Thursday, 22 November 2012

ಕವಿಯ ಛವಿ!

ಭಲೇ! ರವಿ ಕಾಣದ್ದು ಕವಿ ಕಂಡ,
ಸಂತೋಷದಲೂ ನೋವ ಕಂಡ!
ಸಾಲ್ಗಳ ಮಧ್ಯೆ ಪದವ ಹುಡುಕಿದ
ಅರಿಯದ ಗಂಟ ಬಿಡಿಸಲು ನಿಂತ!

ಮೌನದಲಡಗಿದ್ದ ಮಾತ ಹೆಕ್ಕಿದ,
ಮಾತಲಿಹ ಮೌನವ ವಿಶ್ಲೇಷಿಸಿದ.
ಮುಖದಿ ಮುಖವಾಡವ ಹುಡುಕಿದ,
ಕಸದಲೂ ರಸ ತೆಗೆಯಲು ನಿಂತ!

ಬಾಳಘಟ್ಟಗಳನು ಜೀವಂತವಿರಿಸಿದ,
ನೆನಪ ಸಂತೆಯಲಿ ಕೊರಗಿ ನಲಿದ!
ಸುಖದಲೂ ಗತಸವಿಯ ಹುಡುಕಿದ,
ಗುಂಪಲೂ ಏಕಾಂಗಿಯಾಗಿ ನಿಂತ!

ಕಪ್ಪು ಬಿಳುಪಲೂ ಮಳೆಬಿಲ್ಲ ಕಂಡ,
ಬರಡು ನೆಲದೆ ತುಡಿವ ಜೀವ ಕಂಡ!
ದು:ಖದಲೂ ನಗುವ ಬಗೆಯನರಿತ,
ಅರಿಯಲು, ಬದುಕ ಹೊರಗೆ ನಿಂತ!

ನಿಸರ್ಗದ ವಿಸ್ಮಯಗಳನಲಂಕರಿಸಿದ,
ನಿಸ್ತೇಜ ಗೋಡೆಗೂ ಜೀವ ತುಂಬಿದ!
ಭವದ ಭಾವಗಳನೆಲ್ಲ ಹಾಳೆಗೆ ಎರೆದ,
ಮಸಿಯ ಮತ್ತಲಿ ಜಗಮರೆತು ನಿಂತ!

Monday, 19 November 2012

ನಾನೂ ಆದೆನೊಂದು ಕ್ರೀಡಾಪಟು!


ಮೆಲ್ಲನೆ ಬೊಜ್ಜು ಸೇರಿತು ಹರೆಯ ಇಳಿದಂತೆ,
ಜೊತೆಗೆ ಬಿ.ಪಿ. ಏರಿತು ಒತ್ತಡ ಬೆಳೆದಂತೆ!
ಅರಿತೆ ಹೃದಯ ನಲುಗೀತು ತೂಕ ಏರಿದಂತೆ,
ದಿನಚರಿ ಬದಲಿಸುವ ಸಮಯವೆಂಬ ಚಿಂತೆ!

ಮುಂಜಾವಿನ ಮಂಪರು ವ್ಯಾಯಾಮಕ್ಕೆ ಬಿಡದು,
ಸಂಸಾರ, ಕೆಲಸದೊತ್ತಡ ಸಮಯ ಕೊಡದು.
ನುಸುಳಿತು ಪತಿಸಲಹೆ ’ಗಾಲ್ಫ್’ ಕಲಿಯೆಂದು.
ಗಾಳಿಗೆ ತೂರಿದೆ ಒಡನೆ, ಮುದುಕರಾಟವೆಂದು.
ನಿಕೋಲಳ ರೂಪ ಅಂತು ಯಾಕಾಗಬಾರದೆಂದು!

