಕೋಲೇಟ್ ಗಳು, ವಿವಿಧ ರೀತಿಯ ಖರ್ಜೂರಗಳು ವಿಶೇಷ ದರದಲ್ಲಿ ಸಿಗುವುದು. ಎಲ್ಲಾ ರೀತಿಯ ಶಾಪಿಂಗ್, ಊಟ ಮುಗಿಸಿ ಮರುದಿನ ಭಾರತ ಹಿಂದಿರುಗುವ ಸನ್ನದ್ಧತೆಗಳನ್ನು ಮಾಡಿಕೊಂಡೆವು. ಬೆಳಿಗ್ಗೆ ದುಬೈಗೆ ಬಾಯ್ ಬಾಯ್ ಹೇಳಿ ಬೆಂಗಳೂರಿಗೆ ಬಂದಿಳಿದೆವು. ಆಶ್ಚರ್ಯವೆಂದರೆ, ನಿಗದಿತ ಸಮಯಕ್ಕಿಂತ ಅರ್ಧ ಘಂಟೆ ಬೇಗ ಬಂದಿದ್ದೆವು! ೫ ದಿವಸದಲ್ಲಿ ಕಂಡಿರದ ಜನಜಂಗುಳಿ ಮನಸ್ಸು ಕಸಿವಿಸಿಗೊಳಿಸಿದರೂ ಸುತ್ತಲಿನ ಹಸಿರು ಆಹ್ಲಾದಕರವಾಗಿತ್ತು. ನಮ್ಮ ಮನೆಯವರೆಗಿನ ೩೦ ಕಿ.ಮೀ ಕ್ರಮಿಸಲು ಮೂರು ಘಂಟೆ ತೆಗೆದುಕೊಂಡೆವು! ನೂಕು ನುಗ್ಗಲು, ಅಗೆದ ರಸ್ತೆಗಳು, ಹಳಿತಪ್ಪಿದ ವ್ಯವಸ್ಥೆಗಳನ್ನು ನೋಡುತ್ತಿರುವಾಗ ಭಾರತ ಅಕ್ಷರಶ: ಮಹಾನ್ (ದೊಡ್ಡದು) ಆಗಿರುವುದರಿಂದಲೇ ಹೀಗೇನೋ ಎನ್ನಿಸಿತು. ದುಬೈನ ಹತ್ತು ಲಕ್ಷ ಜನವೆಲ್ಲಿ, ನಮ್ಮ ನೂರಿಪ್ಪತ್ತು ಕೋಟಿಯೆಲ್ಲಿ!    

Tuesday 12 March 2013

ಅನುರಾಗದನುಭೂತಿ





ಕೆಲವೇ ಕ್ಷಣಗಳ ಆಮೋದ
ಮೆಲ್ಲುವಾಗಲದೇ ಆಹ್ಲಾದ
ಮೆದ್ದಂತೆ ಹಿಗ್ಗುವ ಆನಂದ
ತನು ಮನ ರಂಜಿಪ ಸ್ವಾದ

ಬೆಸೆಯುತಿರೆ ಒಲವ ಬಂಧ,
ಹಿಮ್ಮೇಳವಿರೆ ವಸಂತನಂದ,
ಜತೆ ತೀಡಿಪ ಸುಮಸುಗಂಧ
ನಾಚಿ ರಂಗಾದ ಬಾನಿನಂದ!

ಬುವಿಯಾಗಿರೆ ನಾಕ ನಿನ್ನಿಂದ,
ಕಲರವದಲೂ ಪ್ರೇಮನಿನಾದ.
ಮನ ಸ್ವಾದಿಸಿರೆ ನವವಿನೋದ
ಹಸಿರೀ ಅನುರಾಗದನುಬಂಧ!

Wednesday 20 February 2013

ವಾಮನ ಪ್ರಾಯ ಭಾವ

 
ನನ್ನ ತೈಲವರ್ಣ ಚಿತ್ರ

ಇಡಿ ಜೀವವ ಸೋಲಿಸುತಿದೆ ಈ ಹಿಡಿಭಾವ!
ಹೃದ್ಗತಿಯ ತಪ್ಪಿಸಿರೆಯೀ ಇಂಪಾದ ಕಲರವ,
ಕನಸು ಮನಸ ಮಣಿಸಿರೆ ಈ ಪರವಶ ಭಾವ
ನೀಡಿ ತನುಮನಕೆ ಉಲ್ಲಾಸದ ದೀಪೋತ್ಸವ!

