Tuesday 30 October 2012

ಇಂದು ಎಂದೆಂದೂ!



ನಾಳೆ ಅನೂಹ್ಯನಿಗೂಢ ಇಂದು ಸುಂದರ
ಅತ್ತಿಹಣ್ಣಿನ ರೂಪದಂದದಿ ನಾಳೆ ನಶ್ವರ!
ಇಂದು ನಂದು! ನಾಳೆ ಸಿಕ್ಕರೆ ಉಪಕಾರ!
ತೃಪ್ತಿಯಲಿಂದನು ಕಳೆಯೆ ನೀ ಸರದಾರ!

ನಾಳಿನ ಚಿಂತೆ ನಾಳೆಯನು ಬದಲಿಸದು,
ನಾಳೆಯ ಭೀತಿ ಇಂದನು ಮರೆಸುವುದು.
ಮೌಢ್ಯವದು ನಾಳೆಗೆಂದು ಬದುಕುವುದು,
ಕಾಣದ ನಾಳೆಗೆ ಇಂದನು ಕೊಲ್ಲುವುದು!

ನಿನ್ನೆನಾಳೆಗಳಲಿ ಇಂದನು ಸೊರಗಿಸದಿರಿ
ಭೂತಕಾಲದಲಿ ಭೂತವಾಗಿ ಕೊರಗದಿರಿ!
ನಾಳಿನ ಭಯದಲಿ ಬೆಂಡಾಗಿ ಹೆಣಗದಿರಿ,
ಇಂದಿನ ರಮ್ಯತೆಯ ಜೀವಿಸಿ ನಲಿಯಿರಿ.

ಜ್ವಲಂತ ನೆನಪುಗಳು ಇಂದನು ಸುಡದಿರಲಿ
ನೆನಪಿನಗೋರಿಯಡಿ ಜೀವ ಶವವಾಗದಿರಲಿ
ನಾಳೆಗಾಗಿ ಮನಸ್ಥೈರ್ಯ, ಕನಸುಗಳಿರಲಿ!

ಕೈಜಾರುವ ಮುನ್ನ ಇಂದನು ಮರೆಯದಿರಿ!

3 comments:

  1. ತುಂಬಾ ಅರ್ಥವತ್ತಾದ ಕವಿತೆ ಇದು.ಬದುಕು ಈಗೇನಿದೆಯೋ ಅದೇ ಖರೆ.ನಾಳೆ ಎಂಬುದು ಗೊತ್ತಿಲ್ಲ.ಈಗಿನದಷ್ಟೇ ವಾಸ್ತವ.ನಾಳಿನ ಕನಸಿಗೆ ಇಂದಿನ ಸಮಯವ ವ್ಯರ್ಥಗೊಳಿಸದೆ ಜೀವನ ಪ್ರೀತಿಹೊಂದಿರೆನ್ನು ಕವಿ ಮನದಾಶಯ ಇಷ್ಟವಾಗುವುದು

    ReplyDelete
  2. ಬೆಂಬಿಡದೇ ಕಾಡುವ ಭೂತದ ನೆನಪುಗಳಿಂದ ಬಿಡಿಸಿಕೊಳ್ಳದೇ, ಭವಿಷ್ಯತ್ತಿನ ಭಯದ ಚಿಂತೆಯಿಂದ ಹೊರಬರದೇ, ಇಂದನ್ನು ಸತತವಾಗಿ, ನಿಧಾನವಾಗಿ ಕೊಲ್ಲುತ್ತಾ ಸಾಗುವುದು ಮನುಜ ಸಹಜ ಗುಣ. ಈ ಮನಸ್ಥಿತಿಯಿಂದ ಹೊರಬರಬೇಕಾದರೆ, ಎತ್ತರಕ್ಕೆ ಏರಬೇಕಾದರೆ, ಮನುಜನಲ್ಲಿ, ಪ್ರೌಢ ಚಿಂತನೆ, ಜ್ಞಾನ ಹಾಗೂ ಭಗವಂತನ ಅರಿವು ಮನೆಮಾಡಬೇಕು.
    ಕವನದ ಒಟ್ಟಾರೆ ಆಶಯ ನಿಜಕ್ಕೂ ಇಷ್ಟವಾಯಿತು. ತಮ್ಮ ಅಪಾರ ಪದಭಂಡಾರ, ಒಟ್ಟಂದವನ್ನು ಹೆಚ್ಚಿಸಿ, ಓದುಗನಿಗೆ ಖುಷಿ ನೀಡಿ, ಓದಿಗೂ ಸಹಕಾರಿಯಾಗುತ್ತದೆ.

    ReplyDelete
  3. ಬದುಕನ್ನು ಹೇಗೆ ಸವಿಯಬೇಕು. ಇರುವುದರಲ್ಲಿ ಸಂತಸದ ಘಳಿಗೆಗಳನ್ನೂ ಕಾಣುವುದು ಹೇಗೆ ಎಂದು ಸ್ಪಷ್ಟವಾಗಿ ತಿಳಿಯಹೇಳುವ ಸುಂದರ ಕವನ.

    ReplyDelete