ಪರಿಕರಣದ ಮೂಟೆ ಹೊತ್ತು ನಡೆದೆ ಕೋರ್ಸಿಗೆ,
ಏಳು ಐರನ್ ಕ್ಲಬ್ ಎತ್ತಿಬೀಸಿದೆ ಪುಟ್ಟ ಬಿಳಿಚೆಂಡಿಗೆ,
ಗಾಳಿ ಸೀಳಿ ಹಾರಲು, ಕಣ್ಣಗಲಿಸಿದೆ ಚೆಂಡಿನೆಡೆಗೆ
ಸುತ್ತಲೂ ಹಸಿರು ಸಿರಿ, ಕಾಲಡಿ ಹುಲ್ಲಿನ ಹಾಸಿಗೆ,
ನೀರಚಿಲುಮೆ ದಾಟಿ ಮತ್ತೆ ಬೀಸಿದೆ ಗುರಿಯ ಕಡೆಗೆ
ಹರ್ಷಿಸಿದೆ ’ಪಾರ್’ ಕೂಗಿಗೆ ಚೆಂಡು ಬಿದ್ದಾಗ ಗುಳಿಗೆ!

ಶುಭ್ರ ಸ್ವಚ್ಛ ತಂಬೆಲರು ನಿದ್ದೆಯ ಮಂಪರನೋಡಿಸಿತು.
’ಗಾಲ್ಫ್’ ಕ್ಷಣದಲಿ ಈ ನಿಸರ್ಗಪ್ರೇಮಿಗೆ ಸನಿಹವಾಯ್ತು.
ಜೊತೆ ಬೇಡದ, ಪ್ರಾಯ ನೋಡದ ಆಟ ಮುದನೀಡಿತು.

ನಾನೂ ಆದೆ ಕ್ರೀಡಾಪಟು’ಎನಿಸೆ ಸಂತಸ ಇಮ್ಮಡಿಸಿತು!

ಗೊತ್ತಿಲ್ಲದಿದ್ದವರಿಗೆ: ನಿಕೋಲ್-ಭಾರತದ ಉತ್ತಮ ಗಾಲ್ಫ್ ಆಟಗಾತಿ. ಸುಂದರಿ ಕೂಡಾ! ಏಳು ಐರನ್- ಗಾಲ್ಫ್ ಆಡುವ ಕೋಲಲ್ಲಿ ಒಂದು. ಪಾರ್-ಒಂದು ಗುಳಿ ಮುಗಿಸಲು ನಿಗದಿಸಿದ ನಿರ್ದಿಷ್ಟ ಸಂಖ್ಯೆ.

Tuesday, 30 October 2012

ಇಂದು ಎಂದೆಂದೂ!



ನಾಳೆ ಅನೂಹ್ಯನಿಗೂಢ ಇಂದು ಸುಂದರ
ಅತ್ತಿಹಣ್ಣಿನ ರೂಪದಂದದಿ ನಾಳೆ ನಶ್ವರ!
ಇಂದು ನಂದು! ನಾಳೆ ಸಿಕ್ಕರೆ ಉಪಕಾರ!
ತೃಪ್ತಿಯಲಿಂದನು ಕಳೆಯೆ ನೀ ಸರದಾರ!

ನಾಳಿನ ಚಿಂತೆ ನಾಳೆಯನು ಬದಲಿಸದು,
ನಾಳೆಯ ಭೀತಿ ಇಂದನು ಮರೆಸುವುದು.
ಮೌಢ್ಯವದು ನಾಳೆಗೆಂದು ಬದುಕುವುದು,
ಕಾಣದ ನಾಳೆಗೆ ಇಂದನು ಕೊಲ್ಲುವುದು!

ನಿನ್ನೆನಾಳೆಗಳಲಿ ಇಂದನು ಸೊರಗಿಸದಿರಿ
ಭೂತಕಾಲದಲಿ ಭೂತವಾಗಿ ಕೊರಗದಿರಿ!
ನಾಳಿನ ಭಯದಲಿ ಬೆಂಡಾಗಿ ಹೆಣಗದಿರಿ,
ಇಂದಿನ ರಮ್ಯತೆಯ ಜೀವಿಸಿ ನಲಿಯಿರಿ.

ಜ್ವಲಂತ ನೆನಪುಗಳು ಇಂದನು ಸುಡದಿರಲಿ
ನೆನಪಿನಗೋರಿಯಡಿ ಜೀವ ಶವವಾಗದಿರಲಿ
ನಾಳೆಗಾಗಿ ಮನಸ್ಥೈರ್ಯ, ಕನಸುಗಳಿರಲಿ!

ಕೈಜಾರುವ ಮುನ್ನ ಇಂದನು ಮರೆಯದಿರಿ!

