Thursday 23 August 2012

ಅನುರಾಗದ ಆಯಾಮ!



ಬಾನಲಿ ಹರಿದಿರಲು ಬೆಳದಿಂಗಳ ಹೊನಲು,
ಬಾಳಲಿ ಮೂಡಿಸಿಹೆ ಹೊಂಗಿರಣದ ಕವಲು!
ಒಲವಿನ ಕವಲ ದಿಟ್ಟಿಸೆ ಅಚ್ಚರಿಯ ಕಂಗಳು,
ಹುಸಿನಗೆ ಬೀರುತಿರೆ, ಲಜ್ಜೆಯಿಲ್ಲದ ತಿಂಗಳು!

ನರನಾಡಿ ಕಂಪಿಸೆ, ಜಿನುಗುವ ಸೋನೆಮಳೆ
ಜೀವದ ಭಾವ ಸೇರಿ ಹರಿದಿಹೆ ಹೊನ್ನ ಹೊಳೆ!
ಭಾವೈಕ್ಯದ ಸಂತಸದಿ ಅರಳಿರೆ, ಜೀವಸುಮ,
ಜೀವವೀಣೆ ಮಿಡಿದಾಗ ಅನುರಾಗ ಸಂಗಮ!

ಭಾವಕೆ ಶೃತಿ ಸೇರಿಸಿ ಹೃದಯಲಯದ ತಾನ,
ತಂಗಾಳಿಯ ಜೊತೆ ಉಲಿದಿದೆ ಅನುರಕ್ತಿಗಾನ!
ಆಲೈಸುತ ಓಲೈಸುತ ತೋಷಿಸಿರೆ ತನು ಮನ,
ಕನಸಿನಲೂ ಜೀವಕೆ ಭಾವೈಶ್ವರ್ಯದ ಸನ್ಮಾನ!

ಲೌಕಿಕಸ್ತರವ ಮೀರಿ ಸಲಹಲಿದನು ದೇವಾನಂಗ
ದೇಹ ಬಂಧ ತೊರೆದು ಹಾರಲಿ ಪ್ರೇಮವಿಹಂಗ!
ಹರಯ ರೂಪ ಬೇಡದೆ ಕಾಣಲಿ ನವ ಆಯಾಮ,
ಅಮರವಾಗಲಿ ಹೃನ್ಮನದ ಚಿರಂತನ ಸಮಾಗಮ.

5 comments:

  1. ಬಹಳ ಶ್ರಮವಹಿಸುತ್ತೀರಿ ಲತಾ ಅವರೇ. ಭಾವಸೆಲೆಯಲ್ಲಿ ಹೊಸ ಆಯಾಮಗಳನ್ನು ಕಾಣುತ್ತಿದ್ದೇನೆ. ಓದಲು ಖುಷಿ ಕೊಡುವುದು ರಚನೆ ಪಕ್ವವಾಗಿದ್ದಾಗ.

    ReplyDelete
    Replies
    1. ಪುಷ್ಪರಾಜ್ ಅವರೇ, ನಿಮ್ಮ ನಲ್ಮೆಯ ನುಡಿಗಳಿಗೆ ಧನ್ಯವಾದಗಳು.

      Delete
  2. ಅರಳು ಮಲ್ಲಿಗೆಯ
    ಗಮದ ಪರಿಮಳಕೆ
    ಅರಳಿ ನಿಂತವನು ನಾನು,
    ಅರಳಿಸಿದ ಮಲ್ಲಿಗೆಯು ಬಾಡಲೇಕೆ?
    ಬಾಡುವ ಮುನ್ನ ಹೃದಯ
    ಕಮಲ ಸೇರಬಾರದೇಕೆ?

    ನನ್ನದೇ ಕವಿತೆಯ ಸಾಲುಗಳನ್ನು ನೆನಪಿಗೆ ತಂದ ಕವಿತೆ ಇದು.. ಮಧುರ ಭಾವಗಳನ್ನು ಅರಳಿಸುವ ಕಲೆಯನ್ನು ಚಾಕಚಕ್ಯತೆಯಿಂದ ಒಗ್ಗಿಸಿಕೊಂಡಿದ್ದೀರಿ.. ನಿಮ್ಮ ಕವಿತೆಗಳಲ್ಲಿನ ಲಯವನ್ನು ಮನಮೆಚ್ಚಿ ಅಸ್ವಾದಿಸುತ್ತೇನೆ.. ಚೆಂದದ ಕವಿತೆ ಲತಕ್ಕ.. ನಿಮ್ಮ ಪರಿಶ್ರಮ ಪ್ರತಿ ಕವಿತೆಯಲ್ಲೂ ಪ್ರತಿಬಿಂಬಿತವಾಗುತ್ತದೆ..:)))

    ReplyDelete
  3. ಲಯ ಕಾಪಾಡಿಕೊಂಡು, ಭಾವ ತೀವ್ರತೆಯನ್ನು ಬರೆದುಕೊಡುವುದು ನಾನು ನಿಮ್ಮಿಂದ ಕಲಿಯಲೇ ಬೇಕಾದ ಪಾಠ.

    ನಮಸ್ಕಾರ ಗುರುಗಳೇ.

    ReplyDelete
    Replies
    1. ಮಂಜು, ಬದ್ರಿನಾಥ್ ಅವರೇ ತುಂಬು ಹೃದಯದ ಧನ್ಯವಾದಗಳು.

      Delete