Friday, 14 February 2014

ಯಂತ್ರಮಾನವ



ಮಂಪರು ಉಷೆಯ ನಸುಕು
ದೂರದಿ ಕಣ್ಚುಚ್ಚುವ ಬೆಳಕು
ಗುಂಪಲೆಲ್ಲರಿಗೂ ಮುಸುಕು
ಜಾಗ ದಿಸೆ ನೆನಪು ಮಸುಕು
ಸತತ ಗತಿ ಮಾತ್ರ ಚುರುಕು

ಕಣ್ಣುಜ್ಜಿ ನೋಡೆ, ನಂಬಲಾರೆ
ಬೆಳಕಿನ ದಿಕ್ಕಿಗೆಲ್ಲ ನುಗ್ಗುತ್ತಿರೆ
ನನ್ನ ತಳ್ಳಿ ಇನ್ನಾರೋ ಓಡಿರೆ,
ಸಾವರಿಸಿ ದಿಟ್ಟಿ ಮೇಲೇರಿಸಿದೆ,
ಎತ್ತ ಓಟ, ನಿಲ್ಲಿಸಿರೆಂದರಚಿದೆ.

ಅಚ್ಚರಿ! ಕಿವಿಯಿಲ್ಲ ಕಣ್ಣಿಲ್ಲವಿಲ್ಲಿ
ತಟಸ್ಥ ಮೈ, ಓಟ ಕಾಲ್ಗಳಿಗಿಲ್ಲಿ
ಕುಸಿಯುತಿಹರು ಹಲವರಲ್ಲಿಲ್ಲಿ
ಇಂದ್ರಿಯಜ್ಞಾನವಾರಿಗಿಲ್ಲವಿಲ್ಲಿ,
ಕಣ್ಣೀರೇ, ರಕ್ತವೂ ಸುರಿಯದಿಲ್ಲಿ

ಪ್ರಗತಿಯಲಿ ಸಾಕೇ ಗತಿ ಒಂದೆ
ನೋಡಲಿಹೆ, ಓಡಲೊಲ್ಲೆನೆಂದೆ
ಹಸಿರೆಲೆಯ ಇಬ್ಬನಿಯ ಹೀರಿದೆ
ಮಾಗಿಚಳಿಯ ಹಿತದಿ ಕಂಪಿಸಿದೆ
ಯಂತ್ರವಾಗದೆ ಗೆದ್ದೆ, ಮೇಲೆದ್ದೆ!

Sunday, 29 December 2013

ಹರುಷ ಹರಿಸಲಿ ಹೊಸ ವರುಷ


ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ. 


ಬಾಡಿದ ಮೊಗ್ಗರಳಿಸುವ ಪನ್ನೀರಾಗಿ
ಬಿರಿದ ಬುವಿಗೆ ಮುಸಲಧಾರೆಯಾಗಿ
ಕುಸಿದ ಕಸುವಿಗೆ ಚೇತ:ಸಿಂಧುವಾಗಿ
ಒಡೆದ ಮನವ ಬೆಸೆವ ಸೇತುವಾಗಿ, 

ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.

ಆರುತಿಹ ದೀಪಕ್ಕೆ ತೈಲವನ್ನೆರೆಯುತ್ತ
ಸೋರುತಿಹ ಮಾಡನ್ನು ಸರಿಪಡಿಸುತ್ತ
ಅದುರುತಿಹ ಬುನಾದಿಯನು ಭದ್ರಿಸುತ್ತ,
ಕೊನರುತಿಹ ಭರವಸೆಗೆ ನೀರೆರೆಯುತ್ತ


ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.

ಹೊಸ ಅವಕಾಶ, ಹೃನ್ಮನ ತೆರೆಯಲು,
ಸಮಯವಿದು ಕಳೆ ಕಿತ್ತು ಹಸನಾಗಿಸಲು
ಹೊಗೆಯಾರಿಸಿ ಸ್ನೇಹದ ಕಂಪು ಚೆಲ್ಲಲು
ಉಜ್ವಲ ನಾಳೆಯ ಕನಸ ನನಸಾಗಿಸಲು.

ಬಂತದೋ ನೋಡಿಲ್ಲಿ ಹೊಸ ವರುಷ,
ತಂತದೋ ಮಡಿಲಲ್ಲಿ ಜಗಕೆ ಹರುಷ.


ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Tuesday, 3 December 2013

ಛೇ!! ನಿನಗೂ ಬುದ್ಧಿಯಿರಬಾರದಿತ್ತೇ?!


ಮೂಢ ಮನವೇ, ನಿನಗೋ ನೀನೇ ಸಾಟಿ,
ತಾನು ಸದಾ ಸರಿಯೆಂಬ ಮೊಂಡು ಧಾಟಿ!
ತರ್ಕಾತೀತ ಯುಕ್ತ್ಯಾತೀತವೀ ನಿನ್ನ ರೀತಿ,
ಬಿದ್ದರೂ ಮೂಗು ಮಣ್ಣಾಗಿಲ್ಲವೆಂಬ ನೀತಿ !

