Monday, 29 December 2014

ವ್ಯಾಲೆಂಟೈನ್ ವರ್ಷಕ್ಕೆ ಬೇಸರದ ವಿದಾಯ!


ಮತ್ತೆ ನೀನು ನೆನಪಿನ
ಪಳೆಯುಳಿಕೆಯಾಗುವ ಸಮಯ
ನನ್ನೆಲ್ಲ ಸಿಹಿಕಹಿಗಳನ್ನೂ
ಹೊಟ್ಟೆಯಲಿಟ್ಟು ಮರೆತಂತೆ
ನಂಬಿಸಿಕೊಳ್ಳುವ ಪ್ರಮೇಯ!
ಭೂತದ ಜತೆ ಧೂಳನೂ
ಸೇರಿಸಿಕೊಂಡಿರುವ
ಹಳೆಯ ಡೈರಿಗಳ ಜತೆ
ಸೇರುವ ಸಮಯ!

ಕಳಕೊಂಡಿದ್ದು ಹೆಚ್ಚೋ
ಗಳಿಸಿದ್ದು ಮಿಗಿಲೋ?
ಮರೆಯಲಾಗುವುದೇ?
ಹೊಸ ಲೆಕ್ಕದ ಹಾಳೆಗೂ
ಬೇಕೇ ಕ್ಯಾರಿಫ಼ಾರ್ವರ್ಡ್!
ಕಳಕೊಂಡಿದ್ದು ಬಂದೀತೆಂಬ
ಭರವಸೆ,
ಗಳಿಸಿದ್ದು ಉಳಿದೀತೆಂಬ
ಅತಿಯಾಸೆ!
 

ಎಲ್ಲ ಬಿಟ್ಟು ಹೊಸವರ್ಷದಲಿ
ಹೊಸದಾಗುವಂಥ
ಕ್ಯಾಲೆಂಡರ್ ಕಂಡರೆ ಅಸೂಯೆ!
ಎಷ್ಟು ಕ್ಯಾಲೆಂಡರ್ ಬಾಳಿದರೂ
ಬಿಟ್ಟಿಲ್ಲ ಹೊಸತಿನ್ನೇನೋ
ಇದೆಯೆಂಬ ಆಸೆಯನು!
ಸೆರಗಲೇ ದುಗುಡವಿದ್ದರೂ
ಕಷ್ಟ ಬರದಿರಲಿ
ಎಂದಾಶಿಸುವ ಪೆದ್ದುತನವ!

ಒಂದೆಳೆ ಭಾವಕ್ಕೂ ಜೋತು
ಸೋತು, ಸುಣ್ಣವಾಗುವ ಜೀವಕ್ಕೆ
ತಂಪೆರೆವ ತುಂತುರು ಹನಿಗಳು
ಚುಮುಚುಮು ಬೆಳಗಿನ ನೇಸರ,
ವಸಂತನ ರಂಗು, ಶಿಶಿರನ ಗುಂಗು
ಬದಲಾಗದೆಂಬ ಘನ ನಂಬಿಕೆ!

ಆದರೂ...
ವ್ಯಾಲೆಂಟೈನ್ ವರ್ಷವೆಂಬಂತೆ
ಕಾಣಿಸುತ್ತಿದ್ದ,
ಮುದಗೊಳಿಸುತ್ತಿದ್ದ 2014,

ಮನಸ್ಸೇ ಬರುತ್ತಿಲ್ಲ, ನಿನಗೆ
ವಿದಾಯ ಹೇಳಲು,
ಎಲ್ಲಿ ನಿನ್ನೊಂದಿಗೆ ನನ್ನೊಲವೂ
ಮಾಯವಾಗುವುದೆಂಬ ಅಳುಕು!

Saturday, 22 November 2014

ಬದುಕೇ ನಿನಗೆ ನೀನೇ ಸಾಟಿ!!


