Sunday, 28 September 2014

ಹೀಗೊಂದು ಕಥೆ(ವ್ಯಥೆ?)


ನನ್ನ ಜೀವ ನೀನೆಂದ,
ಚಂದಕಿಂತ ಚಂದ ಎಂದ.
ಇಬ್ಬರ ಭಾವದ ಮಿಡಿತವೊಂದೇ,
ತುಡಿತವೊಂದೇ ಎಂದ.
ಅವಳೋ,
ಭಾವೋತ್ಕಟತೆಯಲಿ ಮಿಂದೆದ್ದಳು.
ಅವನೋ, ತನುಮನವನಾವರಿಸಿ,
ಅವಳ ದಿನಚರಿಯಾದ!
ಹುಸಿಯಿರಲಿಲ್ಲ, ಹಸಿಯಿರಲಿಲ್ಲ,
ನಂಬದಿರಲು!

ಕೆಲವೇ ದಿನಗಳಲಿ ’ಕ್ಷಮಿಸು’ ಎಂದ.
ಮಾತು ತೊರೆದು ನಿರ್ಲಿಪ್ತನಾದ.
ಸೋಗೋ, ಕೊರಗೋ ಅರಿಯಳು.
ಆಗ ಮಂಕು ಕವಿದಿತ್ತೋ,
ಈಗ ಸರಿದಿತ್ತೋ ಗೊತ್ತಿಲ್ಲ!

ಬಾಳು ಮರುಭೂಮಿಯಾದೊಡೆ
ಮೃಗತೃಷ್ಣೆಗಳು ಸಹಜವೆಂಬ
ಸತ್ಯದರ್ಶನವಾಯ್ತು!
ಅವಳಿಗೀಗ ಒಂದೇ ದಾರಿ
ನಂಬಿಸಿಕೊಳ್ಳಬೇಕು,
ಸಿಕ್ಕಿದ್ದು ಒಯಸಿಸ್ ಅಲ್ಲ,
ಮರೀಚಿಕೆಯಷ್ಟೇ!
ಕೆಲವರ ಜೀವನ ಹೀಗೇ ಏನೋ
ಎಪ್ರಿಲ್ ೧ ವರ್ಷದಲಿ,
ಬಹಳ ಸಲ ಬರುವುದೇನೋ?!!

Friday, 5 September 2014

ಬದುಕೆನ್ನ ಗುರು!



ಗುರುತ್ವಕೆಂದೂ ಶರಣು, ಕಲಿಕೆಗೆ ಶಿರಸಾ ನಮನ,
ಜತೆಗೆ ಗುರುತರ ನೋವಿತ್ತವರಿಗೆ ವಿಶೇಷ ನಮನ
ಬಿದ್ದೊಡನೆ ಪುಕ್ಕಟೆ ಸಿಗುತಿದ್ದ ಅಣಕಗಳಿಗೆ ನಮನ
ಹಿಂದುಳಿದಿರೆ ಮುಂದೂಡಿದ ಮೂದಲಿಕೆಗೆ ನಮನ

ಆಗುತಿತ್ತೇ ಅವರಿಲ್ಲದಿದ್ದರೆ ಪ್ರತಿ ನೋವು ಗೆಲುವು,
ಬರುತಿತ್ತೇ ಬಿದ್ದೊಡನೆ ಮೇಲೆದ್ದು ನಗುವ ಛಲವು,
ಸಾಂತ್ವನದ ಸೋಗಲಿ ವಿಕೃತಿಯಿದೆಯೆಂಬ ಅರಿವು.
ನಲಿವ ಮೀರಿಸಿ ಗುರುವಾಗಿ ಕಲಿಸಿತ್ತು ಪ್ರತಿ ಎಡವು

ಕಲಿಕೆಯ ಬಳಕೆಗೊಂದು ಒಳಗಣ್ಣ ನೀಡಿ ಹೆತ್ತವರು,
ಜ್ಞಾನದ ಕೀಲಿಯು ವಿವೇಕವೆಂದರುಹಿ ಗುರುವಾದರು.
ನಭದೆಡೆಗೆ ಓಟವಿದ್ದರೂ ನೆಲಬಿಡದ ಮರದ ಬೇರು,
ಸಾಧನೆಯ ಯಶಸ್ಸು ನಮ್ರತೆಯಲೆಂದರುಹಿದ ಗುರು.

