Friday 9 May 2014

ಆನಂದಮಯ ಬೆಳಗು!




ಇಂದಿನ ಬೆಳಗು ಸ್ತಬ್ಧ! ಹಕ್ಕಿ ಹಾಡುವುದ ಮರೆತು,
ಜಿನುಗು ಮಳೆ, ತೀಡುವ ತಂಗಾಳಿಗೆ ಮೈಮರೆತು,
ತನು ಮನ ನವಿರೇಳಿಸುವ ಈ ಆಹ್ಲಾದಕೆ ಸೋತು,
ಜೀವರಾಶಿಗಳಿದ ಅನುಭವಿಸುತಿವೆ ತಣ್ಣನೆ ಕುಳಿತು.

ನಿಲ್ಲೆ, ಹಸಿರ ತಂಬೆಲರ ಸಲ್ಲಾಪಕೆ ಮನ ಜೋತು
ಸಾಗಿದೆಯೊಡನೆ ನೆನಪಿನ ಬೋಗಿಯಲಿ ಕುಳಿತು,
ಮಸುಕಲೂ ಮಾಸದ ಹಾದಿಯೆಡೆ ಅಚ್ಚರಿಯೆನಿತು
ಹಚ್ಚ ಹಸಿರಾಗಿ ನಡೆಸಿವೆ ಎಲ್ಲವೂ ಮೂಕಮಾತು!

ಹಾಯ್ದು ಬಂದ ದಾರಿ
ಸ್ಪಷ್ಟ, ತಪ್ಪಿದ ಗತಿಯೆನಿತು!
ಅಲ್ಲೇ ಕಣ್ಮಿಟುಕಿಸುತಿವೆ ಕೈಗೂಡದ ಆಸೆಗಳವಿತು,
ವಿರಮಿಸಿವೆ ಸುಮ್ಮನೆ ತಮ್ಮೆಲ್ಲ ಕಲಹಗಳ ಮರೆತು.
ಗಾಢ ನೀರವ ಶಾಂತ ಭಾವ ನನಗಿಂದು ಹೊಸತು!

ಸುಡುವ ಧರೆಯ ಕಾವಿಗಾಗಿರಲು ಮಳೆಹನಿಗಳಿನಿತು
ಪ್ರಕ್ಷುಬ್ಧ ಮನ ಶಾಂತವಾಗದೇ ಪನ್ನೀರಿನಲಿ ಬೆರೆತು?
ಭಾವವೈರುಧ್ಯಗಳಲೂ ಏಕತಾನದ ಪರಿಯ ಕಲಿತು,
ಶಾಂತಚಿತ್ತದಿ ನಲಿದೆ ನಿಸರ್ಗ ಕಲಿಸಿದ ಪಾಠವರಿತು!

5 comments:

  1. ಬೆಳಗನ್ನು ಕುರಿತು ಎಷ್ಟು ಬರೆದರೂ ಮುಗಿಯದ ಕಡಲು ಅದು. ಓದುತ್ತಾ ಓದುತ್ತಾ ಕಣ್ಣು ಬಿಟ್ಟು ನೋಡಿದರೆ ಅರೆ ಈಗಿನ್ನು ಸಂಜೆ.. ಬೆಳಗಾಗಲು ಇನ್ನು ಬಹಳ ಹೊತ್ತು ಇದೆ ಅಂತ ಅರಿವಾಯಿತು..

    ಅಂತ್ಯ ಪ್ರಾಸವನ್ನು ಹೊಂದಿಸಿ ಬರೆದದ್ದು ಮತ್ತು ಭಾವಕ್ಕೆ ಎಲ್ಲಿಯೂ ದಕ್ಕೆ ಮಾಡದೆ ಹಕ್ಕಿಗಳ ಚಿಲಿಪಿಲಿ, ಬೆಳಗು ತೋರಿಸುವ ಮಂಜಿನ ಹಾದಿ, ಕನಸುಗಳು ಮೆಲ್ಲನೆ ಮೂಡಿ ಅವುಗಳಲ್ಲಿ ಕೆಲವು ಎದೆಯಾಳದಲ್ಲಿ ಸ್ಥಿರವಾಗಿ ನಿಲ್ಲುವ ಸುಮಧುರ ಸಮಯವನ್ನು ವಿಸ್ತೃತವಾಗಿ ಹೇಳುವ ತಾಕತ್ ಇಷ್ಟವಾಯಿತು.

    ಲತಾ ಮೇಡಂ ಈ ಕವಿತೆಯನ್ನು ನಿಮ್ಮ ಸುಮಧುರ ಕಂಠದಲ್ಲಿ ಕೇಳುವ ಆಸೆ ಮೂಡುತ್ತಿದೆ.. ಸುಂದರ ಕವಿತ್ವ..

    ReplyDelete
  2. ಪ್ರಾಸ ಮತ್ತು ಲಯದಲ್ಲಿ ನೀವು ಸಿದ್ದಿಸಿಕೊಂಡಿದ್ದೀರ.
    ಮುಂಜಾನೆಯ ಚಿತ್ರಗಳು ಇಡೀ ದಿನಕ್ಕೆ ಚೈತನ್ಯ ಕಾರಣಗಳು.

    ReplyDelete
  3. Sundara bhava, sundara beLagu.........ನಿಲ್ಲೆ, ಹಸಿರ ತಂಬೆಲರ ಸಲ್ಲಾಪಕೆ ಮನ ಜೋತು
    ಸಾಗಿದೆಯೊಡನೆ ನೆನಪಿನ ಬೋಗಿಯಲಿ ಕುಳಿತು,..... gud1 :)
    Roopa

    ReplyDelete
  4. ಪ್ರಕೃತಿಯ ಸುಂದರ ವರ್ಣನೆ ನಮ್ಮನ್ನೂ ಮಳೆಯಲ್ಲಿ ನೆನೆಸಿತು. ಕೊನೆಯ ಸಾಲುಗಳಲ್ಲಿ ವ್ಯಕ್ತವಾಗುವ ನಿಸರ್ಗ ಕಲಿಸಿದ ಪಾಠ ತುಂಬಾ ಇಷ್ಟವಾಯ್ತು.

    ReplyDelete
  5. ಮೆಚ್ಚಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

    ReplyDelete