Tuesday, 7 October 2014

ಭರವಸೆಭವಿತವ್ಯವಿಲ್ಲದ ಕನಸುಗಳೇ ನಿಂಗೇಕೆ ಆಪ್ಯವೇ?
ಬಂಜರಿನಲೂ ಅರಳಿದ ಕಳ್ಳಿ ಹೂವ ನೋಡಿಯೇ?

ಕಥೆ ಮುಗಿಯಿತೆಂದರೂ ಮನ ನಂಬಲೊಲ್ಲದೇಕೆ?
ಒಣ ಗೋಡೆಯ ಸೆರೆಯಲಿ ಚಿಗುರಿದೆಲೆಯ ಕಂಡೇ?

ಅದಾವ ಸುಖಕೆ ನೆನಪುಗಳಳಿಯದಂತೆ ಕಾಪಿಡುವೆ?
ಬಾಳ ಬಿಸಿಲಲಿ ಮಳೆಬಿಲ್ಲನರಸುವ ಸಂಭ್ರಮವೇ?

ವಿಷಣ್ಣತೆಯ ತಿರಸ್ಕಾರದಲೂ ತೀರದ ಒಲವದೇಕೆ?
ತೀರದ ಮೋಹವ ಬಿಡಲಾಗದಲೆಯ ಛಲವ ಕಂಡೇ?

ಅಲ್ಲಿ ಸಿಗದ ನಿನ್ನ ಬಿಂಬವ ಹುಡುಕುವ ಚಿಂತೆಯೇಕೆ?
ಕಂಬಳಿ ಹುಳುವೊಳಗಣ ಪಾತರಗಿತ್ತಿಯ ನೆನೆದೇ?

ದೂರಾಗಿಹ ಪ್ರೀತಿಗೂ ಪ್ರಣತಿಯಿಡುವ ಆಸೆಯೇಕೆ?
ಸಿಕತಕಣದಲೂ ಮುತ್ತಿನ ಜಾಡನರಿತ ಭರವಸೆಯೇ?

1 comment:

  1. ಪ್ರಶ್ನಾವಸಾನ ಸಾಲುಗಳಲಿ ಅಡಗಿಸಿರುವ ಭಾವ ತೀವ್ರತೆ ಮತ್ತು ಮನೋ ಚಿಂತನೆಗಳ ಸರಮಾಲೆ ಇಲ್ಲಿದೆ.
    ಹೊಸ ರೀತಿಯ ರಚನಾ ಶೈಲಿ.
    ಸಿಕತಕಣ ನನ್ನ ಮಟ್ಟಿಗೆ ಹೊಸ ಪದ.

    ReplyDelete