Sunday 26 October 2014

ಕಲ್ಲಾದ (ಪೊಳ್ಳಾದ) ನಿರೀಕ್ಷೆ!


ಅವಲಂಬನೆ ಎಷ್ಟು ಸತ್ಯವೋ
ಅಷ್ಟೇ ಸತ್ಯ ನಿಸರ್ಗದಿ,
ಪ್ರತಿಕೂಲಕ್ಕೆ ರೂಪಾಂತರವೂ,
ಮೈ-ಮನದ ಮಾರ್ಪಾಡೂ!
ಒಗ್ಗಿಕೊಳ್ಳುವುದೂ,
ಒಗ್ಗಿ ಜಡ್ಡುಕಟ್ಟುವುದೂ!

ಚಳಿಯ ಕೊರೆತ ಸಹಿಸದೆ ಚರ್ಮವ
ದಪ್ಪ ಮಾಡಿಕೊಳ್ಳಲಿಲ್ಲವೇ
ಧ್ರುವದ ಹಿಮಕರಡಿ?
ಕಣ್ಣಿಲ್ಲದೆಯೂ ಕಾಣಲು ಕಲಿತಿಲ್ಲವೇ
ಬಾವಲಿ?
ಲಜ್ಜೆಯೊಂದಿಗೇ ಬದುಕುತಿಲ್ಲವೇ
ನಾಚಿಗೆಮುಳ್ಳು?!

ನಾನೂ ಬರೀ ಜೀವಿಯೇ!
ಬೆರೆಯಲು ಹಂಬಲಿಸಿದ ಮನ,
ಒರಟಾಗಬಹುದು.
ಸನಿಹ ಬಯಸಿದ ಮೈ,
ದೊರಗಾಗಬಹುದು.
ಹೆಚ್ಚೇನು, ನಾನೂ ಒಂದು
ಕಲ್ಲಾಗಬಹುದು!
ಗುರುತೂ ಹಿಡಿಯಲಾಗದಂತಹ,
ನೆಲಕಿನ್ನೊಂದು ಕಲ್ಲು ಅಷ್ಟೇ!

ಸಮಾಧಾನವಿಷ್ಟೇ,
ಕಲ್ಲು, ನೋವಲಂತೂ ಕರಗದು!

1 comment:

  1. ಕಲ್ಲಾಗುವ ಪರಿ ಸುಲಭವಲ್ಲ, ಮನಸು ತಾಳಿಕೊಳ್ಳದೆ ದ್ರವಿಸಿ ಹೋಗುವ ಅಪಾಯವಿದ್ದೀತಷ್ಟೇ.
    ಅದರ ಮೇಲೂ, ಕಲ್ಲಾಗಲು ಕೃಪೆಬೇಕು ಮೊದಲೇ ಕಲ್ಲಾಗಿ ಕುಳಿತವನಿಗೆ, ಬೆಚ್ಚಗೆ ಗರ್ಭಗುಡಿಯೊಳಗೆ!

    ReplyDelete