ವಿವೇಚನೆಗೂ ಅಚ್ಚರಿ ಹುಟ್ಟಿಸಿದೆಯೀ ಮೋಡಿ
ನಾಲ್ಕು ಸವಿ ಮಾತುಗಳೇ ಮಾಡಿರೆ ಗಾರುಡಿ
ಲಜ್ಜೆ ತೊರೆದು ಹಾರಿರಲು ಈ ಭಾವಬಾನಾಡಿ
ಸಾವರಿಸುತ್ತ ಆನಂದಿಸಿದೆ ಜೀವವಿದ ನೋಡಿ!

ನಿಸರ್ಗದಲೂ ಕಂಡಿದೆ ತುಷ್ಟಿಯ ಪ್ರತಿಫಲನ
ತೃಪ್ತ ಮನಕೆ ಶಿಶಿರದಲೇ ವಸಂತನಾಗಮನ
ಮೀರುತ್ತ ಬೆಳೆಯುತಿದೆ ಈ ಹುಲುಮಾನವನ,
ತ್ರಿವಿಕ್ರಮನಂದದಿ ಈ ಹಿಡಿಭಾವದ ಸಂಕಲನ!

Saturday 2 February 2013

ಶ್ರದ್ಧೆ


ಕುಳಿತು ಕಾಯುತಿರೆ ಬರದು ನಿನ್ನ ಸರತಿ
ಜತೆಯಿರೆ ಯತನ ತಪ್ಪಿಸರಾರು ಕೀರುತಿ

ಸರಿಯಿರೆಯೆಮ್ಮ ದಿಟ್ಟಿ ನೇರವಿರೆ ದಾರಿ,
ಅಳುಕ ಮಸುಕಲಿ ಮರೆಯಾಗದು ಗುರಿ.

ಸಾರಿಸದಿರೆ ನನ್ನೊಳಹೊಕ್ಕು ನಾನದನು,
ಬಾರರಾರು ತಡೆಯಲದ ನಾರುವುದನು.

ರಕುತದಲಿ ಎಮಗಿರದಿರೆಯಿನಿತು ಭಕುತಿ,
ಆ ಪಶುಪತಿಯೂ ನೀಡನೆಮಗೆ ಮುಕುತಿ!

Monday 21 January 2013

ಇರುವಿನರಿವು (ಅಸ್ತಿತ್ವದ ಮಹತ್ವ)


ಹುಡುಕ ಹೊರಟಾಗ ಇಹದಿ ನನ್ನಿರುವಿನಗತ್ಯ,
ಅರಿತೆಯದಕ್ಕೂ ಮಿಗಿಲು, ನನ್ನಿರುವಿನ ಸತ್ಯ!
ಇರುವಿನ ಸಂಭ್ರಮವ ಬಿಟ್ಟು ಬೇರೆಲ್ಲ ಮಿಥ್ಯ.
ಕಾಣದ ನಾಳೆಯ ವ್ಯರ್ಥ ಚಿಂತೆಯಲ್ಲ ಪಥ್ಯ!

ಯಾರಿಗೂ ನೀಡಿಲ್ಲ ಜಗವ ಹೊರುವ ಕೆಲಸ
ಮತ್ತಾರೂ ಇತ್ತಿಲ್ಲ ಜಗವ ನಡೆಸುವ ಕೆಲಸ.
ಸದಾ ಅರಿವಿರಲಿ, ಭಂಗುರವಿಲ್ಲಿ ಸಹವಾಸ,
ವೈಷಮ್ಯ ಗೆಲ್ಲದೆ ಮೆರೆಯುತಿರಲಿ ಸಮರಸ.

ಮಿದುಳಾಗದಿರಲಿ ಬರಿ ಗೊಡವೆಗಳ ಆಸ್ಥಾನ,
ವ್ಯಾಕುಲರಾಗಿ ಕಟ್ಟದಿರಿ ಚಿಂತೆಯ ಸಂಸ್ಥಾನ
ಗೊಂದಲ ಕ್ಷುಬ್ಧತೆಗಲ್ಲ ಈ ದೇಹ ವಾಸಸ್ಥಾನ
ನಿರಾಳಮನದಿಂದ ಸಾಗಲಿ ಹರ್ಷದ ಪ್ರಸ್ಥಾನ.

ಕಾರ್ಪಣ್ಯ ಕಾರ್ಮೋಡಗಳೇ ಮಳೆಗೆ ಆಧಾರ!
ಮಳೆಯನಾನಂದಿಸಲು ಅಸ್ತಿತ್ವವೇ ಸಹಕಾರ!

ಮಳೆಬೆನ್ನಿಗೆ ಸುಡುಬಿಸಿಲು ನಿಸರ್ಗದ ಆಕಾರ!
ಹಿಗ್ಗಿ ಕುಗ್ಗಿ ಬೀಳುತೇಳುವುದೇ ಬಾಳಿನ ಸಾರ!

