Saturday 22 November 2014

ಬದುಕೇ ನಿನಗೆ ನೀನೇ ಸಾಟಿ!!


ಹುಟ್ಟೇ ಇಲ್ಲದ ಹರಿಗೋಲಿತ್ತು,
ಸುಳಿಭರಿತ ನದಿಯಲಿ ಬಿಡುವೆ
ಸುಖದ ಹೊನಲಲಿ ತೋಯಿಸಿ
ನೋವಗಾಯವಾರದಂತಿಡುವೆ!

ಉಸಿರು ಕಟ್ಟುವೆಡೆ ತಂದಿಡುವೆ,

ಉಸಿರಾಡುವ ಅನಿವಾರ್ಯವ!
ಕಂಗಳಲಿ ಹುಲುಸಾಗಿ ಹರಡುವೆ
ನನಸಾಗದ ಕನಸಿನ ಹಂದರವ!

ಹಾರಲೊಂದೇ ರೆಕ್ಕೆಯ ನೀಡಿ
ಹಾರುವ ಆಸೆಯನಿಮ್ಮಡಿಸುವೆ
ಮಧುಮೇಹಿಗಿತ್ತ ಸಿಹಿಯಂತೆ,
ಅಕಾಲ ಹರ್ಷಧಾರೆ ಹರಿಸುವೆ!

ಹುಳುಕಲಿ ಥಳುಕನಿಟ್ಟು ಇಹದಿ,
ಮೋಹದ ಹುಳವನಿಟ್ಟು ಮನದಿ
ಪುತ್ಥಲಿಯೊಲು ಬಳುಕಿಸಿ ಕುಣಿಸಿ
ಅರಿವಿಡುವೆ ಉಳುಕ ನೋವಲಿ!


ಗುರಿಯೆಂಬ ಭ್ರಮೆಯ ಬೆನ್ನಟ್ಟಿಸಿ

ಮಸುಕಿನ ದಾರಿಯಲಿ ದಣಿಸುವೆ
ಸಾಕಿನ್ನು ಬದುಕೋಣ ಎಂಬಾಗ,
ಕೊನೆಘಳಿಗೆ ಬಂತೆಂದುಸುರುವೆ!

ಬದುಕೇ! ನಿನಗೆ ನೀನೇ ಸಾಟಿ!!

Wednesday 19 November 2014

ಜೀವನ-ಕವನ



ಬಲವೆಷ್ಟಿದ್ದರೂ ನೀರೆರೆಯದಿರೆ
ಬದುಕೀತೇ ಹೊಲ?
ಛಲವೆಷ್ಟಿದ್ದರೂ ಬೆವರಿಳಿಯದಿರೆ
ದೊರಕೀತೇ ಫಲ?

ಬಯಕೆಯೆನಿತಿರಲು ಕೃತಿಯಿರದೆ
ಭವಿಸೀತೇ ಕನಸು?
ಮೋಹವೆನಿತಿರಲು ಪ್ರೀತಿಯಿರದೆ
ಸವಿದೀತೇ ಮನಸು?

ಜೀವಜಲದೊರತೆಯೇ ಬತ್ತಿರಲು
ಅಳಿಯದೇ ಚಿಲುಮೆ?
ಭಾವಸೆಲೆಯೊರತೆಯೇ ನಿಂತಿರಲು
ಉಳಿವುದೇ ಒಲುಮೆ?

ಪದಗಳೆನಿತಿರಲು ತುಡಿತವಿರದಿರೆ
ಆಗುವುದೇ ಕವನ?
ಬಂಧಗಳೆನಿತಿರಲು ಮಿಡಿತವಿರದಿರೆ
ಸಾಗುವುದೇ ಜೀವನ?