Tuesday 1 April 2014

ಭಾವಬಂಧಿ

ನನ್ನ ತೈಲಚಿತ್ರ
ಭಾವಬಂಧಿ
------------
ಭಾವ ಬಂಧಿಗಳು ನಾವೀ ಜಗದಲಿ,
ಪ್ರತಿಭಾವಕಿತ್ತ ಆ ರೂಪದ ಹಂಗಲಿ,
ನಾವೇ ಹೆಣೆದಿಟ್ಟ ಭಾವಹಂದರದಲಿ,
ತೊರೆಯಲಾಗದ ಭಾವಪಂಜರದಲಿ.

ಶುಚಿರ್ಪಾವಿತ್ರ್ಯ ಹೊತ್ತ ದೈವ ಭಾವ
ವಾತ್ಸಲ್ಯ ಪ್ರೇಮರೂಪಿ ಮಾತೃಭಾವ
ಅನುರಾಗ ಧಾರೆಯೆರೆವ ಪ್ರಿಯಭಾವ
ರೋಷಕುಸಿರ ತುಂಬುವ ದುಷ್ಟಭಾವ

ಬಂಧ ಹೊಸೆ-ಬೆಸೆದು ಮೆರೆವ ಭಾವ
ಮುದುಡಿಸಿ ಓಲೈಸಿ ನಲಿಸುವ ಭಾವ,
ಶೈಶವ ಮುಗ್ಧತೆಯಲಿ ತಲ್ಲೀನಭಾವ
ಸಾಮರಸ್ಯವ ಹೀರುವ ವಿಕೃತ ಭಾವ

ರಾಧೆಯ ಕೃಷ್ಣನಲ್ಲ ಮೀರೆಯ ಭಾವ
ಮೀರೆಯ ಪ್ರಭುವಲ್ಲ ರಾಧೆಯ ಭಾವ
ಜಗಕೆ ಶಿವನಿರೆ ಮಂಗಲ ಶಿವಂಭಾವ
ತಾಂಡವವಾಡೆ ದಕ್ಷನಿಗೆ ರೌದ್ರಭಾವ

ನಾವೋ ಈ ಭಾವಪೈರಿನ ತೆನೆಗಳು,
ಅದರಲೆಯುಬ್ಬರ ಇಳಿತದಿ ನಾವೆಗಳು
ಭಾವಸೂತ್ರದಾಟದ ಬರಿ ಪುತ್ಥಳಿಗಳು,
ಭಾವಸೆಲೆಯ ಜಿನುಗುವ ಒರತೆಗಳು.



1 comment:

  1. ಭಾವಹಂದರದಲಿ ಸಿಕ್ಕಿ ಹಾಕಿಕೊಂಡ ಭಾವ ಬಂಧಿಗಳು ನಾವೀ ಜಗದಲಿ!
    ಎರಡು ಮಾತೇ ಇಲ್ಲ ನಿಮ್ಮ ಕವನದ ಹೂರಣಕ್ಕೆ.
    ನಮ್ಮೆಲ್ಲ ಮೋವುಗಳ - ನಲಿವುಗಳ ಮೂಲಧಾತುವೀ ಕಳ್ಳ ಭಾವ!

    ReplyDelete