ನನ್ನ ಜೀವ ನೀನೆಂದ, ಚಂದಕಿಂತ ಚಂದ ಎಂದ. ಇಬ್ಬರ ಭಾವದ ಮಿಡಿತವೊಂದೇ, ತುಡಿತವೊಂದೇ ಎಂದ. ಅವಳೋ, ಭಾವೋತ್ಕಟತೆಯಲಿ ಮಿಂದೆದ್ದಳು. ಅವನೋ, ತನುಮನವನಾವರಿಸಿ, ಅವಳ ದಿನಚರಿಯಾದ! ಹುಸಿಯಿರಲಿಲ್ಲ, ಹಸಿಯಿರಲಿಲ್ಲ, ನಂಬದಿರಲು!
ಕೆಲವೇ ದಿನಗಳಲಿ ’ಕ್ಷಮಿಸು’ ಎಂದ. ಮಾತು ತೊರೆದು ನಿರ್ಲಿಪ್ತನಾದ. ಸೋಗೋ, ಕೊರಗೋ ಅರಿಯಳು. ಆಗ ಮಂಕು ಕವಿದಿತ್ತೋ, ಈಗ ಸರಿದಿತ್ತೋ ಗೊತ್ತಿಲ್ಲ!
ಬಾಳು ಮರುಭೂಮಿಯಾದೊಡೆ ಮೃಗತೃಷ್ಣೆಗಳು ಸಹಜವೆಂಬ ಸತ್ಯದರ್ಶನವಾಯ್ತು! ಅವಳಿಗೀಗ ಒಂದೇ ದಾರಿ ನಂಬಿಸಿಕೊಳ್ಳಬೇಕು, ಸಿಕ್ಕಿದ್ದು ಒಯಸಿಸ್ ಅಲ್ಲ, ಮರೀಚಿಕೆಯಷ್ಟೇ! ಕೆಲವರ ಜೀವನ ಹೀಗೇ ಏನೋ ಎಪ್ರಿಲ್ ೧ ವರ್ಷದಲಿ, ಬಹಳ ಸಲ ಬರುವುದೇನೋ?!!
ಗುರುತ್ವಕೆಂದೂ ಶರಣು, ಕಲಿಕೆಗೆ ಶಿರಸಾ ನಮನ, ಜತೆಗೆ ಗುರುತರ ನೋವಿತ್ತವರಿಗೆ ವಿಶೇಷ ನಮನ ಬಿದ್ದೊಡನೆ ಪುಕ್ಕಟೆ ಸಿಗುತಿದ್ದ ಅಣಕಗಳಿಗೆ ನಮನ ಹಿಂದುಳಿದಿರೆ ಮುಂದೂಡಿದ ಮೂದಲಿಕೆಗೆ ನಮನ
ಆಗುತಿತ್ತೇ ಅವರಿಲ್ಲದಿದ್ದರೆ ಪ್ರತಿ ನೋವು ಗೆಲುವು, ಬರುತಿತ್ತೇ ಬಿದ್ದೊಡನೆ ಮೇಲೆದ್ದು ನಗುವ ಛಲವು, ಸಾಂತ್ವನದ ಸೋಗಲಿ ವಿಕೃತಿಯಿದೆಯೆಂಬ ಅರಿವು. ನಲಿವ ಮೀರಿಸಿ ಗುರುವಾಗಿ ಕಲಿಸಿತ್ತು ಪ್ರತಿ ಎಡವು
ಕಲಿಕೆಯ ಬಳಕೆಗೊಂದು ಒಳಗಣ್ಣ ನೀಡಿ ಹೆತ್ತವರು, ಜ್ಞಾನದ ಕೀಲಿಯು ವಿವೇಕವೆಂದರುಹಿ ಗುರುವಾದರು. ನಭದೆಡೆಗೆ ಓಟವಿದ್ದರೂ ನೆಲಬಿಡದ ಮರದ ಬೇರು, ಸಾಧನೆಯ ಯಶಸ್ಸು ನಮ್ರತೆಯಲೆಂದರುಹಿದ ಗುರು.
ಪ್ರತಿ ಸೋಲಿನಲಿ ಕಾಣತೊಡಗಿತು ಗೆಲುವಿನ ಬೆಳಕು ನೋವಿನ ಉಳಿಪೆಟ್ಟಲಿ ದೂರಾಯಿತು ಭವದ ಅಳುಕು ಏರಲು ಮೆಟ್ಟಿಲಾಯಿತು ಅಡ್ಡವಾಗಿದ್ದ ಪ್ರತಿ ತೊಡಕು. ಶಿಕ್ಷೆಯಲಿ ಶಿಕ್ಷಣವಿತ್ತು ಗುರುವಾಯಿತೆನಗೆನ್ನ ಬದುಕು!