Friday 5 September 2014

ಬದುಕೆನ್ನ ಗುರು!



ಗುರುತ್ವಕೆಂದೂ ಶರಣು, ಕಲಿಕೆಗೆ ಶಿರಸಾ ನಮನ,
ಜತೆಗೆ ಗುರುತರ ನೋವಿತ್ತವರಿಗೆ ವಿಶೇಷ ನಮನ
ಬಿದ್ದೊಡನೆ ಪುಕ್ಕಟೆ ಸಿಗುತಿದ್ದ ಅಣಕಗಳಿಗೆ ನಮನ
ಹಿಂದುಳಿದಿರೆ ಮುಂದೂಡಿದ ಮೂದಲಿಕೆಗೆ ನಮನ

ಆಗುತಿತ್ತೇ ಅವರಿಲ್ಲದಿದ್ದರೆ ಪ್ರತಿ ನೋವು ಗೆಲುವು,
ಬರುತಿತ್ತೇ ಬಿದ್ದೊಡನೆ ಮೇಲೆದ್ದು ನಗುವ ಛಲವು,
ಸಾಂತ್ವನದ ಸೋಗಲಿ ವಿಕೃತಿಯಿದೆಯೆಂಬ ಅರಿವು.
ನಲಿವ ಮೀರಿಸಿ ಗುರುವಾಗಿ ಕಲಿಸಿತ್ತು ಪ್ರತಿ ಎಡವು

ಕಲಿಕೆಯ ಬಳಕೆಗೊಂದು ಒಳಗಣ್ಣ ನೀಡಿ ಹೆತ್ತವರು,
ಜ್ಞಾನದ ಕೀಲಿಯು ವಿವೇಕವೆಂದರುಹಿ ಗುರುವಾದರು.
ನಭದೆಡೆಗೆ ಓಟವಿದ್ದರೂ ನೆಲಬಿಡದ ಮರದ ಬೇರು,
ಸಾಧನೆಯ ಯಶಸ್ಸು ನಮ್ರತೆಯಲೆಂದರುಹಿದ ಗುರು.

ಪ್ರತಿ ಸೋಲಿನಲಿ ಕಾಣತೊಡಗಿತು ಗೆಲುವಿನ ಬೆಳಕು
ನೋವಿನ ಉಳಿಪೆಟ್ಟಲಿ ದೂರಾಯಿತು ಭವದ ಅಳುಕು
ಏರಲು ಮೆಟ್ಟಿಲಾಯಿತು ಅಡ್ಡವಾಗಿದ್ದ ಪ್ರತಿ ತೊಡಕು.
ಶಿಕ್ಷೆಯಲಿ ಶಿಕ್ಷಣವಿತ್ತು ಗುರುವಾಯಿತೆನಗೆನ್ನ ಬದುಕು!

2 comments:

  1. ಬದುಕಿನ ಪ್ರತಿ ಮಜಲೂ ಅನನ್ಯ ಗುರುವೇ ಸರಿ.
    ’ಜತೆಗೆ ಗುರುತರ ನೋವಿತ್ತವರಿಗೆ ವಿಶೇಷ ನಮನ’ ಸರ್ವತ್ರ ಸತ್ಯ.

    ReplyDelete
  2. ಪ್ರತಿ ಸೋಲಿನಲಿ ಕಾಣತೊಡಗಿತು ಗೆಲುವಿನ ಬೆಳಕು
    ನೋವಿನ ಉಳಿಪೆಟ್ಟಲಿ ದೂರಾಯಿತು ಭವದ ಅಳುಕು

    ಚೆನಾಗಿದೆ ಮೇಡಮ್ ಗುರು ನಮನ :)....
    ನಲಿವ ಮೀರಿಸಿ ಗುರುವಾಗಿ ಕಲಿಸಿತ್ತು ಪ್ರತಿ ಎಡವು..ನಿಜ :)...
    ವಂದನೆಗಳು :)

    ReplyDelete