Thursday 31 July 2014

ರಸಸಂಜೆ


ಕರಿಮುಗಿಲ ತೆರೆಯಿಂದ
ಇಣುಕುವಾ ರವಿಯಿಂದು
ಜರತಾರಿ ಸೀರೆಯನು ನೇಯುತಿಹನು
ಸಂಜೆಯಲಿ ನಡೆಯುತಿಹ
ಕುಸುರಿ ಕೆಲಸವ ನೋಡಿ
ಸಂತಸದಿ ಭೂತಾಯಿ ನಲಿಯುತಿಹಳು

ಶ್ರಾವಣದ ಜಿನುಗಿನಲಿ
ಪನ್ನೀರ ಹನಿಹೊತ್ತು
ಅವನಿ ತಾ ಹಸಿರಾಗಿ ಹಾಡುತಿಹಳು
ಹಸಿರೆಲೆಯ ತೂಗಿಸುವ
ತನುಮನವ ಕಂಪಿಸುವ
ತಂಬೆಲರು ಹಿನ್ನೆಲೆಯ ನುಡಿಸುತಿಹುದು

ಕಳೆದ ರಸಸಂಜೆಗಳ
ನೆನಪುಗಳು ಮರುಕಳಿಸಿ
ಮಧುರತೆಯಲೀ ಜೀವ ತೇಲುತಿಹುದು
ನಿನ್ನೊಲವಿನಾಸರೆಯ
ನೆಲೆಯ ಬೇಡುತ ಮನವು
ಸುಂದರ ನಿಶೆಯಮಲಲಿ ಕರಗುತಿಹುದು

2 comments:

  1. ಇಡೀ ಕವನವು ತನ್ನ ಸಾದೃಶ ಶಕ್ತಿಯಿಂದಲೇ ಗೆದ್ದಿದೆ.
    ಶ್ರಾವಣ ರಸಮಯ ಸಂಜೆಗಳ ಚಿತ್ರಣವು ಮನೋಹರವಾಗಿದೆ.

    ReplyDelete
    Replies
    1. ಬದ್ರಿ ಸರ್, ತಮ್ಮ ಮೆಚ್ಚುಗೆಗೆ ಧನ್ಯವಾದಗಳು

      Delete