ಗುರಿಯ ಬೆನ್ನಟ್ಟಿ ಹಲವರು ಬಾಳಲಿ ಕಂಗಾಲು.
ತುದಿಯ ಕಾಣದೆ ಹೊತ್ತಿರೆ ಖಿನ್ನತೆಯ ಅಳಲು,
ಇರುವಿನಂದದ ಎದಿರು ಅಂತ್ಯವೆಂತು ಮೇಲು?
ಕೊನೆಯದು ತೀರ, ಬದುಕು ಸಾಗರದ ಪಾಲು!

Tuesday 1 January 2013

ಚಿರನೂತನ!


ಪ್ರತಿ ಕ್ಷಣಗಳಾಗವೇ ಹೊಸತು,
ಸೇರಿರೆ ಮನದಿ ಸಂತಸವಿನಿತು!

ಪ್ರತಿಯಡಿ ನೀಡದೇ ಹೊಸದಾರಿ
ಹರಿದಿರೆ ಆತ್ಮ ವಿಶ್ವಾಸದ ಝರಿ!

ಪ್ರತಿನಗುವೀಯದೇ ನವಬಂಧು,
ಬೆರೆತಿರೆ ನಿರ್ಮಲಸ್ನೇಹ ಮಧು!

ಪ್ರತಿ ಮಾತಾಗದೇ ಹೊಸಕಾವ್ಯ
ತುಂಬಿರೆ ಪ್ರಬುದ್ಧ ಭಾವಲಾಸ್ಯ!

ಪ್ರತಿಕಿರಣ ಕಾಣದೇ ಹೊಸನಾಡು
ಭದ್ರಿಸಿರೆ ನಾಗರೀಕತೆಯ ಬೀಡು!

ಪ್ರತಿ ನಿಮಿಷವೂ ಹೊಸ ಹರುಷ,
ಎಲ್ಲರಿಗೆ ತರಲೀ ಹೊಸ ವರುಷ!

ಸಮಸ್ತರಿಗೂ ಹೊಸ ವರ್ಷದ ಶುಭಾಶಯಗಳು.

ಭರತಖಂಡದ ಪರಾಭವ!



ಸಂತೋಷಿಸಿ, ಕುಣಿದು ಕುಪ್ಪಳಿಸಿ,
ರಕ್ತ ಮಾಂಸದ ಔತಣವಿಂದಿರಲಿ,
ಮದ್ಯರಸದ ಹೊನಲಲಿ ತೇಲಾಡಿ,
ವಿಜಯ ವೈಭೋಗ ಅನುಭವಿಸಿ,
ಭಾರತ ನಾರುತಿರುವುದ ನೋಡಿ.

ಓ ದಾನವರೇ, ನಿಮ್ಮಿಚ್ಛೆಯಂತೆ,
ಮೆರೆಯುತಿದೆಯಿಲ್ಲಿ ಅರಾಜಕತೆ,
ನಲಿಯುತಿದೆಯಿಲ್ಲಿ ಅನೈತಿಕತೆ,
ಹಾಸುಹೊಕ್ಕಿದೆ ಅನಾಗರೀಕತೆ,
ದೈವಶಕ್ತಿಯೀಗಂತೂ ದಂತಕತೆ!

ನ್ಯಾಯದೇವಿಯ ಕರುಳ ಹರಿದಿರೆ,
ರಕ್ಕಸಕುಲ ಅಟ್ಟಹಾಸಗೈಯುತಿರೆ,
ಗೋಮುಖವ್ಯಾಘ್ರರು ಹೆಚ್ಚುತಿರೆ,
ಅಮಾನುಷತ್ವ ಮಿತಿ ಮೀರುತಿರೆ,
ಅದೆಂದೋ ಸಮುದ್ರಮಥನದ ಕರೆ?

Note: ದೆಲ್ಲಿಯಲ್ಲಿ 29ರಂದು ದಾಮಿನಿಯ ದಾರುಣ ಸಾವಿನ ಸುದ್ದಿ ಕೇಳಿದಾಗ ಅತೀವ ನೋವಿನಲ್ಲಿ ಹೊರಹೊಮ್ಮಿದ ಸಾಲುಗಳಿವು. ಇವುಗಳು ಭಾರತದ ಬಗ್ಗೆ ತೋರಿದ ನಿಲುವಲ್ಲ. ಈ ಘಟನೆಯಿಂದ ಮನಸ್ಸು ಅತಿಯಾಗಿ ಘಾಸಿಗೊಂಡಿದ್ದರೂ ನನ್ನ ದೇಶಪ್ರೇಮಕ್ಕೆ ಧಕ್ಕೆ ತಂದಿಲ್ಲ. ಭಾರತದ ಭವಿಷ್ಯ ಉಜ್ವಲವಾಗಿದೆಯೆಂದು ಇಂದೂ ನಂಬಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಲೂ ಇದ್ದೇನೆ.