Sunday 9 March 2014

ನವಿರ್ಭಾವ

ನನ್ನ ಒಂದು ತೈಲಚಿತ್ರ

ಕುಸುಮಕೂ ನವಿರಾದ
ಕೋಮಲತೆಯ ಹಿಡಿವುದೆಂತು?
ಮುಜುಗರದ ತೆರೆಯಿರೆ
ತೋರೆ ಸಡಗರದ ಭಾವವೆಂತು?

ಉಸುರಿದ ಭಾವವಿಳಿದು
ಎದೆಗಾಸರೆಯಾಗದಿರಲೆಂತು?
ಮನದ ಬಿಸಿ ಕಸಿವಿಸಿಯ
ಮೊಗದಿ ತಂದು ತೋರಲೆಂತು?

ಭಾವೈಸಿರಿ ಕಂಗಳಲಿರೆ
ತನುಮನವ ಆವರಿಸಲಿರದೆಂತು?
ವಸಂತ ಉಲಿಯುತಿರೆ
ಸಂತಸದ ನಲಿವ ತಡೆವುದೆಂತು?

ಅನುರಾಗದ ರಾಗವಿರೆ
ಶೃತಿಯು ಗತಿ ತಪ್ಪುವುದೆಂತು?
ಜಗದ ಅಂಕುಶದಡಿಯಿರೆ
ಕನಸ ಸ್ವಂತಿಕೆ ತೊರೆಯಲೆಂತು?

4 comments:

  1. ನಮಸ್ತೆ ಮೇಡಮ್....
    ಜಾಸ್ತಿ ಗೊತ್ತಿಲ್ಲಾ ನಂಗೆ ಕವನಗಳ ಬಗ್ಗೆ... ನನಗರ್ಥವಾದಂತೆ ಸಹಜ ಪುಳಕದ ಭಾವನೆಯನ್ನು ಹೊರಹಾಕಬೇಕು ಎನ್ನುವಂತೆ ಕವನ ಬರ್ದಿದೀರಾ ಅನಿಸ್ತು....ಒಂದಿಷ್ಟು ನಿಬಂಧನೆಗಳಿಗೆ ನಮ್ಮನ್ನು ನಾವು ತುತ್ತಾಗಿ ಮಾಡಿಕೊಂಡು ಸಹಜತೆಯನ್ನು ಕಳೆದುಕೊಳ್ಳುತ್ತಿದ್ದೇವಾ?? ಗೊತ್ತಿಲ್ಲ...ನನಗನ್ನಿಸಿದ್ದಿದ್ದು,ಬಹುಷಃ ಇಲ್ಲಿನ ಪ್ರಶ್ನೆಗಳೂ ಇದನ್ನೇ ಹೇಳುತ್ತವೇನೋ...

    ಹಾಂ ಅಲ್ಲಿ ತೋರೆ ಸಡಗರ ಒಂದು ಅರ್ಥ ಅಗ್ಲಿಲ್ಲ...ತೋರೆ ಅನ್ನೋದಕ್ಕೆ ಬೇರೆ ಅರ್ಥ ಇದ್ಯಾ ಅಥ್ವಾ ತೋರಿಕೆಯ ನಗು ಎನ್ನುವ ಅರ್ಥವೇನಾ ತಿಳಿಲಿಲ್ಲ...

    ಧನ್ಯವಾದ ಭಾವಸೆಲೆಯ ಅಂದದ ಬುತ್ತಿಗಾಗಿ...
    ವಂದನೆಗಳು..
    ನಮಸ್ತೆ :)

    ReplyDelete
    Replies
    1. ಚಿನ್ಮಯ್ ತಮ್ಮ ಮೆಚ್ಚುಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು. ಇಲ್ಲಿ ’ಎಂತು’ ಎಂಬುದು ’ಹೇಗೆ ಸಾಧ್ಯ’ ಎನ್ನುವುದರ ರೂಪ.
      ಕ್ಷಣಿಕ, ಸುಂದರ ಭಾವಕ್ಕೆ ನನ್ನ ಮನ ನೀಡಿದ ರೂಪವೀ ಕವನ. ಇದು ಸಾಂದರ್ಭಿಕವಾದರೂ ಸಾರ್ವತ್ರಿಕವೂ ಹೌದು. ನಿಮ್ಮಲ್ಲೂ ಈ ಭಾವ ಮೊಳೆತಿರಬಹುದು. ಅದರೊಂದಿಗೆ ಹೆಚ್ಚಾಗಿ ಸಂತಸವನ್ನು ಹೊರಚೆಲ್ಲಲು ಅಣೆಕಟ್ಟುಗಳು! ಹಾಗಿರುವಾಗ ಕನಸ ಸ್ವಂತಿಕೆಯನ್ನಂತೂ ತೊರೆಯಲಾಗದು ಎಂಬ ಆಶಯ. ’ತೋರೆ’=’ತೋರಲು’. ಮುಜುಗರವಿರುವಾಗ ಸಡಗರದ ಭಾವ ತೋರಲು ಹೇಗೆ ಸಾಧ್ಯ? ಎಂದು.

      Delete
  2. ತಟ್ಟನೆ ಮನಕೆ ಆವರಿಸುವ ಭಾವಗಳ ಪರಿಷೆಗೆ, ಅದೇ ಮನವು ಕೂಡಲೆ ಅದಕೊಂದು ಮೂರ್ತ ರೂಪ ಹೇಗೆ ಕೊಡಬಹುದೆಂದು ಈ ಕವನವು ಚಿತ್ರಿಸಿದೆ.

    ReplyDelete
    Replies
    1. ಬದ್ರಿಯವರೇ, ಮೆಚ್ಚಿ ಪ್ರೋತ್ಸಾಹಿಸಿದ ತಮಗೆ ತುಂಬು ಹೃದಯದ ವಂದನೆಗಳು.

      Delete