Tuesday 20 May 2014

ಆಗಲೇಬೇಕಿದೆ!


ಧಗೆಯಲಿ ಬುವಿಯ ಬಾಯಾರಿರೆ,
ಸರಿಯಬೇಕಿದೆ ಆದಾನದ ನೆನಪು
ವಸಂತನಾಟದಿ ಸುಮ ನಲುಗಿರೆ,
ಹರಿಯಬೇಕಿದೆ ವರುಣನ ಛಾಪು.

ಜಾಡ್ಯದಿ ಕಾಲ್ಗಳು ಕುಸಿಯುತಿರೆ,
ಬೇಕಿದೆ ತಮ:ಶಮನದ ಹುರುಪು
ಹತಾಶೆಯ ಸುಳಿಯಲಿ ಸಿಲುಕಿರೆ,
ಹರಡಬೇಕಿದೆ ಸತ್ವದ ಹೊಳಪು.

ಬಂಧಗಳ ಬೆಸುಗೆ ಸವೆಯುತಿರೆ,
ಎರೆಯಬೇಕಿದೆ, ಎರಕದ ಬಿಸುಪು.
ನಂಟುಗಳ ಅಂಟಿಂದು ಒಣಗುತಿರೆ,
ಬೆರೆಯಬೇಕಿದೆ, ಒಲವಿನ ಒನಪು.

1 comment:

  1. 'ತಮ:ಶಮನದ ಹುರುಪು' ವರುಣನ ಾಗಮನದಿಂದ ಧರೆಗಷ್ಟೇ ಅಲ್ಲ ನಮಗೂ ಸಹ.

    ReplyDelete