Monday 21 January 2013

ಇರುವಿನರಿವು (ಅಸ್ತಿತ್ವದ ಮಹತ್ವ)


ಹುಡುಕ ಹೊರಟಾಗ ಇಹದಿ ನನ್ನಿರುವಿನಗತ್ಯ,
ಅರಿತೆಯದಕ್ಕೂ ಮಿಗಿಲು, ನನ್ನಿರುವಿನ ಸತ್ಯ!
ಇರುವಿನ ಸಂಭ್ರಮವ ಬಿಟ್ಟು ಬೇರೆಲ್ಲ ಮಿಥ್ಯ.
ಕಾಣದ ನಾಳೆಯ ವ್ಯರ್ಥ ಚಿಂತೆಯಲ್ಲ ಪಥ್ಯ!

ಯಾರಿಗೂ ನೀಡಿಲ್ಲ ಜಗವ ಹೊರುವ ಕೆಲಸ
ಮತ್ತಾರೂ ಇತ್ತಿಲ್ಲ ಜಗವ ನಡೆಸುವ ಕೆಲಸ.
ಸದಾ ಅರಿವಿರಲಿ, ಭಂಗುರವಿಲ್ಲಿ ಸಹವಾಸ,
ವೈಷಮ್ಯ ಗೆಲ್ಲದೆ ಮೆರೆಯುತಿರಲಿ ಸಮರಸ.

ಮಿದುಳಾಗದಿರಲಿ ಬರಿ ಗೊಡವೆಗಳ ಆಸ್ಥಾನ,
ವ್ಯಾಕುಲರಾಗಿ ಕಟ್ಟದಿರಿ ಚಿಂತೆಯ ಸಂಸ್ಥಾನ
ಗೊಂದಲ ಕ್ಷುಬ್ಧತೆಗಲ್ಲ ಈ ದೇಹ ವಾಸಸ್ಥಾನ
ನಿರಾಳಮನದಿಂದ ಸಾಗಲಿ ಹರ್ಷದ ಪ್ರಸ್ಥಾನ.

ಕಾರ್ಪಣ್ಯ ಕಾರ್ಮೋಡಗಳೇ ಮಳೆಗೆ ಆಧಾರ!
ಮಳೆಯನಾನಂದಿಸಲು ಅಸ್ತಿತ್ವವೇ ಸಹಕಾರ!

ಮಳೆಬೆನ್ನಿಗೆ ಸುಡುಬಿಸಿಲು ನಿಸರ್ಗದ ಆಕಾರ!
ಹಿಗ್ಗಿ ಕುಗ್ಗಿ ಬೀಳುತೇಳುವುದೇ ಬಾಳಿನ ಸಾರ!

ಗುರಿಯ ಬೆನ್ನಟ್ಟಿ ಹಲವರು ಬಾಳಲಿ ಕಂಗಾಲು.
ತುದಿಯ ಕಾಣದೆ ಹೊತ್ತಿರೆ ಖಿನ್ನತೆಯ ಅಳಲು,
ಇರುವಿನಂದದ ಎದಿರು ಅಂತ್ಯವೆಂತು ಮೇಲು?
ಕೊನೆಯದು ತೀರ, ಬದುಕು ಸಾಗರದ ಪಾಲು!

6 comments:

  1. ಏನೋ ತಲೆ ಮೇಲೆ ಹೊತ್ತುಕೊಂಡು ಭಾರಿ ಸುಸ್ತಾಗುತ್ತಿದ್ದೇವೆ ಎನ್ನುವ ನನ್ನಂತ ಮತಿ ಹೀನರನ್ನು ಇಲ್ಲಿ ಚೆನ್ನಾಗಿ ಝಾಡಿಸಿದ್ದೀರ.

    ತುಂಬಾ ಒಳ್ಳೆಯ ಕವನ.

    ReplyDelete
  2. ಲತಕ್ಕ ಅಸ್ತಿತ್ವದ ಅನುಬಂಧಗಳನ್ನು ಮನಮೋಹಕವೆಂಬಂತೆ ಹೆಕ್ಕಿದ್ದೀರಿ. ರೂಪಕಗಳ ಇಂಬಲ್ಲಿ ಕಾವ್ಯ ಮತ್ತಷ್ಟು ಕಳೆಗಟ್ಟುತ್ತದೆ. ನಿಮ್ಮಲ್ಲಿನ ಪದಭಂಡಾರ ಅಗಾದವಾದುದು. ಮೆಚ್ಚುಗೆಯಾಯ್ತು ಕವಿತೆ.

    ReplyDelete
  3. ಬದುಕು ಹೇಗಿರಬೇಕು. ಹೇಗಿದ್ದರೆ ಚೆನ್ನ ಎಂಬ ಆಶಯ ಹೊತ್ತ ಸುಂದರ ಸಾಲುಗಳು.

    ReplyDelete
  4. ಬದುಕು ಸೂಕ್ತವಾಗಿ ನೆಡೆಸಲು, ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವಂತಾ ಸಾಲುಗಳು ಲತಾ, ತುಂಬಾ ಇಷ್ಟವಾಯಿತು.

    ReplyDelete
  5. nammathanada arthavanna arthagarbhithavagi heliddiri........

    ReplyDelete
  6. dhanyavaadagaLu ellarigoo.

    ReplyDelete