Tuesday 11 December 2012

ಈಸು-ಇದ್ದು ಜಯಿಸು!


ನಿರೀಕ್ಷೆಯಿರೆ ಕಂಗಳಲಿ
ಸಮೀಕ್ಷೆಯು ಮನದಲಿ
ನೋಟವಿರೆ ಬಾನೆಡೆಗೆ
ಓಟವಿದೆ ಗುರಿಯೆಡೆಗೆ!

ದಾರಿಯಿದು ದುರ್ಗಮ,
ಬದುಕನಿಸಿರೆ ಕೃತ್ರಿಮ,
ಇರೆ ತೃಪ್ತಿಯ ಮೈತ್ರಿ,
ಪೊರೆವಳು ಈ ಧಾತ್ರಿ.

ನಿರ್ಮಲ ತನು ಮನ,
ನಿಚ್ಚಳ ಅವಲೋಕನ,
ನಿಲುವಿರಲಿ ಬಾನೆತ್ತರ
ಅರಿವಿರಲಿ ನಿರಂತರ.

ತ್ರಸ್ತ ಮನವ ಸಂತೈಸಿ
ಆಪ್ತ ಜನಕೆ ಪ್ರಸ್ಪಂದಿಸಿ
ಎಲ್ಲರೊಳಗೆ ಸೇರಿ ಬೆರೆ,
ಆದಲ್ಲಿ ನೀಡುತ ಆಸರೆ.

ಅಣು ನೀ ಬ್ರಹ್ಮಾಂಡದಿ,
ಋಣಿ, ಬುವಿಯಾತಿಥ್ಯದಿ,
ಕಳೆ ಪ್ರತಿಶ್ವಾಸವನಂದದಿ,
ತಾಮರದೆಲೆಹನಿಯಂದದಿ!

7 comments:

  1. ಮೇಡಮ್..
    ಮೊದಲಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ...
    ತುಂಬಾ ಸುಂದರವಾದ ಕವನ ....
    ಎರಡು-ಮೂರು ಪದಾಗಳಿರುವ ಸಾಲುಗಳಲ್ಲಿ ಅದೆಷ್ಟು ಭಾವ??...
    ಇನ್ನು ಪ್ರಾಸಗಳೂ ಸಹ ಅಷ್ಟೇ..ಅವುಗಳ ಹೊಂದಾಣಿಕೆ ಖುಷಿ ಕೊಟ್ಟಿತು...
    ನಾವೆಲ್ಲಾ ಗದ್ಯದಲ್ಲಿ ಬಳಸುವ ಪದಗಳನ್ನೆ ಕವಿತೆಯಲ್ಲೂ ಗೀಚುತ್ತೇವೆ,ಆದರೆ ಇವುಗಳಲ್ಲಿ ಬಳಸಿದ ಪದಗಳಿಗೆ ಕಾವ್ಯದ ಸೊಗಡಿದೆ ಅದು ನನಗೆ ಇಷ್ಟವಾಯ್ತು..
    ಬರೆಯುತ್ತಿರಿ..
    ಓದುತ್ತಿರುತ್ತೇವೆ...
    ಹಾಂ ನನ್ನಂತಹವರಿಗಾಗಿ ಒಂದಿಷ್ಟು ಶಬ್ಧಾರ್ಥ..ಓದಲು ಸುಲಭವಾಗುವುದೇನೋ ಎಂಬ ಆಸೆ ಹೊತ್ತು...
    ಕೃತ್ರಿಮ=ಸಹಜವಲ್ಲದ,ತ್ರಸ್ತ=ಹೆದರಿದ.ತಾಮರ=ಕಮಲ..
    ನಮಸ್ತೆ..

    ReplyDelete
    Replies
    1. ಚಿನ್ಮಯ್, ಹಾರ್ದಿಕ ಧನ್ಯವಾದಗಳು. ತಮ್ಮ ಪ್ರೀತಿ ವಿಶ್ವಾಸ, ಪ್ರೋತ್ಸಾಹ ಹೀಗೆ ಇರಲಿ.

      Delete
  2. ಬದುಕಿನ ಧನಾತ್ಮಕ ಚಿಂತನೆಗಳನ್ನು ಉತ್ತೇಜಿಸಬಲ್ಲ ಕವಿತೆ ಲತಾಕ್ಕ.. ತ್ರಸ್ತ, ಕೃತ್ರಿಮ ಎಂಬ ಪದಗಳ ಪ್ರಯೋಗ ಹಿಡಿಸಿತು.. ಮನಸ್ಸಿನಲ್ಲುಳಿದು, ದೈನಿಕದಲ್ಲಿ ಒತ್ತಾಸೆಯಾಗಿ ನಿಲ್ಲಬಲ್ಲ ಯೋಚನೆಗಳನ್ನು ಉತ್ತೇಜಿಸುತ್ತದೆ.. ಹಿಡಿಸಿತು ಕವಿತೆ :)

    ReplyDelete
  3. ಪ್ರಸಾದ್, ತಮ್ಮ ನುಡಿಗಳಿಗೆ ಆಭಾರಿ.

    ReplyDelete
  4. ಬಿದ್ದ ಮೇಲೆ ಗುದ್ದಾಡಲೇ ಬೇಕೆದ್ದು ಮೇಲೆ ಬರಲು! ಸುಳಿಯಿರಲಿ, ಸೆಳವಿರಲಿ... ಚಳಿಬಿಟ್ಟು ಕೈಕಾಲಲ್ಲಾಡಿಸದಿದ್ದರೆ ಮುಳುಗುವುದು ನಿಶ್ಚಯ!

    ಉತ್ತಮ ರಚನೆ!

    ReplyDelete
  5. ಪ್ರೇರೇಪಿಸುವ ಕವನಗಳೆಂದರೆ ನನಗೆ ಅಚ್ಚು ಮೆಚ್ಚು. ಈ ಕವನದ ಸಕಾರಾತ್ಮಕ ಭಾವ ಮನವನ್ನು ತುಂಬಲಿ

    ReplyDelete
  6. ತುಂಬಾ ಅರ್ಥ ಗರ್ಭಿತವಾದ ಸಾಲುಗಳು
    ನಿತ್ಯ ಜೀವನಕ್ಕೆ ಸ್ಫೂರ್ತಿ ತುಂಬುವ ಸಾಲುಗಳು !!
    ಚೆನ್ನಾಗಿ ಮೋದಿ ಬಂದಿದೆ ಲತಾ ಮೇಡಂ !

    ReplyDelete