ಪ್ರತಿ ಸೋಲಿನಲಿ ಕಾಣತೊಡಗಿತು ಗೆಲುವಿನ ಬೆಳಕು
ನೋವಿನ ಉಳಿಪೆಟ್ಟಲಿ ದೂರಾಯಿತು ಭವದ ಅಳುಕು
ಏರಲು ಮೆಟ್ಟಿಲಾಯಿತು ಅಡ್ಡವಾಗಿದ್ದ ಪ್ರತಿ ತೊಡಕು.
ಶಿಕ್ಷೆಯಲಿ ಶಿಕ್ಷಣವಿತ್ತು ಗುರುವಾಯಿತೆನಗೆನ್ನ ಬದುಕು!

Sunday, 31 August 2014

ಜಾರಿದ ಅಮೃತಘಳಿಗೆ!



ಕಥೆಗಳಲಿ ಓದಿದ್ದಳಷ್ಟೇ,
ಓದಿ ಪುಳಕಗೊಂಡಿದ್ದಳಷ್ಟೇ.
ಸುದೃಢ ತರುಣ ರಾಜಕುವರ
ನಡುರಾತ್ರಿಯಲಿ ಪ್ರೇಮಸಾಗರದಿ
ಕುವರಿಯನು ತೋಯಿಸಿದ್ದು,
ಆಯಸ್ಸು ಇನ್ನಿಲ್ಲ ಎಂಬಂತೆ
ಮೈ ಮರೆಸಿದ್ದು.
ಬೆಳಗ್ಗೆ ತಿರುಗಿ ಕಪ್ಪೆಯೋ, ಕುರೂಪಿಯೋ,
ಇನ್ನೇನೋ ಆಗಿದ್ದು, ಕುವರಿ ಕಣ್ಣೀರಿಟ್ಟಿದ್ದು!

ಮುಚ್ಚದೆವೆಯಿಂದ ದಿಟ್ಟಿಸಿಹಳು!!
ಆ ಸುಂದರ, ಸುಭದ್ರಕಾಯನ
ಬಾಹುಬಂಧನದ ಬಿಗಿಯಲ್ಲಿ,
ಉಸಿರಿಗುಸಿರು ಮಿಳಿಯುವ
ಅಪ್ಪಟ ಒಲವಿನ ಬಿಸಿಯಲ್ಲಿ,
ತಾ ಕಂಡರಿಯದ ಸುಖದಲ್ಲಿ.
ಇದೇ ಶಾಖಕೆ ಜನಿಸಿದ ಬೆಳಕೇ ಅದು?!
ಬೆಳಕಿಗೆ ಹೆದರಿ ಅವನಲಿ,
ಕರಗಿ ಹೋಗಬೇಕೆಂಬಷ್ಟರಲಿ,
ಅವನೊಂದಿಗೆ ಬೆಳಕೂ ಮಾಯ!

ಮಾತಿಲ್ಲದೆ ತೊರೆದು ಹೋದದ್ದು
ಅದಾರಿಗಾಗೋ, ಅದಾವ ಭಾವ ಹೊತ್ತೋ?
ತಿರಸ್ಕಾರವೋ ಸಾಕ್ಷಾತ್ಕಾರವೋ,
ಮುಜುಗರವೋ, ಸಡಗರವೋ,
ಸ್ಥಿತಪ್ರಜ್ಞೆಯೋ, ಪಾಪಪ್ರಜ್ಞೆಯೋ
ಅರಿಯದೇ ನಿಂತಿಹಳು,
ಅದೇ ಒಲುಮೆಯ ಕುಲುಮೆಯೊಳು!
ಕಾಪಿಡಲಾಗದೆ ಜಾರಿಹೋದರೂ,
ಮರೆಯಲಾಗದ ಅಮೃತಘಳಿಗೆಯ
ಮೂಕವಿಸ್ಮಿತ ಸಾಕ್ಷಿಯಾಗಿ.