ಏನು ಸಿಗದೋ ಅದಕಾಗಿಯೇ ಹಾತೊರೆವೆ
ಏನು ಆಗದೋ ಅದಾಗಲೆಂದೇ ಬಯಸುವೆ
ಧೀಮಂತ ಕಣ್ಣಿಗೂ ನೀ ಮಿಣ್ಣಗೆ ಮಣ್ಣೆರಚುವೆ
ಬಹು ಸುಲಭದಿ ಹಾದಿಯ ದಿಕ್ಕು ತಪ್ಪಿಸುವೆ!

ನೂರು ಪದಗಳು ಸಾವಿರ ಚಿತ್ರಗಳು ಮನದಿ
ಸರಸರನೆ, ತಂದಲ್ಲವೆಂಬ ಶಾಂತ ಮೊಗದಿ!
ಕ್ಷಣಾತ್ ರೌದ್ರತ್ವ ಜ್ವಾಲೆಯನೆಬ್ಬಿಸೆ ರಭಸದಿ,
ಪ್ರೀತಿಯ ಹಿಡಿಭಾವ ತಂಪೆರೆಯೆ ಕ್ಷಣಾರ್ಧದಿ!

ಮರ್ಕಟನಾಗಿ ಹಾರುವೆ ನೀ ಹರೆಯ ಮರೆತು
ನರಿಯನೂ ಮೀರಿಸಿಹೆ ಕುಟಿಲನಾಗಿ ಕುಳಿತು!
ಗೋಮುಖವ್ಯಾಘ್ರನಾಗಿರೆ ಸೋಗಿನ ಮಾತು.
ಛೇ! ಬುದ್ಧಿಯಿರಬಾರದಿತ್ತೇ ಈ ಮನಕಿನಿತು!!

Thursday, 19 September 2013

ತೊರೆದು ಜೀವಿಸಬಹುದೇ?



ಹುಲುಸಾಗಿವೆ ನನಸಾಗದ ಕನಸುಗಳು
ಮರೆಯಲು ಮನಸಾಗದ ನೆನಹುಗಳು
ಹಳತಾದರೂ ಹಸಿರಾಗಿರುವ ಛವಿಗಳು
ನೆನಪಿನಂಗಳದ ಈ ಬಾಡದ ಹೂಗಳು!

ಕ್ಷಣದಿ ಕಣ್ಮುಂದೆ ನಲಿದಾಟದ ದಿನಗಳು
ಚಿಣ್ಣರಂಗಳದ ಸಿಹಿ-ಕಹಿದೃಶ್ಯಾವಳಿಗಳು
ಹರೆಯ ಹರಿದಂತೆ ಕಂಗಳ ಮಾತುಗಳು
ಕನಸಲಿ ಲೋಕ ಮರೆತ ಸವಿ ದಿನಗಳು!

ಬದುಕು ಎಡವಿಸಿ ಕಲಿಸಿದ ಪಾಠಗಳು,
ಬೆಳೆಸಲು ಕಣ್ತೆರೆಸಿದ ಬಾಳಿನ ಕ್ಷಣಗಳು

ನೋವಲೂ ನಲಿವಿನ ಚಿನ್ನದ ಗೆರೆಗಳು,
ಉರಿದು ಎಚ್ಚರಿಸುವ ದಾರಿದೀಪಗಳು!

ಇಂದಿನವು ನಾಳೆ ರಂಜಿಸುವ ಪಟಗಳು,
ಕಸುವಿಳಿದರೂ ಬಲಕುಗ್ಗದ ಪ್ರತಿಮೆಗಳು
ಎಂದೂ ತೊರೆಯದ ಆಪ್ತ ಬಂಧುಗಳು,
ಬಾಳ ಹೊಳಪ ಕಾದಿಡುವ ಗುಜರಿಗಳು!

Monday, 17 June 2013

ಶಕ್ತಿ

 
ನನ್ನ ಒಂದು ತೈಲವರ್ಣ ಚಿತ್ರ

ನವಿರಾದ ತಂಗಾಳಿ ಸೋಕಲು,
ಬರುವ ಮಳೆಯ ನೆನಪಿಸಿರಲು
ನಾನಾಗುತಿಹೆ ನಿನ್ನೆಯ ಪಾಲು!

ಸಂಧ್ಯಾರಾಗ ಜತೆ ಕರಿಮುಗಿಲು,
ನಭ ತಾ ನೇರಳೆಯಾಗುತಿರಲು,
ಮನ ತೂಗಿದೆ ನೆನಪ ತೊಟ್ಟಿಲು!

