Tuesday 29 July 2014

ನಕ್ಕು ಬಿಡಲೇ?! ಅತ್ತು ಕರೆಯಲೇ?!


ಒಲವಿನ ಮರಳ ಮನೆ ತನ್ನದೆಂದು ಮರುಳಾದೆ
ನಿಮಿಷದಲದು ಅಲೆಯೊಂದಿಗೆ ಸೇರೆ ಕ್ಷುಬ್ಧಳಾದೆ

ಮರುಗಾಡ ಬಿರುಬಿಸಿಲಲಿ ಹಸಿರಿನ ಹಿಂದೋಡಿದೆ
ಬರಿದೆ ಓಡಿಸುತಿರೆ ಮರೀಚಿಕೆಯೆಂದರಿತು ಕುಸಿದೆ

ಸಾಗರದಿ ಆಣಿಮುತ್ತ ಹುಡುಕಲಣಿಯಾಗಿ ನಡೆದೆ,
ಹೆದರಿಸಿದ ತಿಮಿಂಗಿಲವ ಕಂಡು ಆಸೆಯ ತೊರೆದೆ

ಬಿಳಿಬಾನಲಿ ಮಳೆಬಿಲ್ಲ ಬಣ್ಣ ಕಂಡೀತೆಂದು ಕುಳಿತೆ
ಪ್ರೀತಿಬಿಸಿಲ ತುಂತುರಲಿ ಮಾತ್ರವದೆಂದು ಮರೆತೆ

ಅಲ್ಲಿರದ ಭಾವಗಳನು ಹುಡುಕುತ್ತಾ ನಿರಾಶಳಾದೆ
ಕಂಡ ಆಭಾಸಗಳನು ನೆಚ್ಚಿಕೊಂಡೇ ಹತಾಶಳಾದೆ

ಕಸಿವಿಸಿಯ ಕಹಿ, ಬುದ್ಧಿಮತ್ತನಂತೆ ಮೆರೆದ ಮನಕೆ
ನೆಲ ಕಚ್ಚಿದರೂ ಸೋಲೊಪ್ಪಲು ಬಯಸದ ಬಯಕೆ

ಬಿಗಿದ ಕದವ ಬಡಿದಿದ್ದೆಂದು ನಕ್ಕು ಹಗುರಾಗಲಾರೆ
ಬರಡು ಮನಕೆ ಬಿಚ್ಚಿಟ್ಟೆನೆಂದು ಬಿಕ್ಕಿ ಮರೆಯಲಾರೆ

1 comment:

  1. ಮನಸ್ಸು ಕೆಲವೊಮ್ಮೆ ಹೀಗೆ ಮಂಥನಗೊಳಗಾಗುತ್ತದೆ. ಎಲ್ಲೋ ನಿಂತು ಬಿಟ್ಟ ಭಾವಕ್ಕೆ ಒಳಗಾಗಿ ಕಳೆದು ಹೋದೆವೇನೋ ಅನಿಸತೊಡಗಿದಾಗ ವ್ಯಥೆ ವ್ಯಕ್ತವಾಗುವುದು ಹೀಗೆ.

    ReplyDelete