Tuesday, 22 July 2014

ಸಂತನಾಗು ಸಂತೆಯಲಿ!



ಭಾವಸಂತೆಯಲಿ ಭಾವ ಬಿಕರಿಯ ಅಹವಾಲು
ಬಿರುಸಲಿ ನಡೆದರೂ ಇಹರಾರೂ ಖರೀದಿಸಲು
ಕಾದಿಹರಿಲ್ಲಿ ತಂತಮ್ಮ ನೋವ ಮಾರಿಕೊಳಲು
ಆಸೆ, ಸಿಗುವುದೇ ಹೆಗಲೊಂದು ತಲೆಯಿಡಲು!

ಸುಖಾಸುಮ್ಮನೆ ಆಗದಿರು ನೀ ಬಟ್ಟಂಬಯಲು,
ನಗೆವಸ್ತುವಾಗದಿರು, ಹೇಳಿ ಎಲ್ಲೆಡೆ ನಿನ್ನಳಲು
ಬರಿದೆ ಕಾಯುತಿಹರು ನೀ ಹೇಳಿ ಮುಗಿಸಲು,
ತಲೆ ಸವರುವ ಮುನ್ನ ತಮ್ಮೊಡಲ ಬಿಚ್ಚಿಡಲು!

ಹಾಳೆಗೆ ಹಾಯಿಸು ಎದೆಕಟ್ಟೊಡೆದು ಹರಿಯಲು
ಭಾವಪಾತಕೆ ಮೆಚ್ಚುಗೆ ಚಪ್ಪಾಳೆ ಖಚಿತವಿರಲು,
ಹಂಚಿ ಹರಿಸುವುದೇತಕೆ, ತೃಷೆಯೇ ಇರದಿರಲು.

ಇರಲೆಂದೂ ನಿನ್ನೆವೆಯಾರ್ದ್ರತೆ ನಿನ್ನದೇ ಪಾಲು!

ಪಶುವ ನೋಡಿ ತಿಳಿ ಮೌನದಿ ನೋವ ಮೆಲ್ಲಲು
ಹಕ್ಕಿಯಂತೆ ಗಾಳಿಯಲಿ ಕಣ್ಣಾಲಿಯನೊಣಗಿಸಲು
ಬಿಕ್ಕಿ ಅಳಲ ತೊಳೆದು ತೊಡಗು ನಗು ಹರಡಲು,
ಚಿಪ್ಪೊಳು ಸ್ವಾತಿಮುತ್ತಾಗಲಿ ಜತೆ ಸೇರಿ ಮಳಲು!

Tuesday, 8 July 2014

ಅಂತರಂಗದ ಸಂಗ!


ಸುತ್ತ ಕಿಕ್ಕಿರಿದಿರೆ ಬೇಡವೆಂಬಾಗ,
ಸನಿಹವಾರು ಇಲ್ಲ ಬೇಕೆನ್ನುವಾಗ
ಹಗಲಿರುಳು ಕಳೆಯುತಿರೆ ಸರಾಗ
ಒಂಟಿಯಾಗಿದೆಯೆನ್ನ ಮೌನರಾಗ

ಒಳದನಿ ಕುಗ್ಗಿ ಅಡಗುತಿರುವಾಗ
ಛಂಗನೆದುರು ಹಾರಿದೆ ನೀನಾಗ!
ಬೆರಗಾಗಿ ಅರೆಕ್ಷಣ ನೋಡಲಾಗ,
ನನ ರೂಪ ನೀ ತಾಳಿ ನಲಿವಾಗ!

ಈ ಮುನಿಸನರಿಯಬಲ್ಲೆ ನಾನೀಗ
ಮರೆತಿದ್ದೆ ನಾ ಸುಖದಿ ಮೆರೆದಾಗ
ನಿನ್ನ ನೆನಪಿಲ್ಲ ಕೊರಗಿ ಬಿಕ್ಕುವಾಗ
ಬಳಿಯೇ ನಿಂದು ಸವರಿದ್ದೆಯಾಗ!

ಅರಿತೆನಿಂದು ಅಂತರಾತ್ಮದ ಕೂಗ,
ಕ್ಷಣಿಕ, ಚಿರವಲ್ಲ ಜಗದಿ ಅನುರಾಗ,
ನನಗೆ ನಾನೇ ಅಂತರಂಗದ ಸಂಗ,
ಭವಸಾಗರವ ದಾಟಿಸುವ ಅಂಬಿಗ!

Wednesday, 2 July 2014

ಭಲೇ ಬದುಕು!


