ಹುಡುಕ ಹೊರಟಾಗ ಇಹದಿ ನನ್ನಿರುವಿನಗತ್ಯ,
ಅರಿತೆಯದಕ್ಕೂ ಮಿಗಿಲು, ನನ್ನಿರುವಿನ ಸತ್ಯ!
ಇರುವಿನ ಸಂಭ್ರಮವ ಬಿಟ್ಟು ಬೇರೆಲ್ಲ ಮಿಥ್ಯ.
ಕಾಣದ ನಾಳೆಯ ವ್ಯರ್ಥ ಚಿಂತೆಯಲ್ಲ ಪಥ್ಯ!
ಯಾರಿಗೂ ನೀಡಿಲ್ಲ ಜಗವ ಹೊರುವ ಕೆಲಸ
ಮತ್ತಾರೂ ಇತ್ತಿಲ್ಲ ಜಗವ ನಡೆಸುವ ಕೆಲಸ. 
ಸದಾ ಅರಿವಿರಲಿ, ಭಂಗುರವಿಲ್ಲಿ ಸಹವಾಸ,
ವೈಷಮ್ಯ ಗೆಲ್ಲದೆ ಮೆರೆಯುತಿರಲಿ ಸಮರಸ.
ಮಿದುಳಾಗದಿರಲಿ ಬರಿ ಗೊಡವೆಗಳ ಆಸ್ಥಾನ,
ವ್ಯಾಕುಲರಾಗಿ ಕಟ್ಟದಿರಿ ಚಿಂತೆಯ ಸಂಸ್ಥಾನ
ಗೊಂದಲ ಕ್ಷುಬ್ಧತೆಗಲ್ಲ ಈ ದೇಹ ವಾಸಸ್ಥಾನ
ನಿರಾಳಮನದಿಂದ ಸಾಗಲಿ ಹರ್ಷದ ಪ್ರಸ್ಥಾನ.
ಕಾರ್ಪಣ್ಯ ಕಾರ್ಮೋಡಗಳೇ ಮಳೆಗೆ ಆಧಾರ!
ಮಳೆಯನಾನಂದಿಸಲು ಅಸ್ತಿತ್ವವೇ ಸಹಕಾರ!
ಮಳೆಬೆನ್ನಿಗೆ ಸುಡುಬಿಸಿಲು ನಿಸರ್ಗದ ಆಕಾರ!
ಹಿಗ್ಗಿ ಕುಗ್ಗಿ ಬೀಳುತೇಳುವುದೇ ಬಾಳಿನ ಸಾರ!
ಗುರಿಯ ಬೆನ್ನಟ್ಟಿ ಹಲವರು ಬಾಳಲಿ ಕಂಗಾಲು. 
ತುದಿಯ ಕಾಣದೆ ಹೊತ್ತಿರೆ ಖಿನ್ನತೆಯ ಅಳಲು, 
ಇರುವಿನಂದದ ಎದಿರು ಅಂತ್ಯವೆಂತು ಮೇಲು?
ಕೊನೆಯದು ತೀರ, ಬದುಕು ಸಾಗರದ ಪಾಲು!  
 
 
 
            
        
          
        
          
        
ಪ್ರತಿ ಕ್ಷಣಗಳಾಗವೇ ಹೊಸತು,
ಸೇರಿರೆ ಮನದಿ ಸಂತಸವಿನಿತು!
ಪ್ರತಿಯಡಿ ನೀಡದೇ ಹೊಸದಾರಿ
ಹರಿದಿರೆ ಆತ್ಮ ವಿಶ್ವಾಸದ ಝರಿ!
ಪ್ರತಿನಗುವೀಯದೇ ನವಬಂಧು,
ಬೆರೆತಿರೆ ನಿರ್ಮಲಸ್ನೇಹ ಮಧು!
ಪ್ರತಿ ಮಾತಾಗದೇ ಹೊಸಕಾವ್ಯ
ತುಂಬಿರೆ ಪ್ರಬುದ್ಧ ಭಾವಲಾಸ್ಯ!
ಪ್ರತಿಕಿರಣ ಕಾಣದೇ ಹೊಸನಾಡು
ಭದ್ರಿಸಿರೆ ನಾಗರೀಕತೆಯ ಬೀಡು! 
ಪ್ರತಿ ನಿಮಿಷವೂ ಹೊಸ ಹರುಷ,
ಎಲ್ಲರಿಗೆ ತರಲೀ ಹೊಸ ವರುಷ!
ಸಮಸ್ತರಿಗೂ ಹೊಸ ವರ್ಷದ ಶುಭಾಶಯಗಳು.  
 
 
 
ಸಂತೋಷಿಸಿ, ಕುಣಿದು ಕುಪ್ಪಳಿಸಿ,
ರಕ್ತ ಮಾಂಸದ ಔತಣವಿಂದಿರಲಿ, 
ಮದ್ಯರಸದ ಹೊನಲಲಿ ತೇಲಾಡಿ, 
ವಿಜಯ ವೈಭೋಗ ಅನುಭವಿಸಿ,
ಭಾರತ ನಾರುತಿರುವುದ ನೋಡಿ. 
ಓ ದಾನವರೇ, ನಿಮ್ಮಿಚ್ಛೆಯಂತೆ,
ಮೆರೆಯುತಿದೆಯಿಲ್ಲಿ ಅರಾಜಕತೆ, 
ನಲಿಯುತಿದೆಯಿಲ್ಲಿ ಅನೈತಿಕತೆ,
ಹಾಸುಹೊಕ್ಕಿದೆ ಅನಾಗರೀಕತೆ,
ದೈವಶಕ್ತಿಯೀಗಂತೂ ದಂತಕತೆ!
ನ್ಯಾಯದೇವಿಯ ಕರುಳ ಹರಿದಿರೆ,
ರಕ್ಕಸಕುಲ ಅಟ್ಟಹಾಸಗೈಯುತಿರೆ, 
ಗೋಮುಖವ್ಯಾಘ್ರರು ಹೆಚ್ಚುತಿರೆ, 
ಅಮಾನುಷತ್ವ ಮಿತಿ ಮೀರುತಿರೆ,
ಅದೆಂದೋ ಸಮುದ್ರಮಥನದ ಕರೆ?
Note: ದೆಲ್ಲಿಯಲ್ಲಿ 29ರಂದು ದಾಮಿನಿಯ ದಾರುಣ ಸಾವಿನ ಸುದ್ದಿ ಕೇಳಿದಾಗ ಅತೀವ ನೋವಿನಲ್ಲಿ ಹೊರಹೊಮ್ಮಿದ ಸಾಲುಗಳಿವು. ಇವುಗಳು ಭಾರತದ ಬಗ್ಗೆ ತೋರಿದ ನಿಲುವಲ್ಲ. ಈ ಘಟನೆಯಿಂದ ಮನಸ್ಸು ಅತಿಯಾಗಿ ಘಾಸಿಗೊಂಡಿದ್ದರೂ ನನ್ನ ದೇಶಪ್ರೇಮಕ್ಕೆ ಧಕ್ಕೆ ತಂದಿಲ್ಲ. ಭಾರತದ ಭವಿಷ್ಯ ಉಜ್ವಲವಾಗಿದೆಯೆಂದು ಇಂದೂ ನಂಬಿದ್ದೇನೆ. ಆ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಲೂ ಇದ್ದೇನೆ.