Thursday, 11 October 2012

ಕನಸು-ಮನಸು (ದ್ವಂದ್ವ)



ಕನಸಿಗೆಂದೂ ಉಲ್ಲಾಸದ ಸೊಗಸು,
ಮನಸಿಗಿದ ಕಂಡು ಸದಾ ಮುನಿಸು!
ದೇಹಕಿಬ್ಬದಿಯಲಿ ಇರಿಸು ಮುರಿಸು,
ಮೂಕನಾಗಿಹ ನಾ ಬರೀ ಜಿಜ್ಞಾಸು!

ಕನಸಲಿ ಗರಿಬಿಚ್ಚಿ ಸ್ವಚ್ಛಂದದ ನೃತ್ಯ,
ಹಂಗಿಲ್ಲದ ಜಗದಿ ಸುಖದ ಅಧಿಪತ್ಯ.
ಮನಸಿನಲಿ ನೂರು ಮುಖದ ದೈತ್ಯ,
ಬಿಗಿಹೆಚ್ಚಿಸಲು ಭವಬಂಧನದ ದಾಸ್ಯ.

ಕನಸಿಗೆ ಕಡಿವಾಣವನಿಡುವ ಬೇಡಿಕೆ,
ನಡೆಸಿ ಸಾಕಾರರೂಪಿ ಕನಸ ಆರೈಕೆ.

ವರ್ತುಲದಿ ರಹದಾರಿಯೆಳೆವ ಬಯಕೆ,
ದ್ವಂದ್ವತುಮುಲಕೆ ವಿರಾಮ ಹಾರೈಕೆ!

Tuesday, 18 September 2012

ಅಂದು-ಇಂದು

ಚಿತ್ರ: ಗೂಗಲ್ ಕೃಪೆ

ಮನೆಯಾಗಿತ್ತಂದು ನಲಿವ ನಂದನವನ,
ಬದುಕಾಗಿತ್ತು ಸರಾಗ ಸುಮಧುರ ಗಾನ
ಅಪ್ಪ ಅಮ್ಮ ತೋರಿದ್ದರು ಶಾಂತಮನ,
ಅಧೈರ್ಯ ಅಸ್ಥಿರತೆಯಿಲ್ಲದ ಆಲಾಪನ

ಇಂದೋ ಜಟಿಲ ಪ್ರಕ್ಷುಬ್ಧ ಎಲ್ಲರ ಮನ,
ಅಶಾಂತ, ಅತಂತ್ರ ಜೀವನದ ಅಧೀನ!
ಅಳುಕು ಥಳುಕು ನಡೆಯ ಕೃತಕ ಯಾನ
ರಾರಾಜಿಸುತಿದೆ ಇಲ್ಲಿ ಮೌಲ್ಯಗಳ ಪತನ!

ತರುತಿತ್ತಂದು ಹರುಷ ಅತಿಥಿಗಳಾಗಮನ
ಬೆರೆತು ನಲಿಯಲು ಬೇಕಿರಲಿಲ್ಲ ಆಹ್ವಾನ
ಕಂಡು ನೆರೆ, ಹೊರೆಗಾಗಿ ಬಂದ ವಿಧಾನ,                       
ನೀತಿಪಾಠವನರುಹುತಿತ್ತು ಅಪ್ಪನ ಜೀವನ!

ನೆಮ್ಮದಿಗೆ ನೀಡಿತ್ತು ಮನೆಯಂದು ಆಶ್ರಯ
ಬರಿ ತುಮುಲಗಳ ಬೀಡು ಇಂದೀ ಆಲಯ
ಚಿಣ್ಣರಂಗಳದಿ ಆ ಮನೆಯೇ ಮಂತ್ರಾಲಯ
ಪಾಳುಬಿದ್ದ ಈ ಮನೆಯೋ ಯಂತ್ರಾಲಯ!

ಆಗ-ಈಗ


ಚಿತ್ರ: ಗೂಗಲ್ ಕೃಪೆ

ಬಂಧುಗಳ ಜತೆಯಾಗ ನಕ್ಕು ನಲಿಯುತಿರೆ,
ಹಣದಿಂದ ಸಂತಸವೆಂದು ಕೇಳರಿಯದಿರೆ,
ಗಂಜಿ ಮೊಸರನ್ನವೂ ಮೃಷ್ಟಾನ್ನ ಅನಿಸಿರೆ,
ಅಭಿವೃದ್ಧಿಯಲಿತ್ತು ಸಹೃದಯತೆಯ ಮುದ್ರೆ!

