Friday 9 January 2015

ತುಮುಲ


ಚಡಪಡಿಸುತಿವೆ ಹಾಳೆಗಿಳಿಯಲಕ್ಷರಗಳು
ಪರಿತಪಿಸುತಿವೆ ಅಣೆಗಟ್ಟೊಳ ಭಾವಗಳು
ಧಾರೆಯಾಗಲು ಕಾಯುತಿವೆ ಸಾಲುಗಳು
ಇವೋ ಬಸಿರಾಗಿ ಹಡೆಯದ ಮೋಡಗಳು!

ಪ್ರೀತಿಗೆ ಕಾದು ನಿರಾಸೆಗೊಂಡ ಕ್ಷಣಗಳು
ತಣಿಸದ ತುಂತುರುವಿನ ರಸನಿಮಿಷಗಳು
ದಕ್ಕದ ಗುರಿಯ ಬೆನ್ನಟ್ಟಿದ ಹುಸಿದಿನಗಳು
ಬೆಂದಿವೆ, ನೊಂದಿವೆ ಮನ:ಪಟಲದೊಳು!

ನಾ ಹಿಗ್ಗಿರಲು ಹೊಳೆದ ಅಪ್ಪನ ಕಣ್ಣುಗಳು
ಕುಗ್ಗಿರಲು, ಮುಲಾಮಾದ ಹಿರಿಯ ಕೈಗಳು
ಮೈ ಮರೆತಿರೆ ನೋವಲೆಚ್ಚರಿಸಿದ ಕಾಲ್ಗಳು
ಮೂರ್ತತ್ವ ಬೇಡಿವೆ ಭಾವಪರಿಧಿಯೊಳು!

ಹರಿಹಾಯಲು ಮುಗಿಬೀಳುತಿಹ ಲಹರಿಗಳು
ಎಡೆಕಾಣದೆ ನಾ ಮರುಗಿರೆ ತುಮುಲದೊಳು
ಉತ್ಕಟಕತೆಯೆದುರು ಸೋಲುತಿರೆ ಪದಗಳು
ಭಾವಪ್ರವಾಹವೇ ಏಳಬೇಕಿದೆಯೆದೆಯೊಳು!

1 comment:

  1. ಹಲವು ಲಹರಿಗಳ ಸಂಗಮ ನಿಮ್ಮ ಈ ಪರಿಪೂರ್ಣ ಕವನ.
    'ಮೂರ್ತತ್ವ ಬೇಡಿವೆ ಭಾವಪರಿಧಿಯೊಳು!' ಸಾಲು ತಮ್ಮ ಕಾವ್ಯ ಪಟುತ್ವಕ್ಕೆ ಒಂದು ಉದಾಹರಣೆ.

    ReplyDelete