ಹುಟ್ಟೇ ಇಲ್ಲದ ಹರಿಗೋಲಿತ್ತು,
ಸುಳಿಭರಿತ ನದಿಯಲಿ ಬಿಡುವೆ
ಸುಖದ ಹೊನಲಲಿ ತೋಯಿಸಿ
ನೋವಗಾಯವಾರದಂತಿಡುವೆ!

ಉಸಿರು ಕಟ್ಟುವೆಡೆ ತಂದಿಡುವೆ,

ಉಸಿರಾಡುವ ಅನಿವಾರ್ಯವ!
ಕಂಗಳಲಿ ಹುಲುಸಾಗಿ ಹರಡುವೆ
ನನಸಾಗದ ಕನಸಿನ ಹಂದರವ!

ಹಾರಲೊಂದೇ ರೆಕ್ಕೆಯ ನೀಡಿ
ಹಾರುವ ಆಸೆಯನಿಮ್ಮಡಿಸುವೆ
ಮಧುಮೇಹಿಗಿತ್ತ ಸಿಹಿಯಂತೆ,
ಅಕಾಲ ಹರ್ಷಧಾರೆ ಹರಿಸುವೆ!

ಹುಳುಕಲಿ ಥಳುಕನಿಟ್ಟು ಇಹದಿ,
ಮೋಹದ ಹುಳವನಿಟ್ಟು ಮನದಿ
ಪುತ್ಥಲಿಯೊಲು ಬಳುಕಿಸಿ ಕುಣಿಸಿ
ಅರಿವಿಡುವೆ ಉಳುಕ ನೋವಲಿ!


ಗುರಿಯೆಂಬ ಭ್ರಮೆಯ ಬೆನ್ನಟ್ಟಿಸಿ

ಮಸುಕಿನ ದಾರಿಯಲಿ ದಣಿಸುವೆ
ಸಾಕಿನ್ನು ಬದುಕೋಣ ಎಂಬಾಗ,
ಕೊನೆಘಳಿಗೆ ಬಂತೆಂದುಸುರುವೆ!

ಬದುಕೇ! ನಿನಗೆ ನೀನೇ ಸಾಟಿ!!

Wednesday, 19 November 2014

ಜೀವನ-ಕವನ



ಬಲವೆಷ್ಟಿದ್ದರೂ ನೀರೆರೆಯದಿರೆ
ಬದುಕೀತೇ ಹೊಲ?
ಛಲವೆಷ್ಟಿದ್ದರೂ ಬೆವರಿಳಿಯದಿರೆ
ದೊರಕೀತೇ ಫಲ?

ಬಯಕೆಯೆನಿತಿರಲು ಕೃತಿಯಿರದೆ
ಭವಿಸೀತೇ ಕನಸು?
ಮೋಹವೆನಿತಿರಲು ಪ್ರೀತಿಯಿರದೆ
ಸವಿದೀತೇ ಮನಸು?

ಜೀವಜಲದೊರತೆಯೇ ಬತ್ತಿರಲು
ಅಳಿಯದೇ ಚಿಲುಮೆ?
ಭಾವಸೆಲೆಯೊರತೆಯೇ ನಿಂತಿರಲು
ಉಳಿವುದೇ ಒಲುಮೆ?

ಪದಗಳೆನಿತಿರಲು ತುಡಿತವಿರದಿರೆ
ಆಗುವುದೇ ಕವನ?
ಬಂಧಗಳೆನಿತಿರಲು ಮಿಡಿತವಿರದಿರೆ
ಸಾಗುವುದೇ ಜೀವನ?

Sunday, 26 October 2014

ಕಲ್ಲಾದ (ಪೊಳ್ಳಾದ) ನಿರೀಕ್ಷೆ!


ಅವಲಂಬನೆ ಎಷ್ಟು ಸತ್ಯವೋ
ಅಷ್ಟೇ ಸತ್ಯ ನಿಸರ್ಗದಿ,
ಪ್ರತಿಕೂಲಕ್ಕೆ ರೂಪಾಂತರವೂ,
ಮೈ-ಮನದ ಮಾರ್ಪಾಡೂ!
ಒಗ್ಗಿಕೊಳ್ಳುವುದೂ,
ಒಗ್ಗಿ ಜಡ್ಡುಕಟ್ಟುವುದೂ!

