Sunday 26 October 2014

ಕಲ್ಲಾದ (ಪೊಳ್ಳಾದ) ನಿರೀಕ್ಷೆ!


ಅವಲಂಬನೆ ಎಷ್ಟು ಸತ್ಯವೋ
ಅಷ್ಟೇ ಸತ್ಯ ನಿಸರ್ಗದಿ,
ಪ್ರತಿಕೂಲಕ್ಕೆ ರೂಪಾಂತರವೂ,
ಮೈ-ಮನದ ಮಾರ್ಪಾಡೂ!
ಒಗ್ಗಿಕೊಳ್ಳುವುದೂ,
ಒಗ್ಗಿ ಜಡ್ಡುಕಟ್ಟುವುದೂ!

ಚಳಿಯ ಕೊರೆತ ಸಹಿಸದೆ ಚರ್ಮವ
ದಪ್ಪ ಮಾಡಿಕೊಳ್ಳಲಿಲ್ಲವೇ
ಧ್ರುವದ ಹಿಮಕರಡಿ?
ಕಣ್ಣಿಲ್ಲದೆಯೂ ಕಾಣಲು ಕಲಿತಿಲ್ಲವೇ
ಬಾವಲಿ?
ಲಜ್ಜೆಯೊಂದಿಗೇ ಬದುಕುತಿಲ್ಲವೇ
ನಾಚಿಗೆಮುಳ್ಳು?!

ನಾನೂ ಬರೀ ಜೀವಿಯೇ!
ಬೆರೆಯಲು ಹಂಬಲಿಸಿದ ಮನ,
ಒರಟಾಗಬಹುದು.
ಸನಿಹ ಬಯಸಿದ ಮೈ,
ದೊರಗಾಗಬಹುದು.
ಹೆಚ್ಚೇನು, ನಾನೂ ಒಂದು
ಕಲ್ಲಾಗಬಹುದು!
ಗುರುತೂ ಹಿಡಿಯಲಾಗದಂತಹ,
ನೆಲಕಿನ್ನೊಂದು ಕಲ್ಲು ಅಷ್ಟೇ!

ಸಮಾಧಾನವಿಷ್ಟೇ,
ಕಲ್ಲು, ನೋವಲಂತೂ ಕರಗದು!

Monday 13 October 2014

ತೊರೆವುದೆಂತು?


ಅಂದಿನಾ ಸಮಯವೆಷ್ಟು ಹಿತವಾಗಿತ್ತು
ಮನ, ಇದಳಿಯದೆಂಬ ಭ್ರಮೆಯಲಿತ್ತು!

ಅರಿವಿತ್ತು ಆ ತಳಮಳ ನಿನ್ನಿಂದಲೆಂದು,
ಅಂದರಿತೆ, ಉಗುರಲೂ ಜೀವವಿತ್ತೆಂದು!
ನಿನ್ನ ಸೋಕಲದೂ ತುಡಿಯುತಿತ್ತೆಂದು!!

ಅಂದಾಡಿದ ನುಡಿಗಳು ನನಗೆಂಬಂತಿತ್ತು
ಕಲ್ಮಶವಿರದ ತುಂಬುಪ್ರೀತಿ ಕಂಡಂತಿತ್ತು
ಸಮಯದಲೆಯ ಭಯ ಬೆನ್ನಿಗೇ ಇದ್ದಿತ್ತು


ಎಂದಿನಂತೆ ಕಾಲದ ನಿರ್ದಯತೆ ಗೆದ್ದಿತ್ತು
ಏನಚ್ಚರಿ! ಆದರೂ ಮನ ಸ್ಥಿಮಿತದಲಿತ್ತು!
ಯಾವುವೂ ನನ್ನ ತೊರೆದಿಲ್ಲವೆಂಬಂತಿತ್ತು

ಅವೋ ಸವಿನೆನಪಾಗಿ ಬಡ್ತಿ ಹೊಂದಿತ್ತು!!
ನೆನಪಿನಂಗಳದಿ ಕೆಂಗುಲಾಬಿ ನಗುತಿತ್ತು!

Tuesday 7 October 2014

ಭರವಸೆ



ಭವಿತವ್ಯವಿಲ್ಲದ ಕನಸುಗಳೇ ನಿಂಗೇಕೆ ಆಪ್ಯವೇ?
ಬಂಜರಿನಲೂ ಅರಳಿದ ಕಳ್ಳಿ ಹೂವ ನೋಡಿಯೇ?

ಕಥೆ ಮುಗಿಯಿತೆಂದರೂ ಮನ ನಂಬಲೊಲ್ಲದೇಕೆ?
ಒಣ ಗೋಡೆಯ ಸೆರೆಯಲಿ ಚಿಗುರಿದೆಲೆಯ ಕಂಡೇ?

ಅದಾವ ಸುಖಕೆ ನೆನಪುಗಳಳಿಯದಂತೆ ಕಾಪಿಡುವೆ?
ಬಾಳ ಬಿಸಿಲಲಿ ಮಳೆಬಿಲ್ಲನರಸುವ ಸಂಭ್ರಮವೇ?

ವಿಷಣ್ಣತೆಯ ತಿರಸ್ಕಾರದಲೂ ತೀರದ ಒಲವದೇಕೆ?
ತೀರದ ಮೋಹವ ಬಿಡಲಾಗದಲೆಯ ಛಲವ ಕಂಡೇ?

ಅಲ್ಲಿ ಸಿಗದ ನಿನ್ನ ಬಿಂಬವ ಹುಡುಕುವ ಚಿಂತೆಯೇಕೆ?
ಕಂಬಳಿ ಹುಳುವೊಳಗಣ ಪಾತರಗಿತ್ತಿಯ ನೆನೆದೇ?

ದೂರಾಗಿಹ ಪ್ರೀತಿಗೂ ಪ್ರಣತಿಯಿಡುವ ಆಸೆಯೇಕೆ?
ಸಿಕತಕಣದಲೂ ಮುತ್ತಿನ ಜಾಡನರಿತ ಭರವಸೆಯೇ?