Thursday, 23 August 2012

ಅನುರಾಗದ ಆಯಾಮ!



ಬಾನಲಿ ಹರಿದಿರಲು ಬೆಳದಿಂಗಳ ಹೊನಲು,
ಬಾಳಲಿ ಮೂಡಿಸಿಹೆ ಹೊಂಗಿರಣದ ಕವಲು!
ಒಲವಿನ ಕವಲ ದಿಟ್ಟಿಸೆ ಅಚ್ಚರಿಯ ಕಂಗಳು,
ಹುಸಿನಗೆ ಬೀರುತಿರೆ, ಲಜ್ಜೆಯಿಲ್ಲದ ತಿಂಗಳು!

ನರನಾಡಿ ಕಂಪಿಸೆ, ಜಿನುಗುವ ಸೋನೆಮಳೆ
ಜೀವದ ಭಾವ ಸೇರಿ ಹರಿದಿಹೆ ಹೊನ್ನ ಹೊಳೆ!
ಭಾವೈಕ್ಯದ ಸಂತಸದಿ ಅರಳಿರೆ, ಜೀವಸುಮ,
ಜೀವವೀಣೆ ಮಿಡಿದಾಗ ಅನುರಾಗ ಸಂಗಮ!

ಭಾವಕೆ ಶೃತಿ ಸೇರಿಸಿ ಹೃದಯಲಯದ ತಾನ,
ತಂಗಾಳಿಯ ಜೊತೆ ಉಲಿದಿದೆ ಅನುರಕ್ತಿಗಾನ!
ಆಲೈಸುತ ಓಲೈಸುತ ತೋಷಿಸಿರೆ ತನು ಮನ,
ಕನಸಿನಲೂ ಜೀವಕೆ ಭಾವೈಶ್ವರ್ಯದ ಸನ್ಮಾನ!

ಲೌಕಿಕಸ್ತರವ ಮೀರಿ ಸಲಹಲಿದನು ದೇವಾನಂಗ
ದೇಹ ಬಂಧ ತೊರೆದು ಹಾರಲಿ ಪ್ರೇಮವಿಹಂಗ!
ಹರಯ ರೂಪ ಬೇಡದೆ ಕಾಣಲಿ ನವ ಆಯಾಮ,
ಅಮರವಾಗಲಿ ಹೃನ್ಮನದ ಚಿರಂತನ ಸಮಾಗಮ.

Monday, 13 August 2012

ಬಾಳರಥದ ಪಥ!


ಜೀವನದಿ ಪ್ರತಿದಿವಸ ಹೊಸ ಅಚ್ಚರಿ!
ಸಂತಸ ವಿರಸಗಳ ಬಿಡದ ಉಸಾಬರಿ
ವಿರಾಮವೆಂಬಷ್ಟರಲ್ಲಿ ಸಶೇಷದ ಪರಿ!
ಮುಂದೇನೋ, ಮತ್ತೆ ಅಳುಕು ಕೆದರಿ!

ಅಳುಕು ಶಾಶ್ವತ, ನಾಳೆಯನೂ ಮೀರಿ,
ಭಯ ಇಮ್ಮಡಿಸಿ ದುರಾಸೆಯಾಗಿ ಹೀರಿ,                     
ಜೋಳಿಗೆ ತುಂಬಿಸೆ ಮರುಳು ಸಾಮಾಗ್ರಿ
ಕಿವುಡನಿಗೆ ಕೇಳೀತೇ ಚಿತೆಯ ಛೀಮಾರಿ!

ಮಿಥ್ಯೆ ತಥ್ಯಗಳ ಜ್ಞಾನಶರಧಿಗೆ ಆಭಾರಿ
ಧೀಧೃತಿ ಹೊರಲಿ ಹೃನ್ಮನದ ಅಂಬಾರಿ
ಸಂಭ್ರಮಿಸಿ ಜೀವಿಸೆ, ಇಂದಿನ ಅದ್ದೂರಿ
ನಿಶ್ಚಿತಾಂತ್ಯಕೆ ಸಾಗಲಿ ಸಾರ್ಥಕ ಸವಾರಿ!