ಮತ್ತದೇ ಜತನ, ಅದೇ ದಿನದಾಗುಹೋಗು
ನೋವ ಮಾಚಿಟ್ಟು ನಗುವ ಮೆರೆವ ಸೋಗು
ಬೇಕುಗಳ ಬಿಟ್ಟು ಬೇರೆಲ್ಲ ದೊರೆತ ಕೊರಗು
ಬೇಕುಗಳಿಗೆ ಸತತ ತುಡಿವ ಪರಿಯ ಬೆರಗು!

ಎದ್ದೆ ಎನ್ನುವಷ್ಟರಲಿ ಮತ್ತೊಂದು ಮೊಟಕು,
ಬೆರೆಯುವ ಮುನ್ನವೇ ಬೇರಾಗುವ ಅಳುಕು
ಕಂಡೊಡನೆ ಮಿಂಚಿ ಮರೆಯಾಗುವ ಬೆಳಕು
ಬೀಗಿಸಿ ಬೀಳಿಸಿ ಅಳಿಸಿ ತಾ ನಗುವ ಬದುಕು!

ಎಡವಿಸಲೆಂದೇ ಕಾಯುವ ಸೆಳೆತದ ಬುರುಗು
ದಿನವೂ ಕಣ್ಣು-ಮುಚ್ಚಾಲೆಯಾಟದ ಸೊಬಗು!
ಅನತಿ ದೂರದಲಿ, ಮಾಯಾಜಿಂಕೆಯ ಕೂಗು
ಸುಖ-ದು:ಖಗಳ ಕೋರೈಸುವ ಕತ್ತಿಯಲಗು!

Wednesday, 25 June 2014

ಮನಮಂದಿರ


ಎದೆಯಳೊಂದು ಮೂರ್ತಿ ಕೆತ್ತಿ
ಮನವ ಸೆಳೆದ ರೂಪ ನೀಡಿ
ಪ್ರೇಮ ಕಲಶವಿಟ್ಟೆನು.

ನವನವೀನ ಭಾವ ತುಂಬಿ
ಪ್ರೀತಿಸುಮದ ಹಾರವಿತ್ತು
ನೆಚ್ಚ ಪೂಜೆ ಗೈದೆನು.

ಮನದ ಹೊಗೆಯ ಹೊರಗೆ ತೂರಿ
ಒಲುಮೆ ಗಾಳಿಯಾಡಲೆಂದು
ತೆರೆದ ಬಾಗಿಲಿಟ್ಟೆನು.

ಮಮತೆ ಹಣತೆಯಲ್ಲಿ ಹಚ್ಚಿ,
ಸೊಗದ ಶರಧಿಯಲ್ಲಿ ಮಿಂದು,
ಮೆಚ್ಚಿ ತಪವ ಗೈದೆನು.

ದ್ವೇಷ ಮರೆಸಿ ಸ್ನೇಹ ಬೆಳೆಸಿ
ಸತತ ಬಿಡದೆ ಸಕಲ ಮನದೆ,
ಒಲವ ಧ್ಯಾನ ನಡೆಯಲಿ.

Tuesday, 20 May 2014

ಆಗಲೇಬೇಕಿದೆ!


ಧಗೆಯಲಿ ಬುವಿಯ ಬಾಯಾರಿರೆ,
ಸರಿಯಬೇಕಿದೆ ಆದಾನದ ನೆನಪು
ವಸಂತನಾಟದಿ ಸುಮ ನಲುಗಿರೆ,
ಹರಿಯಬೇಕಿದೆ ವರುಣನ ಛಾಪು.

ಜಾಡ್ಯದಿ ಕಾಲ್ಗಳು ಕುಸಿಯುತಿರೆ,
ಬೇಕಿದೆ ತಮ:ಶಮನದ ಹುರುಪು
ಹತಾಶೆಯ ಸುಳಿಯಲಿ ಸಿಲುಕಿರೆ,
ಹರಡಬೇಕಿದೆ ಸತ್ವದ ಹೊಳಪು.

ಬಂಧಗಳ ಬೆಸುಗೆ ಸವೆಯುತಿರೆ,
ಎರೆಯಬೇಕಿದೆ, ಎರಕದ ಬಿಸುಪು.
ನಂಟುಗಳ ಅಂಟಿಂದು ಒಣಗುತಿರೆ,
ಬೆರೆಯಬೇಕಿದೆ, ಒಲವಿನ ಒನಪು.

Friday, 9 May 2014

ಆನಂದಮಯ ಬೆಳಗು!




ಇಂದಿನ ಬೆಳಗು ಸ್ತಬ್ಧ! ಹಕ್ಕಿ ಹಾಡುವುದ ಮರೆತು,
ಜಿನುಗು ಮಳೆ, ತೀಡುವ ತಂಗಾಳಿಗೆ ಮೈಮರೆತು,
ತನು ಮನ ನವಿರೇಳಿಸುವ ಈ ಆಹ್ಲಾದಕೆ ಸೋತು,
ಜೀವರಾಶಿಗಳಿದ ಅನುಭವಿಸುತಿವೆ ತಣ್ಣನೆ ಕುಳಿತು.

