ಸಂತೋಷಿಸಿ, ಕುಣಿದು ಕುಪ್ಪಳಿಸಿ, ರಕ್ತ ಮಾಂಸದ ಔತಣವಿಂದಿರಲಿ, ಮದ್ಯರಸದ ಹೊನಲಲಿ ತೇಲಾಡಿ, ವಿಜಯ ವೈಭೋಗ ಅನುಭವಿಸಿ, ಭಾರತ ನಾರುತಿರುವುದ ನೋಡಿ. ಓ ದಾನವರೇ, ನಿಮ್ಮಿಚ್ಛೆಯಂತೆ, ಮೆರೆಯುತಿದೆಯಿಲ್ಲಿ ಅರಾಜಕತೆ, ನಲಿಯುತಿದೆಯಿಲ್ಲಿ ಅನೈತಿಕತೆ, ಹಾಸುಹೊಕ್ಕಿದೆ ಅನಾಗರೀಕತೆ, ದೈವಶಕ್ತಿಯೀಗಂತೂ ದಂತಕತೆ! ನ್ಯಾಯದೇವಿಯ ಕರುಳ ಹರಿದಿರೆ, ರಕ್ಕಸಕುಲ ಅಟ್ಟಹಾಸಗೈಯುತಿರೆ, ಗೋಮುಖವ್ಯಾಘ್ರರು ಹೆಚ್ಚುತಿರೆ, ಅಮಾನುಷತ್ವ ಮಿತಿ ಮೀರುತಿರೆ, ಅದೆಂದೋ ಸಮುದ್ರಮಥನದ ಕರೆ? Note: ದೆಲ್ಲಿಯಲ್ಲಿ 29ರಂದು ದಾಮಿನಿಯ ದಾರುಣ ಸಾವಿನ ಸುದ್ದಿ ಕೇಳಿದಾಗ ಅತೀವ ನೋವಿನಲ್ಲಿ ಹೊರಹೊಮ್ಮಿದ ಸಾಲುಗಳಿವು. ಇವುಗಳು ಭಾರತದ ಬಗ್ಗೆ ತೋರಿದ ನಿಲುವಲ್ಲ. ಈ ಘಟನೆಯಿಂದ ಮನಸ್ಸು ಅತಿಯಾಗಿ ಘಾಸಿಗೊಂಡಿದ್ದರೂ ನನ್ನ ದೇಶಪ್ರೇಮಕ್ಕೆ ಧಕ್ಕೆ ತಂದಿಲ್ಲ. ಭಾರತದ ಭವಿಷ್ಯ ಉಜ್ವಲವಾಗಿದೆಯೆಂದು ಇಂದೂ ನಂಬಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಲೂ ಇದ್ದೇನೆ.