Friday 14 February 2014

ಯಂತ್ರಮಾನವ



ಮಂಪರು ಉಷೆಯ ನಸುಕು
ದೂರದಿ ಕಣ್ಚುಚ್ಚುವ ಬೆಳಕು
ಗುಂಪಲೆಲ್ಲರಿಗೂ ಮುಸುಕು
ಜಾಗ ದಿಸೆ ನೆನಪು ಮಸುಕು
ಸತತ ಗತಿ ಮಾತ್ರ ಚುರುಕು

ಕಣ್ಣುಜ್ಜಿ ನೋಡೆ, ನಂಬಲಾರೆ
ಬೆಳಕಿನ ದಿಕ್ಕಿಗೆಲ್ಲ ನುಗ್ಗುತ್ತಿರೆ
ನನ್ನ ತಳ್ಳಿ ಇನ್ನಾರೋ ಓಡಿರೆ,
ಸಾವರಿಸಿ ದಿಟ್ಟಿ ಮೇಲೇರಿಸಿದೆ,
ಎತ್ತ ಓಟ, ನಿಲ್ಲಿಸಿರೆಂದರಚಿದೆ.

ಅಚ್ಚರಿ! ಕಿವಿಯಿಲ್ಲ ಕಣ್ಣಿಲ್ಲವಿಲ್ಲಿ
ತಟಸ್ಥ ಮೈ, ಓಟ ಕಾಲ್ಗಳಿಗಿಲ್ಲಿ
ಕುಸಿಯುತಿಹರು ಹಲವರಲ್ಲಿಲ್ಲಿ
ಇಂದ್ರಿಯಜ್ಞಾನವಾರಿಗಿಲ್ಲವಿಲ್ಲಿ,
ಕಣ್ಣೀರೇ, ರಕ್ತವೂ ಸುರಿಯದಿಲ್ಲಿ

ಪ್ರಗತಿಯಲಿ ಸಾಕೇ ಗತಿ ಒಂದೆ
ನೋಡಲಿಹೆ, ಓಡಲೊಲ್ಲೆನೆಂದೆ
ಹಸಿರೆಲೆಯ ಇಬ್ಬನಿಯ ಹೀರಿದೆ
ಮಾಗಿಚಳಿಯ ಹಿತದಿ ಕಂಪಿಸಿದೆ
ಯಂತ್ರವಾಗದೆ ಗೆದ್ದೆ, ಮೇಲೆದ್ದೆ!

2 comments:

  1. ನೀವು ಗೆದ್ದಿರಿ, ಆದರೆ ನಾವಿನ್ನೂ ಆ ಮಂಪರಲ್ಲೇ ಕಳೆಯುತ್ತಿದ್ದೇವೆ ಶೇಷ ಜೀವನ ಯಂತ್ರ ಮಾನವತೆಯ ಭ್ರಮೆಯಲ್ಲಿ! ಒಳ್ಳೆಯ ಮಾರ್ಮಿಕ ಕವನ.

    ReplyDelete
  2. tumbu hridayada dhanyavaadagaLu Badri sir

    ReplyDelete