ಚಳಿಯ ಕೊರೆತ ಸಹಿಸದೆ ಚರ್ಮವ
ದಪ್ಪ ಮಾಡಿಕೊಳ್ಳಲಿಲ್ಲವೇ
ಧ್ರುವದ ಹಿಮಕರಡಿ?
ಕಣ್ಣಿಲ್ಲದೆಯೂ ಕಾಣಲು ಕಲಿತಿಲ್ಲವೇ
ಬಾವಲಿ?
ಲಜ್ಜೆಯೊಂದಿಗೇ ಬದುಕುತಿಲ್ಲವೇ
ನಾಚಿಗೆಮುಳ್ಳು?!

ನಾನೂ ಬರೀ ಜೀವಿಯೇ!
ಬೆರೆಯಲು ಹಂಬಲಿಸಿದ ಮನ,
ಒರಟಾಗಬಹುದು.
ಸನಿಹ ಬಯಸಿದ ಮೈ,
ದೊರಗಾಗಬಹುದು.
ಹೆಚ್ಚೇನು, ನಾನೂ ಒಂದು
ಕಲ್ಲಾಗಬಹುದು!
ಗುರುತೂ ಹಿಡಿಯಲಾಗದಂತಹ,
ನೆಲಕಿನ್ನೊಂದು ಕಲ್ಲು ಅಷ್ಟೇ!

ಸಮಾಧಾನವಿಷ್ಟೇ,
ಕಲ್ಲು, ನೋವಲಂತೂ ಕರಗದು!

Monday, 13 October 2014

ತೊರೆವುದೆಂತು?


ಅಂದಿನಾ ಸಮಯವೆಷ್ಟು ಹಿತವಾಗಿತ್ತು
ಮನ, ಇದಳಿಯದೆಂಬ ಭ್ರಮೆಯಲಿತ್ತು!

ಅರಿವಿತ್ತು ಆ ತಳಮಳ ನಿನ್ನಿಂದಲೆಂದು,
ಅಂದರಿತೆ, ಉಗುರಲೂ ಜೀವವಿತ್ತೆಂದು!
ನಿನ್ನ ಸೋಕಲದೂ ತುಡಿಯುತಿತ್ತೆಂದು!!

ಅಂದಾಡಿದ ನುಡಿಗಳು ನನಗೆಂಬಂತಿತ್ತು
ಕಲ್ಮಶವಿರದ ತುಂಬುಪ್ರೀತಿ ಕಂಡಂತಿತ್ತು
ಸಮಯದಲೆಯ ಭಯ ಬೆನ್ನಿಗೇ ಇದ್ದಿತ್ತು


ಎಂದಿನಂತೆ ಕಾಲದ ನಿರ್ದಯತೆ ಗೆದ್ದಿತ್ತು
ಏನಚ್ಚರಿ! ಆದರೂ ಮನ ಸ್ಥಿಮಿತದಲಿತ್ತು!
ಯಾವುವೂ ನನ್ನ ತೊರೆದಿಲ್ಲವೆಂಬಂತಿತ್ತು

ಅವೋ ಸವಿನೆನಪಾಗಿ ಬಡ್ತಿ ಹೊಂದಿತ್ತು!!
ನೆನಪಿನಂಗಳದಿ ಕೆಂಗುಲಾಬಿ ನಗುತಿತ್ತು!

Tuesday, 7 October 2014

ಭರವಸೆ



ಭವಿತವ್ಯವಿಲ್ಲದ ಕನಸುಗಳೇ ನಿಂಗೇಕೆ ಆಪ್ಯವೇ?
ಬಂಜರಿನಲೂ ಅರಳಿದ ಕಳ್ಳಿ ಹೂವ ನೋಡಿಯೇ?

