 |
| ನನ್ನ ತೈಲಚಿತ್ರ |
ಭಾವಬಂಧಿ
------------
ಭಾವ ಬಂಧಿಗಳು ನಾವೀ ಜಗದಲಿ,
ಪ್ರತಿಭಾವಕಿತ್ತ ಆ ರೂಪದ ಹಂಗಲಿ,
ನಾವೇ ಹೆಣೆದಿಟ್ಟ ಭಾವಹಂದರದಲಿ,
ತೊರೆಯಲಾಗದ ಭಾವಪಂಜರದಲಿ.
ಶುಚಿರ್ಪಾವಿತ್ರ್ಯ ಹೊತ್ತ ದೈವ ಭಾವ
ವಾತ್ಸಲ್ಯ ಪ್ರೇಮರೂಪಿ ಮಾತೃಭಾವ
ಅನುರಾಗ ಧಾರೆಯೆರೆವ ಪ್ರಿಯಭಾವ
ರೋಷಕುಸಿರ ತುಂಬುವ ದುಷ್ಟಭಾವ
ಬಂಧ ಹೊಸೆ-ಬೆಸೆದು ಮೆರೆವ ಭಾವ
ಮುದುಡಿಸಿ ಓಲೈಸಿ ನಲಿಸುವ ಭಾವ,
ಶೈಶವ ಮುಗ್ಧತೆಯಲಿ ತಲ್ಲೀನಭಾವ
ಸಾಮರಸ್ಯವ ಹೀರುವ ವಿಕೃತ ಭಾವ
ರಾಧೆಯ ಕೃಷ್ಣನಲ್ಲ ಮೀರೆಯ ಭಾವ
ಮೀರೆಯ ಪ್ರಭುವಲ್ಲ ರಾಧೆಯ ಭಾವ
ಜಗಕೆ ಶಿವನಿರೆ ಮಂಗಲ ಶಿವಂಭಾವ
ತಾಂಡವವಾಡೆ ದಕ್ಷನಿಗೆ ರೌದ್ರಭಾವ
ನಾವೋ ಈ ಭಾವಪೈರಿನ ತೆನೆಗಳು,
ಅದರಲೆಯುಬ್ಬರ ಇಳಿತದಿ ನಾವೆಗಳು
ಭಾವಸೂತ್ರದಾಟದ ಬರಿ ಪುತ್ಥಳಿಗಳು,
ಭಾವಸೆಲೆಯ ಜಿನುಗುವ ಒರತೆಗಳು.
 |
| ನನ್ನ ಒಂದು ತೈಲಚಿತ್ರ |
ಕುಸುಮಕೂ ನವಿರಾದ
ಕೋಮಲತೆಯ ಹಿಡಿವುದೆಂತು?
ಮುಜುಗರದ ತೆರೆಯಿರೆ
ತೋರೆ ಸಡಗರದ ಭಾವವೆಂತು?
ಉಸುರಿದ ಭಾವವಿಳಿದು
ಎದೆಗಾಸರೆಯಾಗದಿರಲೆಂತು?
ಮನದ ಬಿಸಿ ಕಸಿವಿಸಿಯ
ಮೊಗದಿ ತಂದು ತೋರಲೆಂತು?
ಭಾವೈಸಿರಿ ಕಂಗಳಲಿರೆ
ತನುಮನವ ಆವರಿಸಲಿರದೆಂತು?
ವಸಂತ ಉಲಿಯುತಿರೆ
ಸಂತಸದ ನಲಿವ ತಡೆವುದೆಂತು?
ಅನುರಾಗದ ರಾಗವಿರೆ
ಶೃತಿಯು ಗತಿ ತಪ್ಪುವುದೆಂತು?
ಜಗದ ಅಂಕುಶದಡಿಯಿರೆ
ಕನಸ ಸ್ವಂತಿಕೆ ತೊರೆಯಲೆಂತು?
ಮಂಪರು ಉಷೆಯ ನಸುಕು
ದೂರದಿ ಕಣ್ಚುಚ್ಚುವ ಬೆಳಕು
ಗುಂಪಲೆಲ್ಲರಿಗೂ ಮುಸುಕು
ಜಾಗ ದಿಸೆ ನೆನಪು ಮಸುಕು
ಸತತ ಗತಿ ಮಾತ್ರ ಚುರುಕು
ಕಣ್ಣುಜ್ಜಿ ನೋಡೆ, ನಂಬಲಾರೆ
ಬೆಳಕಿನ ದಿಕ್ಕಿಗೆಲ್ಲ ನುಗ್ಗುತ್ತಿರೆ
ನನ್ನ ತಳ್ಳಿ ಇನ್ನಾರೋ ಓಡಿರೆ,
ಸಾವರಿಸಿ ದಿಟ್ಟಿ ಮೇಲೇರಿಸಿದೆ,
ಎತ್ತ ಓಟ, ನಿಲ್ಲಿಸಿರೆಂದರಚಿದೆ.
