Saturday 22 November 2014

ಬದುಕೇ ನಿನಗೆ ನೀನೇ ಸಾಟಿ!!


ಹುಟ್ಟೇ ಇಲ್ಲದ ಹರಿಗೋಲಿತ್ತು,
ಸುಳಿಭರಿತ ನದಿಯಲಿ ಬಿಡುವೆ
ಸುಖದ ಹೊನಲಲಿ ತೋಯಿಸಿ
ನೋವಗಾಯವಾರದಂತಿಡುವೆ!

ಉಸಿರು ಕಟ್ಟುವೆಡೆ ತಂದಿಡುವೆ,

ಉಸಿರಾಡುವ ಅನಿವಾರ್ಯವ!
ಕಂಗಳಲಿ ಹುಲುಸಾಗಿ ಹರಡುವೆ
ನನಸಾಗದ ಕನಸಿನ ಹಂದರವ!

ಹಾರಲೊಂದೇ ರೆಕ್ಕೆಯ ನೀಡಿ
ಹಾರುವ ಆಸೆಯನಿಮ್ಮಡಿಸುವೆ
ಮಧುಮೇಹಿಗಿತ್ತ ಸಿಹಿಯಂತೆ,
ಅಕಾಲ ಹರ್ಷಧಾರೆ ಹರಿಸುವೆ!

ಹುಳುಕಲಿ ಥಳುಕನಿಟ್ಟು ಇಹದಿ,
ಮೋಹದ ಹುಳವನಿಟ್ಟು ಮನದಿ
ಪುತ್ಥಲಿಯೊಲು ಬಳುಕಿಸಿ ಕುಣಿಸಿ
ಅರಿವಿಡುವೆ ಉಳುಕ ನೋವಲಿ!


ಗುರಿಯೆಂಬ ಭ್ರಮೆಯ ಬೆನ್ನಟ್ಟಿಸಿ

ಮಸುಕಿನ ದಾರಿಯಲಿ ದಣಿಸುವೆ
ಸಾಕಿನ್ನು ಬದುಕೋಣ ಎಂಬಾಗ,
ಕೊನೆಘಳಿಗೆ ಬಂತೆಂದುಸುರುವೆ!

ಬದುಕೇ! ನಿನಗೆ ನೀನೇ ಸಾಟಿ!!

3 comments:

  1. ಬದುಕಿನ ದ್ವಂದ್ವಗಳ ಸೂಕ್ತ ವರ್ಣನೆ. ಹೀಗೆ ಬರೆಯುವುದರಲ್ಲಿ ಡಾಕ್ಟ್ರೆ ' ನಿಮಗೆ ನೀವೇ ಸಾಟಿ '

    ReplyDelete
  2. ನಮ್ಮ ಹಿಡಿತಕೆ ಸಿಗದೀ ಮಾಯೆ ಬದುಕು!
    ಇರುವ ನಲಿವುಗಳನು ಉಳಿಸದು, ಇಲ್ಲದ ನೋವುಗಳ ಹೇರಿಸುವುದು.
    ನಿಜ ಬದುಕೇ ನಿನಗೆ ನೀನೆ ಸಾಟಿ!

    ReplyDelete
  3. ರವಿಯಣ್ಣ, ಬದ್ರಿ ಸರ್ ಧನ್ಯವಾದಗಳು.

    ReplyDelete