ಕಾಣದ ಕನಸುಗಳೆಷ್ಟೋ ಕೈಗೂಡಿತ್ತು!
ಆದರಿಂದು ಆಕೆಗೆ ನನಸೇ ಕನಸಾಗಿತ್ತು!

Monday, 18 August 2014

ಮಗುವಿನ ನಗು




ಕಂದನದು ಮನೆಯೊಳಗೆ
ಚಂದದಲಿ ನಲಿದಿರಲು
ಅಂಗಳಕೆ ಸಗ್ಗವದು ಇಳಿದಂತೆಯೇ.
ಮಗುವೊಂದು ತೊಟ್ಟಿಲಲಿ
ನಗುತಿರಲು ಕಿಲಕಿಲನೆ
ರಸಭರಿತ ಕಗ್ಗವನು ಕೇಳ್ದಂತೆಯೇ.

ಶಿಶುವಿನಭ್ಯಂಜನದಿ
ಮೃದುಮೈಯ ತಡವುತಿರೆ
ರೇಶಿಮೆಯ ಮಗ್ಗದಲಿ ನೇಯ್ದಂತೆಯೇ.
ತಾಯ್ಮಡಿಲ ಸೆರಗಿನಲಿ
ಮುಗ್ಧತೆಯ ಬೆರಗಿನಲಿ
ಪರಮಸುಖ ಅಗ್ಗದಲಿ ಸಿಕ್ಕಂತೆಯೇ.

ಜಾತಿಹರಯವ ಮರೆಸಿ
ಹರ್ಷವನೆ ಹರಡಿಸುವ,
ಸೌಹಾರ್ದದ ಮೊಗವನರಿಯೋಣವೇ?
ದ್ವೇಷವನು ಕರಗಿಸುವ
ನಿರ್ಮಲತೆಯ ಮುದದೊಳು
ಸಾಮರಸ್ಯದ ಸೊಗವನೋಡೋಣವೇ?

Thursday, 31 July 2014

ರಸಸಂಜೆ


ಕರಿಮುಗಿಲ ತೆರೆಯಿಂದ
ಇಣುಕುವಾ ರವಿಯಿಂದು
ಜರತಾರಿ ಸೀರೆಯನು ನೇಯುತಿಹನು
ಸಂಜೆಯಲಿ ನಡೆಯುತಿಹ
ಕುಸುರಿ ಕೆಲಸವ ನೋಡಿ
ಸಂತಸದಿ ಭೂತಾಯಿ ನಲಿಯುತಿಹಳು

ಶ್ರಾವಣದ ಜಿನುಗಿನಲಿ
ಪನ್ನೀರ ಹನಿಹೊತ್ತು
ಅವನಿ ತಾ ಹಸಿರಾಗಿ ಹಾಡುತಿಹಳು
ಹಸಿರೆಲೆಯ ತೂಗಿಸುವ
ತನುಮನವ ಕಂಪಿಸುವ
ತಂಬೆಲರು ಹಿನ್ನೆಲೆಯ ನುಡಿಸುತಿಹುದು

ಕಳೆದ ರಸಸಂಜೆಗಳ
ನೆನಪುಗಳು ಮರುಕಳಿಸಿ
ಮಧುರತೆಯಲೀ ಜೀವ ತೇಲುತಿಹುದು
ನಿನ್ನೊಲವಿನಾಸರೆಯ
ನೆಲೆಯ ಬೇಡುತ ಮನವು
ಸುಂದರ ನಿಶೆಯಮಲಲಿ ಕರಗುತಿಹುದು

Tuesday, 29 July 2014

ನಕ್ಕು ಬಿಡಲೇ?! ಅತ್ತು ಕರೆಯಲೇ?!