ಸವೆದ ದಾರಿಯ ದಿಟ್ಟಿಸೆ ಕಂಗಳು,
ಹಿತವಾಗಿ ಹರಿವ ಹಾಲ್ನೆನಹುಗಳು
ಕಿವುಚಿ ಸರಿವ ಆ ಹಳೆನೋವ್ಗಳು!

ಎದುರಿರೆ ಅರಿಯದ ತಿರುವುಗಳು,
ಅನುಭವ ಪಾಠವೀ ನೆನಪುಗಳು,
ಇಕ್ಕೆಲದಿ ಜ್ವಲಂತವೀ ದೀಪಗಳು!

ಜಿನುಗುಹನಿಗಳು ಬಲಿಯುತಿರಲು,
ಶುಚಿಯಾಗುತಿರೆ ಎನ್ನೊಳಮಜಲು,
ಆ ನಾಳೆಗಿವೇ ಎನ್ನ ದೃಢಕಾವಲು!

Friday, 24 May 2013

ಮಾಯಾಬಜಾರ್




ಜಗವನಾವರಿಸಿರೆ ಮಿಥ್ಯೆಯ ಮಾಯೆ
ಮುಸುಕಲಿ ಮರುಗಿದೆ ಸತ್ಯದ ಛಾಯೆ
ಬೇತಾಳನಾಗಿ ತಾ ನೆರಳಲಿ ಸೇರಿರೆ,

ಅರಿಯದೇ ಕವಿಪ ಮಾಯಾಪ್ರಕ್ರಿಯೆ.
 
ಬಿಡಿಸಿಕೊಂಬೆನೆಂದರೂ ಬಿಡದ ಜಾಲ
ಬುವಿಯಾಗಸ ಪಸರಿಸಿಹ ರಕ್ಕಸ ಆಲ
ಮಾತ್ರ ತಣಿಸದಿದೆಂದೂ ಕ್ಷಣ ಕಾಲ,
ಜೀವವ ನೋಯಿಸುವ ಹಾಲಾಹಲ!

ಮರೀಚಿಕೆಯಂದದಿ ಬರಸೆಳೆವ ಪಾಶ,
ವಿವೇಕ ಮಣಿಸುವ ಮಾವುತನಂಕುಶ.
ಈ ಮಾಯಾಬಜಾರಿನ ಕ್ಷಣಿಕ ತೋಷ
ಪುತ್ಥಳಿಗಳೆಮಗೆಲ್ಲಿದೆ ಮೀರ್ವ ಪೌರುಷ

ದೇವಾದಿದೇವರನು ಮಣಿಸಿಹ ರಾಗ
ಧೀಧೃತಿಗೆ ಸವಾಲಿಡುವುದು ಆಗೀಗ.
ಮಿಥ್ಯಾಚಕ್ರವ್ಯೂಹವ ಭೇದಿಸಬೇಕೀಗ,
ಹರಸಾಹಸಗೈದು ಸತ್ಯ ಗೆಲ್ಲಬೇಕೀಗ.



(ತಿಳಿಯದವರಿಗೆ: ರಾಗ-ಅರಿಷಡ್ವರ್ಗಾದಿ ಮಾನಸ ಅವಗುಣಗಳು)

Friday, 3 May 2013

ಅವರು-ಇವರು-ನಾವು


ಅರಿವಿರಲಿ, ಅವರಿವರಿಗಿಲ್ಲಿ ನಾವವರಿವರು!
ಅವರಿವರಿಗರಿವು ತರಿಸಲಿಹದಿ ಸರಿಯಾರು?
ಅವರಿವರಿಗಿವರವರಿಗೆ, ಬೆರಳ ತೋರ್ವರು,
ತಾವೇ ಅರಿವಿನತ್ತ ನಡೆವ ಪರಿಯದೇ ಸರಿ!

ಅರಿವಿಂದು ಉದ್ಧರಿಸಲವರಿವರ ಬದುಕು!
ನಮ್ಮಂಥ ಜ್ಞಾನಿಗಳಿಗಲ್ಲವೇ ಈ ಸರಕು!
ಅವರಿವರು ನಮಗೆ ಹೀಗೆ, ಹಾಗಿರಬೇಕು,
ಇವರಿಂದರಿತು ಅವರ ಮೇಲೆ ಹೇರಬೇಕು!

ಅವರಿವರ ಬಿಟ್ಟು ಅಂತರ್ಮುಖವಿರಲರಿವು,
ಪ್ರತಿಯೋರ್ವ ಕಾಂಬ ಅವರಿವರಲೊಲವು.

ಜಗವ ತಿದ್ದುವುದಕಿಂತ ಮೇಲಿದರ ಸುಖವು,
ನಿನ್ನೆಯಿಂದಿನಿತು ಬೆಳೆವುದೇ ನಿಜ ಗೆಲುವು!