ಅಚ್ಚರಿ! ಕಿವಿಯಿಲ್ಲ ಕಣ್ಣಿಲ್ಲವಿಲ್ಲಿ
ತಟಸ್ಥ ಮೈ, ಓಟ ಕಾಲ್ಗಳಿಗಿಲ್ಲಿ
ಕುಸಿಯುತಿಹರು ಹಲವರಲ್ಲಿಲ್ಲಿ
ಇಂದ್ರಿಯಜ್ಞಾನವಾರಿಗಿಲ್ಲವಿಲ್ಲಿ,
ಕಣ್ಣೀರೇ, ರಕ್ತವೂ ಸುರಿಯದಿಲ್ಲಿ
ಪ್ರಗತಿಯಲಿ ಸಾಕೇ ಗತಿ ಒಂದೆ
ನೋಡಲಿಹೆ, ಓಡಲೊಲ್ಲೆನೆಂದೆ
ಹಸಿರೆಲೆಯ ಇಬ್ಬನಿಯ ಹೀರಿದೆ
ಮಾಗಿಚಳಿಯ ಹಿತದಿ ಕಂಪಿಸಿದೆ
ಯಂತ್ರವಾಗದೆ ಗೆದ್ದೆ, ಮೇಲೆದ್ದೆ!
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಬಾಡಿದ ಮೊಗ್ಗರಳಿಸುವ ಪನ್ನೀರಾಗಿ
ಬಿರಿದ ಬುವಿಗೆ ಮುಸಲಧಾರೆಯಾಗಿ
ಕುಸಿದ ಕಸುವಿಗೆ ಚೇತ:ಸಿಂಧುವಾಗಿ
ಒಡೆದ ಮನವ ಬೆಸೆವ ಸೇತುವಾಗಿ,
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಆರುತಿಹ ದೀಪಕ್ಕೆ ತೈಲವನ್ನೆರೆಯುತ್ತ
ಸೋರುತಿಹ ಮಾಡನ್ನು ಸರಿಪಡಿಸುತ್ತ
ಅದುರುತಿಹ ಬುನಾದಿಯನು ಭದ್ರಿಸುತ್ತ,
ಕೊನರುತಿಹ ಭರವಸೆಗೆ ನೀರೆರೆಯುತ್ತ
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಹೊಸ ಅವಕಾಶ, ಹೃನ್ಮನ ತೆರೆಯಲು,
ಸಮಯವಿದು ಕಳೆ ಕಿತ್ತು ಹಸನಾಗಿಸಲು
ಹೊಗೆಯಾರಿಸಿ ಸ್ನೇಹದ ಕಂಪು ಚೆಲ್ಲಲು
ಉಜ್ವಲ ನಾಳೆಯ ಕನಸ ನನಸಾಗಿಸಲು.
ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.
ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಮೂಢ ಮನವೇ, ನಿನಗೋ ನೀನೇ ಸಾಟಿ,
ತಾನು ಸದಾ ಸರಿಯೆಂಬ ಮೊಂಡು ಧಾಟಿ!
ತರ್ಕಾತೀತ ಯುಕ್ತ್ಯಾತೀತವೀ ನಿನ್ನ ರೀತಿ,
ಬಿದ್ದರೂ ಮೂಗು ಮಣ್ಣಾಗಿಲ್ಲವೆಂಬ ನೀತಿ !
ಏನು ಸಿಗದೋ ಅದಕಾಗಿಯೇ ಹಾತೊರೆವೆ
ಏನು ಆಗದೋ ಅದಾಗಲೆಂದೇ ಬಯಸುವೆ
ಧೀಮಂತ ಕಣ್ಣಿಗೂ ನೀ ಮಿಣ್ಣಗೆ ಮಣ್ಣೆರಚುವೆ
ಬಹು ಸುಲಭದಿ ಹಾದಿಯ ದಿಕ್ಕು ತಪ್ಪಿಸುವೆ!
ನೂರು ಪದಗಳು ಸಾವಿರ ಚಿತ್ರಗಳು ಮನದಿ
ಸರಸರನೆ, ತಂದಲ್ಲವೆಂಬ ಶಾಂತ ಮೊಗದಿ!