ಒಲವಿನ ಮರಳ ಮನೆ ತನ್ನದೆಂದು ಮರುಳಾದೆ
ನಿಮಿಷದಲದು ಅಲೆಯೊಂದಿಗೆ ಸೇರೆ ಕ್ಷುಬ್ಧಳಾದೆ

ಮರುಗಾಡ ಬಿರುಬಿಸಿಲಲಿ ಹಸಿರಿನ ಹಿಂದೋಡಿದೆ
ಬರಿದೆ ಓಡಿಸುತಿರೆ ಮರೀಚಿಕೆಯೆಂದರಿತು ಕುಸಿದೆ

ಸಾಗರದಿ ಆಣಿಮುತ್ತ ಹುಡುಕಲಣಿಯಾಗಿ ನಡೆದೆ,
ಹೆದರಿಸಿದ ತಿಮಿಂಗಿಲವ ಕಂಡು ಆಸೆಯ ತೊರೆದೆ

ಬಿಳಿಬಾನಲಿ ಮಳೆಬಿಲ್ಲ ಬಣ್ಣ ಕಂಡೀತೆಂದು ಕುಳಿತೆ
ಪ್ರೀತಿಬಿಸಿಲ ತುಂತುರಲಿ ಮಾತ್ರವದೆಂದು ಮರೆತೆ

ಅಲ್ಲಿರದ ಭಾವಗಳನು ಹುಡುಕುತ್ತಾ ನಿರಾಶಳಾದೆ
ಕಂಡ ಆಭಾಸಗಳನು ನೆಚ್ಚಿಕೊಂಡೇ ಹತಾಶಳಾದೆ

ಕಸಿವಿಸಿಯ ಕಹಿ, ಬುದ್ಧಿಮತ್ತನಂತೆ ಮೆರೆದ ಮನಕೆ
ನೆಲ ಕಚ್ಚಿದರೂ ಸೋಲೊಪ್ಪಲು ಬಯಸದ ಬಯಕೆ

ಬಿಗಿದ ಕದವ ಬಡಿದಿದ್ದೆಂದು ನಕ್ಕು ಹಗುರಾಗಲಾರೆ
ಬರಡು ಮನಕೆ ಬಿಚ್ಚಿಟ್ಟೆನೆಂದು ಬಿಕ್ಕಿ ಮರೆಯಲಾರೆ

Thursday, 24 July 2014

ನಾನೆಂತು ಮರೆಯಲಿ?!



ನಾ ನಿನ್ನ ಕೇಳಲಾರೆ ನನ್ನ ನೆನಪಿದೆಯೇ ಎಂದು
ನೆನಪಿದ್ದೂ ಮಾತಾಡದಿರುವ ಮನಸಲ್ಲ ನಿಂದು!

ನಾ ನಿನ್ನ ಮನದಲಿಲ್ಲ ಎಂಬ ಕೊರಗಿಲ್ಲ ನನಗೆ,
ಯಾಚಿಸಲು ಪ್ರೀತಿ ಭಿಕ್ಷೆಯಲ್ಲ ಗೊತ್ತದು ನಿನಗೆ!

ನನ್ನೆದೆಯಲಿ ನಿನ್ನ ಕಟ್ಟಿಹಾಕಿ ಗೋಗರೆಯಲಾರೆ,
ಒಲವು ಬಂಧವಲ್ಲವೆಂಬುದ ನಾ ಮರೆಯಲಾರೆ!

ನನ್ನ ಮರೆತು ಬದುಕುವ ಹಕ್ಕೆಂದಿಗೂ ನಿನಗಿದೆ.
ನಿನ್ನ ಪ್ರೇಮದ ಕಂಪು ನನ್ನಲಿನ್ನೂ ಹಸಿಯಾಗಿದೆ!