ಕಥೆ ಮುಗಿಯಿತೆಂದರೂ ಮನ ನಂಬಲೊಲ್ಲದೇಕೆ?
ಒಣ ಗೋಡೆಯ ಸೆರೆಯಲಿ ಚಿಗುರಿದೆಲೆಯ ಕಂಡೇ?

ಅದಾವ ಸುಖಕೆ ನೆನಪುಗಳಳಿಯದಂತೆ ಕಾಪಿಡುವೆ?
ಬಾಳ ಬಿಸಿಲಲಿ ಮಳೆಬಿಲ್ಲನರಸುವ ಸಂಭ್ರಮವೇ?

ವಿಷಣ್ಣತೆಯ ತಿರಸ್ಕಾರದಲೂ ತೀರದ ಒಲವದೇಕೆ?
ತೀರದ ಮೋಹವ ಬಿಡಲಾಗದಲೆಯ ಛಲವ ಕಂಡೇ?

ಅಲ್ಲಿ ಸಿಗದ ನಿನ್ನ ಬಿಂಬವ ಹುಡುಕುವ ಚಿಂತೆಯೇಕೆ?
ಕಂಬಳಿ ಹುಳುವೊಳಗಣ ಪಾತರಗಿತ್ತಿಯ ನೆನೆದೇ?

ದೂರಾಗಿಹ ಪ್ರೀತಿಗೂ ಪ್ರಣತಿಯಿಡುವ ಆಸೆಯೇಕೆ?
ಸಿಕತಕಣದಲೂ ಮುತ್ತಿನ ಜಾಡನರಿತ ಭರವಸೆಯೇ?

Sunday, 28 September 2014

ಹೀಗೊಂದು ಕಥೆ(ವ್ಯಥೆ?)


ನನ್ನ ಜೀವ ನೀನೆಂದ,
ಚಂದಕಿಂತ ಚಂದ ಎಂದ.
ಇಬ್ಬರ ಭಾವದ ಮಿಡಿತವೊಂದೇ,
ತುಡಿತವೊಂದೇ ಎಂದ.
ಅವಳೋ,
ಭಾವೋತ್ಕಟತೆಯಲಿ ಮಿಂದೆದ್ದಳು.
ಅವನೋ, ತನುಮನವನಾವರಿಸಿ,
ಅವಳ ದಿನಚರಿಯಾದ!
ಹುಸಿಯಿರಲಿಲ್ಲ, ಹಸಿಯಿರಲಿಲ್ಲ,
ನಂಬದಿರಲು!

ಕೆಲವೇ ದಿನಗಳಲಿ ’ಕ್ಷಮಿಸು’ ಎಂದ.
ಮಾತು ತೊರೆದು ನಿರ್ಲಿಪ್ತನಾದ.
ಸೋಗೋ, ಕೊರಗೋ ಅರಿಯಳು.
ಆಗ ಮಂಕು ಕವಿದಿತ್ತೋ,
ಈಗ ಸರಿದಿತ್ತೋ ಗೊತ್ತಿಲ್ಲ!

ಬಾಳು ಮರುಭೂಮಿಯಾದೊಡೆ
ಮೃಗತೃಷ್ಣೆಗಳು ಸಹಜವೆಂಬ
ಸತ್ಯದರ್ಶನವಾಯ್ತು!
ಅವಳಿಗೀಗ ಒಂದೇ ದಾರಿ
ನಂಬಿಸಿಕೊಳ್ಳಬೇಕು,
ಸಿಕ್ಕಿದ್ದು ಒಯಸಿಸ್ ಅಲ್ಲ,
ಮರೀಚಿಕೆಯಷ್ಟೇ!
ಕೆಲವರ ಜೀವನ ಹೀಗೇ ಏನೋ
ಎಪ್ರಿಲ್ ೧ ವರ್ಷದಲಿ,
ಬಹಳ ಸಲ ಬರುವುದೇನೋ?!!