Tuesday 18 September 2012

ಅಂದು-ಇಂದು

ಚಿತ್ರ: ಗೂಗಲ್ ಕೃಪೆ

ಮನೆಯಾಗಿತ್ತಂದು ನಲಿವ ನಂದನವನ,
ಬದುಕಾಗಿತ್ತು ಸರಾಗ ಸುಮಧುರ ಗಾನ
ಅಪ್ಪ ಅಮ್ಮ ತೋರಿದ್ದರು ಶಾಂತಮನ,
ಅಧೈರ್ಯ ಅಸ್ಥಿರತೆಯಿಲ್ಲದ ಆಲಾಪನ

ಇಂದೋ ಜಟಿಲ ಪ್ರಕ್ಷುಬ್ಧ ಎಲ್ಲರ ಮನ,
ಅಶಾಂತ, ಅತಂತ್ರ ಜೀವನದ ಅಧೀನ!
ಅಳುಕು ಥಳುಕು ನಡೆಯ ಕೃತಕ ಯಾನ
ರಾರಾಜಿಸುತಿದೆ ಇಲ್ಲಿ ಮೌಲ್ಯಗಳ ಪತನ!

ತರುತಿತ್ತಂದು ಹರುಷ ಅತಿಥಿಗಳಾಗಮನ
ಬೆರೆತು ನಲಿಯಲು ಬೇಕಿರಲಿಲ್ಲ ಆಹ್ವಾನ
ಕಂಡು ನೆರೆ, ಹೊರೆಗಾಗಿ ಬಂದ ವಿಧಾನ,                       
ನೀತಿಪಾಠವನರುಹುತಿತ್ತು ಅಪ್ಪನ ಜೀವನ!

ನೆಮ್ಮದಿಗೆ ನೀಡಿತ್ತು ಮನೆಯಂದು ಆಶ್ರಯ
ಬರಿ ತುಮುಲಗಳ ಬೀಡು ಇಂದೀ ಆಲಯ
ಚಿಣ್ಣರಂಗಳದಿ ಆ ಮನೆಯೇ ಮಂತ್ರಾಲಯ
ಪಾಳುಬಿದ್ದ ಈ ಮನೆಯೋ ಯಂತ್ರಾಲಯ!

2 comments:

  1. ಕಾಲನ ಹೊಡೆತಕ್ಕೆ ಸಿಕ್ಕು ಬದುಕು ಕಾಣುವ ವೈರುಧ್ಯಗಳ ಮನ ಹಿಂಡುವಂತಹ ಕವನ.

    ReplyDelete
  2. ನಿಜ. ಅಂದಿದ್ದದ್ದು ಇಂದಿಲ್ಲ. ಮುಂದಿನದು ದೇವ ಬಲ್ಲ! ಎತ್ತ ಸಾಗಿದೆ ಜೀವನ ಪಯಣ ಈ ಹಾಳುದಾರಿಯಲಿ!

    ಉತ್ತಮ ಪ್ರಸ್ತುತಿ

    ReplyDelete