Thursday 22 November 2012

ಕವಿಯ ಛವಿ!

ಭಲೇ! ರವಿ ಕಾಣದ್ದು ಕವಿ ಕಂಡ,
ಸಂತೋಷದಲೂ ನೋವ ಕಂಡ!
ಸಾಲ್ಗಳ ಮಧ್ಯೆ ಪದವ ಹುಡುಕಿದ
ಅರಿಯದ ಗಂಟ ಬಿಡಿಸಲು ನಿಂತ!

ಮೌನದಲಡಗಿದ್ದ ಮಾತ ಹೆಕ್ಕಿದ,
ಮಾತಲಿಹ ಮೌನವ ವಿಶ್ಲೇಷಿಸಿದ.
ಮುಖದಿ ಮುಖವಾಡವ ಹುಡುಕಿದ,
ಕಸದಲೂ ರಸ ತೆಗೆಯಲು ನಿಂತ!

ಬಾಳಘಟ್ಟಗಳನು ಜೀವಂತವಿರಿಸಿದ,
ನೆನಪ ಸಂತೆಯಲಿ ಕೊರಗಿ ನಲಿದ!
ಸುಖದಲೂ ಗತಸವಿಯ ಹುಡುಕಿದ,
ಗುಂಪಲೂ ಏಕಾಂಗಿಯಾಗಿ ನಿಂತ!

ಕಪ್ಪು ಬಿಳುಪಲೂ ಮಳೆಬಿಲ್ಲ ಕಂಡ,
ಬರಡು ನೆಲದೆ ತುಡಿವ ಜೀವ ಕಂಡ!
ದು:ಖದಲೂ ನಗುವ ಬಗೆಯನರಿತ,
ಅರಿಯಲು, ಬದುಕ ಹೊರಗೆ ನಿಂತ!

ನಿಸರ್ಗದ ವಿಸ್ಮಯಗಳನಲಂಕರಿಸಿದ,
ನಿಸ್ತೇಜ ಗೋಡೆಗೂ ಜೀವ ತುಂಬಿದ!
ಭವದ ಭಾವಗಳನೆಲ್ಲ ಹಾಳೆಗೆ ಎರೆದ,
ಮಸಿಯ ಮತ್ತಲಿ ಜಗಮರೆತು ನಿಂತ!

5 comments:

  1. ಛವಿ ಪ್ರಜ್ವಲಿಸುತಿದೆ ಇಲ್ಲಿ ಕವಿ ಮನದ ಕಲ್ಪನೆಗಳ ಹನಿ ಹನಿ ಬೆಳಕಲ್ಲಿ!

    ReplyDelete
  2. ಕವಿಯ ಭಾವಗಳನ್ನು, ಅವನ ಆಗುವಿಕೆಯನ್ನು ಸರಳ ಪದಗಳಲ್ಲಿ ಕಟ್ಟಿಕೊಟ್ಟಿದ್ದೀರಿ.. ನನ್ನ ಪದ ಕೋಷಕ್ಕೆ ಛವಿ ಎಂಬ ಪದವನ್ನು ಸೇರಿಸಿದ ಹೆಗ್ಗೆಳಿಗೆ ನಿಮ್ಮೀ ಕವನದ್ದು..:)

    ReplyDelete
  3. ನಮ್ಮ ಕವಿಗಳಿಗೆಲ್ಲ ಗೌರವ ತರುವ ರಚನೆ ಇದೆ. ನಮಗೆಲ್ಲ ನೀವು ಕೈಯಾರೆ ನೀಡಿದ ಪ್ರಶಸ್ತಿ ಪತ್ರವಿದು.

    ReplyDelete
  4. ellarigoo dhanyavaadagaLu

    ReplyDelete