ಅಭಿವೃದ್ಧಿಯು ಈಗಂತೂ ಮನೆಮಾತು!
ವೃದ್ಧ ಹಣದ ಥೈಲಿ ಮಕ್ಕಳಿಗೂ ಗೊತ್ತು,
ದಿನದಿನಕೆ ವರ್ಧಿಸುತಿದೆ ದೇಹದ ಸುತ್ತು!
ರೋಗಗಳ ವೃದ್ಧಿ ತಂದೊಡ್ಡಿದೆ ವಿಪತ್ತು!

ಹಬ್ಬಹರಿದಿನದಿ ಆಗ ಹರ್ಷದಿ ಗಡಿಬಿಡಿ,
ಈಗೋ ಪ್ರತಿದಿನ ಎಲ್ಲರಿಗೂ ಗಡಿಬಿಡಿ!
ಹಲವು ದಿಕ್ಕಲಿ ಸಂಸಾರವೇ ಬಿಡಿಬಿಡಿ!
ಜೀವನವೇ ಸುಸ್ತು, ಯಾಂತ್ರಿಕ ಭರದಡಿ!

ಮನೆಗೊಂದು ಮಗುವೂ ಕಷ್ಟದಲಿ ವರದಿ,
ಆದರೂ ಕೂಗಾಟ-ಜನಸಂಖ್ಯೆಯ ವೃದ್ಧಿ!
ಕಾರುಗಳ ಜತೆ ಬಡವನ ಗೋಳೂ ವೃದ್ಧಿ
ನಮ್ಮ ಸಂಬಂಧಗಳ ಅಂತರದಲೂ ವೃದ್ಧಿ!

ಭವ್ಯ ಮೌಲ್ಯಗಳ ಮನೆಯಾಗ ತೀರ್ಥಕ್ಷೇತ್ರ
ನವ್ಯತೆಯ ಗುಂಗಿನ ಮನೆಯೀಗ ಕುರುಕ್ಷೇತ್ರ!


Friday, 7 September 2012

ಗುಪ್ತ ಗಾಮಿನಿ!

ಚಿತ್ರ: ಗೂಗಲ್ ಕೃಪೆ

ಆಂತರ್ಯದೊಳ ನೋಡಲು, ಮೆತ್ತಿದ ಪಾಚಿ,
ಅಣಕಿಸಿದೆ ಒಡಲನೊತ್ತಿದ ಕೊಳೆ ಮೇಲೆರಚಿ,
ಸಮ್ಮಾನಕಂಜಿ ಅಡಗಿ ಕುಳಿತಿದೆ ಎದೆಯವುಚಿ
ತೊಳೆಯದಿರೆ ಸಪ್ಪೆಯಾಗಿದೆ ಜಗದ ಸವಿರುಚಿ!

ನೀನರಿವೆ ನೀನಲ್ಲ, ಈ ಲೋಕ ಕಾಣುವ ರೂಪ!
ಒಂಟಿಯಾಗಿ ರೋದಿಸುತಿದೆ ಅನಿಸೆ ತಾನತ್ಯಲ್ಪ,
ಮೇಲೇರಿದಂತೆ ಸಾಧನಾಶಿಖರಶೃಂಗ ಲೋಪ!
ಸಾಧಿಸುವ ಹಂಬಲಕೆ ಅನಿವಾರ್ಯತೆಯ ಲೇಪ!

ಗೆಲುವಲೂ ಮನವ ಕಾಡುವ ಪಕ್ವತೆಯ ಆಕಾಂಕ್ಷೆ,
ತೊಳೆದಂತೆ ಚಿಗುರುವ ಪಾಚಿಯೆದುರು ಸಮೀಕ್ಷೆ,
ಅನವರತ ಶೋಧನೆಯಲೇ ಉತ್ತುಂಗದ ನಿರೀಕ್ಷೆ,
ಅಸ್ಪಷ್ಟತೆಯಲೇ ಮುನ್ನುಗ್ಗಿ ಬೆಳಕ ಕಾಂಬ ಅಪೇಕ್ಷೆ!