ನಿಲ್ಲೆ, ಹಸಿರ ತಂಬೆಲರ ಸಲ್ಲಾಪಕೆ ಮನ ಜೋತು
ಸಾಗಿದೆಯೊಡನೆ ನೆನಪಿನ ಬೋಗಿಯಲಿ ಕುಳಿತು,
ಮಸುಕಲೂ ಮಾಸದ ಹಾದಿಯೆಡೆ ಅಚ್ಚರಿಯೆನಿತು
ಹಚ್ಚ ಹಸಿರಾಗಿ ನಡೆಸಿವೆ ಎಲ್ಲವೂ ಮೂಕಮಾತು!

ಹಾಯ್ದು ಬಂದ ದಾರಿ
ಸ್ಪಷ್ಟ, ತಪ್ಪಿದ ಗತಿಯೆನಿತು!
ಅಲ್ಲೇ ಕಣ್ಮಿಟುಕಿಸುತಿವೆ ಕೈಗೂಡದ ಆಸೆಗಳವಿತು,
ವಿರಮಿಸಿವೆ ಸುಮ್ಮನೆ ತಮ್ಮೆಲ್ಲ ಕಲಹಗಳ ಮರೆತು.
ಗಾಢ ನೀರವ ಶಾಂತ ಭಾವ ನನಗಿಂದು ಹೊಸತು!

ಸುಡುವ ಧರೆಯ ಕಾವಿಗಾಗಿರಲು ಮಳೆಹನಿಗಳಿನಿತು
ಪ್ರಕ್ಷುಬ್ಧ ಮನ ಶಾಂತವಾಗದೇ ಪನ್ನೀರಿನಲಿ ಬೆರೆತು?
ಭಾವವೈರುಧ್ಯಗಳಲೂ ಏಕತಾನದ ಪರಿಯ ಕಲಿತು,
ಶಾಂತಚಿತ್ತದಿ ನಲಿದೆ ನಿಸರ್ಗ ಕಲಿಸಿದ ಪಾಠವರಿತು!

Tuesday, 1 April 2014

ಭಾವಬಂಧಿ

ನನ್ನ ತೈಲಚಿತ್ರ
ಭಾವಬಂಧಿ
------------
ಭಾವ ಬಂಧಿಗಳು ನಾವೀ ಜಗದಲಿ,
ಪ್ರತಿಭಾವಕಿತ್ತ ಆ ರೂಪದ ಹಂಗಲಿ,
ನಾವೇ ಹೆಣೆದಿಟ್ಟ ಭಾವಹಂದರದಲಿ,
ತೊರೆಯಲಾಗದ ಭಾವಪಂಜರದಲಿ.

ಶುಚಿರ್ಪಾವಿತ್ರ್ಯ ಹೊತ್ತ ದೈವ ಭಾವ
ವಾತ್ಸಲ್ಯ ಪ್ರೇಮರೂಪಿ ಮಾತೃಭಾವ
ಅನುರಾಗ ಧಾರೆಯೆರೆವ ಪ್ರಿಯಭಾವ
ರೋಷಕುಸಿರ ತುಂಬುವ ದುಷ್ಟಭಾವ

ಬಂಧ ಹೊಸೆ-ಬೆಸೆದು ಮೆರೆವ ಭಾವ
ಮುದುಡಿಸಿ ಓಲೈಸಿ ನಲಿಸುವ ಭಾವ,
ಶೈಶವ ಮುಗ್ಧತೆಯಲಿ ತಲ್ಲೀನಭಾವ
ಸಾಮರಸ್ಯವ ಹೀರುವ ವಿಕೃತ ಭಾವ

ರಾಧೆಯ ಕೃಷ್ಣನಲ್ಲ ಮೀರೆಯ ಭಾವ
ಮೀರೆಯ ಪ್ರಭುವಲ್ಲ ರಾಧೆಯ ಭಾವ
ಜಗಕೆ ಶಿವನಿರೆ ಮಂಗಲ ಶಿವಂಭಾವ
ತಾಂಡವವಾಡೆ ದಕ್ಷನಿಗೆ ರೌದ್ರಭಾವ

ನಾವೋ ಈ ಭಾವಪೈರಿನ ತೆನೆಗಳು,
ಅದರಲೆಯುಬ್ಬರ ಇಳಿತದಿ ನಾವೆಗಳು
ಭಾವಸೂತ್ರದಾಟದ ಬರಿ ಪುತ್ಥಳಿಗಳು,
ಭಾವಸೆಲೆಯ ಜಿನುಗುವ ಒರತೆಗಳು.