ಕ್ಷಣಾತ್ ರೌದ್ರತ್ವ ಜ್ವಾಲೆಯನೆಬ್ಬಿಸೆ ರಭಸದಿ,
ಪ್ರೀತಿಯ ಹಿಡಿಭಾವ ತಂಪೆರೆಯೆ ಕ್ಷಣಾರ್ಧದಿ!
ಮರ್ಕಟನಾಗಿ ಹಾರುವೆ ನೀ ಹರೆಯ ಮರೆತು
ನರಿಯನೂ ಮೀರಿಸಿಹೆ ಕುಟಿಲನಾಗಿ ಕುಳಿತು!
ಗೋಮುಖವ್ಯಾಘ್ರನಾಗಿರೆ ಸೋಗಿನ ಮಾತು.
ಛೇ! ಬುದ್ಧಿಯಿರಬಾರದಿತ್ತೇ ಈ ಮನಕಿನಿತು!!
ಹುಲುಸಾಗಿವೆ ನನಸಾಗದ ಕನಸುಗಳು
ಮರೆಯಲು ಮನಸಾಗದ ನೆನಹುಗಳು
ಹಳತಾದರೂ ಹಸಿರಾಗಿರುವ ಛವಿಗಳು
ನೆನಪಿನಂಗಳದ ಈ ಬಾಡದ ಹೂಗಳು!
ಕ್ಷಣದಿ ಕಣ್ಮುಂದೆ ನಲಿದಾಟದ ದಿನಗಳು
ಚಿಣ್ಣರಂಗಳದ ಸಿಹಿ-ಕಹಿದೃಶ್ಯಾವಳಿಗಳು
ಹರೆಯ ಹರಿದಂತೆ ಕಂಗಳ ಮಾತುಗಳು
ಕನಸಲಿ ಲೋಕ ಮರೆತ ಸವಿ ದಿನಗಳು!
ಬದುಕು ಎಡವಿಸಿ ಕಲಿಸಿದ ಪಾಠಗಳು,
ಬೆಳೆಸಲು ಕಣ್ತೆರೆಸಿದ ಬಾಳಿನ ಕ್ಷಣಗಳು
ನೋವಲೂ ನಲಿವಿನ ಚಿನ್ನದ ಗೆರೆಗಳು,
ಉರಿದು ಎಚ್ಚರಿಸುವ ದಾರಿದೀಪಗಳು!
ಇಂದಿನವು ನಾಳೆ ರಂಜಿಸುವ ಪಟಗಳು,
ಕಸುವಿಳಿದರೂ ಬಲಕುಗ್ಗದ ಪ್ರತಿಮೆಗಳು
ಎಂದೂ ತೊರೆಯದ ಆಪ್ತ ಬಂಧುಗಳು,
ಬಾಳ ಹೊಳಪ ಕಾದಿಡುವ ಗುಜರಿಗಳು!
 |
| ನನ್ನ ಒಂದು ತೈಲವರ್ಣ ಚಿತ್ರ |
ನವಿರಾದ ತಂಗಾಳಿ ಸೋಕಲು,
ಬರುವ ಮಳೆಯ ನೆನಪಿಸಿರಲು
ನಾನಾಗುತಿಹೆ ನಿನ್ನೆಯ ಪಾಲು!
ಸಂಧ್ಯಾರಾಗ ಜತೆ ಕರಿಮುಗಿಲು,
ನಭ ತಾ ನೇರಳೆಯಾಗುತಿರಲು,
ಮನ ತೂಗಿದೆ ನೆನಪ ತೊಟ್ಟಿಲು!
ಸವೆದ ದಾರಿಯ ದಿಟ್ಟಿಸೆ ಕಂಗಳು,
ಹಿತವಾಗಿ ಹರಿವ ಹಾಲ್ನೆನಹುಗಳು
ಕಿವುಚಿ ಸರಿವ ಆ ಹಳೆನೋವ್ಗಳು!
ಎದುರಿರೆ ಅರಿಯದ ತಿರುವುಗಳು,
ಅನುಭವ ಪಾಠವೀ ನೆನಪುಗಳು,
ಇಕ್ಕೆಲದಿ ಜ್ವಲಂತವೀ ದೀಪಗಳು!
ಜಿನುಗುಹನಿಗಳು ಬಲಿಯುತಿರಲು,
ಶುಚಿಯಾಗುತಿರೆ ಎನ್ನೊಳಮಜಲು,
ಆ ನಾಳೆಗಿವೇ ಎನ್ನ ದೃಢಕಾವಲು!